Vasantotsava

ಸಂಭ್ರಮದ ಕನ್ನಡಿಗರುಯುಕೆಯ ವಸಂತೋತ್ಸವ

ಕನ್ನಡನಾಡಿನಿಂದ ದೂರ ಇರೋ ಕನ್ನಡಿಗರಿಗೆ ತಮ್ಮ ತಾಯ್ನುಡಿ ತಾಯ್ನೆಲದ ಜೊತೆಗೆ ಭಾವಾತ್ಮಕ ಸಂಬಂಧ ಉಳಿಸಿಕೊಳ್ಳೋದು ಹಾಗೂ ತಮ್ಮ ಮಕ್ಕಳು ಕೂಡ ಆ ನಂಟಿನಿಂದ ಕಳಚಿಕೊಳ್ಳದಂತೆ ಕಾಪಾಡುವುದು ಒಂದು ಸವಾಲಿನ ವಿಷಯವೇ ಸರಿ. ಹಾಗಾಗಿ ಹೊರನಾಡ ಕನ್ನಡಿಗರಿಗೆ ನಮ್ಮ ನಾಡಿನ ಉತ್ಸವಗಳು ಹಾಗೂ ಹಬ್ಬ ಹರಿದಿನಗಳನ್ನು ಆಚರಿಸುವುದು ಸಂಭ್ರಮವಷ್ಟೇ ಅಲ್ಲ ಅಗತ್ಯವೂ ಹೌದು. ಈ ಆಚರಣೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ  ಮೂಲಕ ಕನ್ನಡಿಗರುಯುಕೆ ಸಂಸ್ಥೆ ಬಹಳ ಆಸ್ಥೆಯಿಂದ ಆಂಗ್ಲನಾಡಿನ  ಕನ್ನಡ ಜನತೆಯನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. 
 
ಇದೇ  ಏಪ್ರಿಲ್ 14 ರಂದು ಕನ್ನಡಿಗರುಯುಕೆ ವತಿಯಿಂದ  ನಡೆದ ವಸಂತೋತ್ಸವ ಇಲ್ಲಿನ ಕನ್ನಡಿಗರಿಗೆ ಸಂಗೀತದ ರಸದೌತಣ ನೀಡಿತು. ಕನ್ನಡದ ಜನಪ್ರಿಯ ನಟಿ, ಗಾಯಕಿಯೂ ಆಗಿರುವ ಸುಮನ್ ನಗರ್ಕರ್, ವಿದುಷಿ ನಂದಿನಿ ರಾವ್ ಹಾಗೂ  Mrs ಇಂಡಿಯಾ ಗ್ಲೋಬ್ ಆದ ಕನ್ನಡತಿ ವೀಣಾ ಜೈನ್ ರವರ ಕಾರ್ಯಕ್ರಮಗಳು ಕನ್ನಡಿಗರ ಮನಸೂರೆಗೊಂಡಿತು.   ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದವರು ಅತಿಥಿ ಕಲಾವಿದರಾದ ನಂದಿನಿ ರಾವ್, ಸುಮನ್ ನಗರ್ಕರ್ ಹಾಗೂ ಕನ್ನಡಿಗರುಯುಕೆ ಸಂಸ್ಥೆಯ ಪದಾದಿಕಾರಿಗಳಾದ ಗಣಪತಿ ಭಟ್ ಮತ್ತು ವಿನಯ್ ರಾವ್. ಸ್ಥಳೀಯ ಕನ್ನಡ ಕಲಾವಿದರಿಂದ ಹಾಗೂ ಪುಟಾಣಿಗಳಿಂದ ಹಲವಾರು ಕಾರ್ಯಕ್ರಮಗಳು ಕೂಡ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.  ನಮ್ಮ ಶಾಸ್ತ್ರೀಯ ನೃತ್ಯ ಕಲೆ ಭರತನಾಟ್ಯದ ಮೂಲಕ ಅರ್ಧನಾರೀಶ್ವರ ನೃತ್ಯರೂಪಕವನ್ನು ಪ್ರಸ್ತುತ ಪಡಿಸಿದ ಇಂಗ್ಲೆಂಡ್ ಕನ್ನಡಿಗರಾದ ಸೌಮ್ಯ ರಾವ್ ಹಾಗೂ ಅದಿತಿ ಶಾಸ್ತ್ರಿ ಅವರ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು. ಪುಟಾಣಿ ನೀಲ್ ರ ಶ್ಲೋಕ, ದಿಶಾನ್ ರ ಕನ್ನಡ rap , ಅನರ್ಘ್ಯಾರ ಶಾಸ್ತ್ರೀಯ ಗಾಯನ, ಜಯಸುಧಾ ಅವರ ಭಾವಗೀತೆ, ಸುನೀತಾ ಹಾಗೂ ಸ್ವಾತಿ ಅವರ ಸಿನಿಮಾ ಶೈಲಿಯ ನೃತ್ಯ ಕೂಡ ಜನಮೆಚ್ಚುಗೆ ಗಳಿಸಿದವು. 
 
ಅತಿಥಿ ಕಲಾವಿದೆ ನಂದಿನಿ ರಾವ್ ಅವರ ಗಾಯನ ಶುರುವಾದೊಡನೆಯೇ ವೀಕ್ಷಕರ ಹರ್ಷೋದ್ಗಾರ  ನಂದಿನಿ ಅವರಿಂದ ಇನ್ನಷ್ಟು ಹಾಡುಗಳನ್ನು ಹಾಡಿಸಿದವು. ದಾಸರ ಪದ ಹಾಗೂ ಭಕ್ತಿಗೀತೆಗಳನ್ನು ಬಹಳ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಮೋಡಿಮಾಡಿದ  ನಂದಿನಿ ಅವರಿಗೆ ಬೆಂಗಳೂರು ಪ್ರಕಾಶ್ ಅವರು ಮೃದಂಗ ಹಾಗೂ ಸೂರಜ್ ಪುತ್ತಿಗೆ ಅವರು ಪಿಟೀಲು ಪಕ್ಕವಾದ್ಯಗಳ ಸಹಯೋಗ ನೀಡಿದರು. ಆನಂತರ Mrs ಇಂಡಿಯಾ ಗ್ಲೋಬ್ ವೀಣಾ ಜೈನ್ ಅವರ ಬೆಕ್ಕಿನ ನಡಿಗೆಗೆ ಇಂಗ್ಲೆಂಡ್ ನ ಕನ್ನಡ ಲಲನೆಯರು ಕೂಡ ಜೊತೆಯಾದರು. ಅದಾದ ಮೇಲೆ ಶುರುವಾದ ಸುಮನ್ ನಗರ್ಕರ್ ಅವರ ಲಘು ಸಂಗೀತ ಕಾರ್ಯಕ್ರಮದಲ್ಲಿ "ಕನ್ನಡದ ಕೋಗಿಲೆಯರು" ಎಂಬ ಶೀರ್ಷಿಕೆಯಲ್ಲಿ ಕನ್ನಡದ ಕಳೆದ ದಶಕಗಳ ಸಿನಿಮಾ ಗಾಯಕಿಯರಿಗೆ ಅವರ ಗೀತೆಗಳನ್ನು ಹಾಡಿ ಗೌರವ ಸಲ್ಲಿಸಿದರು. 
 
ಲಕ್ಕಿ ಡ್ರಾ ಪ್ರೇಕ್ಷಕರ ಅದೃಷ್ಟ ಪರೀಕ್ಷೆಮಾಡಿದರೆ, ಕನ್ನಡ ಕ್ವಿಜ್ ಕಾರ್ಯಕ್ರಮಗಳು  ಕನ್ನಡಿಗರನ್ನು ನಗೆಗಡಲಲ್ಲಿ ತೇಲಿಸಿದವು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಭಾರತದ ಹೈ ಕಮಿಷನ್ ನ  ಏ ಎಸ್ ರಾಜನ್ ಹಾಗೂ Milton Keynes  ಕೌನ್ಸಿಲರ್  Mrs ಗೀತ ಮೊರ್ಲಾ ಅವರಿಗೂ ಗೌರವಾರ್ಪಣೆ ಮಾಡಲಾಯ್ತು. 
 
ಕರ್ನಾಟಕದ ವಿಶಿಷ್ಟ ಅಡಿಗೆಗಳ ರುಚಿಯಾದ ಊಟ, ಕರ್ಣಮನೋಹರ ಸಂಗೀತ  ಹಾಗೂ ಮನರಂಜನಾ ಕಾರ್ಯಕ್ರಮಗಳು ಈ ಸಲದ ಸಂಭ್ರಮದ ವಸಂತೋತ್ಸವವಕ್ಕೆ ಮೆರುಗನ್ನು ನೀಡಿದವು.