KUK Local Chapters

ಮೈಸೂರಿನ ಕಥೆಗಳಿಗೆ ಪ್ರಸಿದ್ದಿಯಾದ ಧರ್ಮೇಂದ್ರ ಕುಮಾರ್ ಜೊತೆ ಕನ್ನಡಿಗರುಯುಕೆ ಸಂಭಾಷಣೆ

ಎಷ್ಟೊಂದು ಸಲ ನಾವು ನಮ್ಮ ಜೀವನದಲ್ಲಿ ದಿನನಿತ್ಯ ಹಾದು ಹೋಗುವ ದಾರಿ, ವಾಸಿಸುವ ಜಾಗಗಳ ಮಹತ್ವ ತಿಳಿದುಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ. ಆ ಕುತೂಹಲವು ಇಲ್ಲವಾಗಿದೆ. ನಾವು ಓದಿದ ಮತ್ತು ಓದುತ್ತಿರುವ ಇತಿಹಾಸವು ಸತ್ಯಕ್ಕೆ ಎಷ್ಟು ಹತ್ತಿರ ಎನ್ನುವ ಯೋಚನೆ ಬಹುಸಂಖ್ಯೆಯ ಜನರನ್ನು ಕಾಡುತ್ತಿದೆ ಕೂಡ. ಆದರೆ ಹಲವಾರು ಜನ ಸಂಶೋಧಕರು ಮತ್ತು ಇತಿಹಾಸದ ಕುರಿತು ಆಸಕ್ತಿ ಇರುವವರು ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮದ ಮುಖಾಂತರ ತಾವು ಕಂಡುಕೊಂಡ ಸತ್ಯಗಳನ್ನು ತಿಳಿಸುತ್ತ ಬಂದಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಇತಿಹಾಸದ ಬಗ್ಗೆ ಪ್ರೀತಿ ಉಳ್ಳವರು, ಇತಿಹಾಸದ ಬಗ್ಗೆ ಆಸಕ್ತಿ ಹುಟ್ಟಿಸುವವರು ಅರೇನಹಳ್ಳಿ ಶಿವಶಂಕರ ಧರ್ಮೇಂದ್ರ ಕುಮಾರ್.
ಅವರು “ಇತಿಹಾಸ ಗೊತ್ತಿಲ್ಲದವನು ಇತಿಹಾಸವನ್ನು ಸೃಷ್ಟಿಸಲಾರ” ಎನ್ನುವ ಮಾತನ್ನು ಅಕ್ಷರಶ: ಬದುಕಾಗಿಸಿಕೊಂಡವರು. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಇವರ ಪ್ರವೃತ್ತಿ ಇತಿಹಾಸ. ಇತಿಹಾಸ ಎಂದರೆ ಬರಿ ಮಹಾಯುದ್ಧಗಳ ಬಗೆಗೋ ಅಥವಾ ದೇಶದಲ್ಲಿ ನಡೆದ ಮತ್ತು ಪಠ್ಯ ಪುಸ್ತಕಗಳಲ್ಲಿ ಕೊಟ್ಟ ಘಟನೆಗಳನ್ನು ತಿಳಿದುಕೊಳ್ಳುವುದಷ್ಟೇ ಅಲ್ಲ, ನಮ್ಮ ಊರು, ನಾವು ಹೋಗುವ ಊರಿನ ಕುರಿತು ತಿಳಿದುಕೊಳ್ಳುವ ಆಸಕ್ತಿ ಇರಬೇಕು ಮತ್ತು ಅದನ್ನು ಗೌರವಿಸುವ ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ಕೂಡ ನಮ್ಮದಾಗಬೇಕು ಎಂಬುದು ಅವರ ಆಶಯ. ಇತಿಹಾಸವನ್ನು ಅವರು ಜನರಿಗೆ ತಲುಪಿಸುವ ರೀತಿ ಕೂಡ ಅದ್ಭುತ. ಅವರ ಫೇಸ್ಬುಕ್ ಪುಟ- “ಮೈಸೂರಿನ ಕಥೆಗಳು” ಅಂತಹ ಹಲವು ಉದಾಹರಣೆಗಳನ್ನು ತೋರಿಸುತ್ತದೆ.


ಅವರು ಸಂಭಾಷಣೆ ಆರಂಭಿಸುವ ರೀತಿ ವಿಭಿನ್ನ ಮತ್ತು ವಿಶಿಷ್ಟವಾದದ್ದು. ಒಂದು ರಸ್ತೆ, ಒಂದು ಕಟ್ಟಡ ಯಾವುದೊ ಒಂದು ಚಿಕ್ಕ ಹಳ್ಳಿ ಅವುಗಳ ಹಿಂದೆ ಇರುವ ಇತಿಹಾಸವನ್ನು ಅವರು ತಿಳಿಸುವ ಪರಿಗೆ ಇತಿಹಾಸದಲ್ಲಿ ಆಸಕ್ತಿ ಇರದವರೂ, ಇತಿಹಾಸವನ್ನು ಪ್ರೀತಿಸಲು ಆರಂಭಿಸುತ್ತಾರೆ. ರಾಜ ಮಹಾರಾಜರ ಬಗೆಗಲ್ಲದೆ, ನಾವು ಹುಟ್ಟಿ ಬೆಳೆದ ಪ್ರದೇಶ, ನಾವು ವಾಸಿಸುತ್ತಿರುವ ಊರು, ಹಳ್ಳಿ, ಓಡಾಡುವ ರಸ್ತೆ ಇಂತಹ ವಿಷಯಗಳನ್ನು ಆಯ್ದುಕೊಳ್ಳುವ ಧರ್ಮೇಂದ್ರ ಕುಮಾರ್, “ಇಷ್ಟೊಂದು ಇತಿಹಾಸ ಇಲ್ಲಿದೆಯೇ, ನಮಗೆ ಗೊತ್ತೇ ಇಲ್ಲವಲ್ಲ!” ಅನ್ನಿಸುವಂತೆ ಮಾಡುತ್ತಾರೆ. ಇದು ಮುಂದಿನ ಪೀಳಿಗಿಗೆ ಇತಿಹಾಸವನ್ನು ತಲುಪಿಸುವ ಒಂದು ದಾರಿ ಕೂಡ ಆಗಬಹುದು ಎನ್ನುವುದು ಹಲವರ ಅಭಿಪ್ರಾಯ. ಅವರ ಇತಿಹಾಸದ ಪ್ರೀತಿ ವಿದೇಶದಲ್ಲೂ ಕೂಡ ಪಸರಿಸಿದೆ ಎಂಬುದಕ್ಕೆ ಸಾಕ್ಷಿ ಕನ್ನಡಿಗರುಯುಕೆ ಹಮ್ಮಿಕೊಂಡಿರುವ ಧರ್ಮೇಂದ್ರ ಕುಮಾರ್ ಜೊತೆ ಮಾತುಕತೆ ಕಾರ್ಯಕ್ರಮ.
ಮಾರ್ಚ್ ೨೧ ರಂದು ಧರ್ಮೇಂದ್ರ ಕುಮಾರ್ ಅವರು ಕನ್ನಡಿಗರುಯುಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮಾತನಾಡಲಾರಂಭಿಸಿದರೆ ಇತಿಹಾಸದ ಘಟನೆಗಳು ಚಲನಚಿತ್ರದ ದೃಶ್ಯಗಳಂತೆ ಕಣ್ಣಮುಂದೆ ಕಾಣತೊಡಗುತ್ತವೆ. ಧರ್ಮೇಂದ್ರ ಅವರ ಇತಿಹಾಸದ ಬಗೆಗಿನ ಉತ್ಸಾಹ ಯುವಕರನ್ನೂ ನಾಚಿಸುವಂತದ್ದು. ಅವರು ಮಾತನ್ನು ಆರಂಭಿಸಿದ್ದೇ ಮಾರ್ಚ್ ೨೧ ರ ಕುರಿತಾದ ಇತಿಹಾಸದೊಂದಿಗೆ. ಮಾರ್ಚ್ ೨೧ರ ವಿಶೇಷತೆಯನ್ನು ಹೇಳುತ್ತಾ ಅವರು ಲಾರ್ಡ್ ಕಾರ್ನವಾಲಿಸ್ ನು ಬೆಂಗಳೂರು ಕೋಟೆಯನ್ನು ೨೩೦ ವರ್ಷಗಳ ಹಿಂದೆ ಇದೆ ದಿನ ಹೇಗೆ ಟಿಪ್ಪುವಿನಿಂದ ವಶಪಡಿಸಿಕೊಂಡ ಎನ್ನುವ ಕಥೆಯನ್ನು ವಿವರಿಸಿದರು. ಬೆಂಗಳೂರು ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಬಹಾದ್ದೂರ್ ಖಾನ್ ನು ಯುದ್ಧದಲ್ಲಿ ವೀರ ಮರಣ ಹೊಂದಿದ. ಅವನು ಟಿಪ್ಪುವಿನ ಪಾಳಯದವನು. ಶತ್ರು ಸೈನಿಕನಾದರೂ ಅವನ ಪರಾಕ್ರಮ ಮೆಚ್ಚಿ ಲಾರ್ಡ್ ಕಾರ್ನವಾಲಿಸ್ ನು ಅವನಿಗೆ ಒಂದು ಗೋರಿ ಕಟ್ಟಿದನಂತೆ, ಅದನ್ನು ಈಗಲೂ ಕೆ ರ್ ಮಾರ್ಕೆಟ್ ಹತ್ತಿರ ನೋಡಬಹುದು ಎಂದರು. ಈಗಿನ ಕೆ ರ್ ಮಾರ್ಕೆಟ್ ಜಾಗವು ಸಿದ್ಧಿಕಟ್ಟೆ ಕೆರೆಯಾಗಿತ್ತು, ಅಲ್ಲಿ ಬ್ರಿಟಿಷರು ಯುದ್ಧದಲ್ಲಿ ಮಡಿದ ೬೦೦೦ ಸೈನಿಕರನ್ನು ಹೂತು ಕೆರೆಯನ್ನು ಮುಚ್ಚಿದರು ಎಂದು ಅವರು ಹೇಳುವಾಗ, ಇಷ್ಟೊಂದು ಕ್ರೂರವಾದ ಇತಿಹಾಸ ಅಡಗಿದೆಯೇ ಅಲ್ಲಿ ಎಂದು ಅನಿಸುತ್ತಿತ್ತು. ನಂತರ ಮುಂದುವರಿದು ಬೆಂಗಳೂರು ಎಂಬುದು ಹೇಗೆ ಹುಟ್ಟಿತು, ಹೊಯ್ಸಳರ ಸಾಮಂತರಾದ ಕೆಂಪೇಗೌಡರು ಹೇಗೆ ಅದನ್ನು ಕಟ್ಟಿ ಬೆಳೆಸಿದರು, ಬೆಂದಕಾಳೂರು ನಂತರ ಬೆಂಗಳೂರು ಆಗಿದ್ದು ಎನ್ನುವ ಕಥೆಯೆಲ್ಲ ಕಪೋಲ ಕಲ್ಪಿತ ಎನ್ನುವುದನ್ನೆಲ್ಲ ಸೊಗಸಾಗಿ ಹೇಳಿದರು. ಬೆಂಗಳೂರು ಕಟ್ಟಲು ಗುದ್ದಲಿ ಪೂಜೆ ನಡೆದಿದ್ದು ಈಗಿನ ರಾಜಾ ಮಾರ್ಕೆಟ್ ವೃತ್ತದಲ್ಲಿ ಸಂಕ್ರಾಂತಿಯ ದಿನದಂದು. ಬೆಳಗಿನ ಜಾವ ಜನಸಂಚಾರ ಮತ್ತು ವಾಹನ ದಟ್ಟಣೆ ಕಡಿಮೆ ಇರುವ ಸಂದರ್ಭದಲ್ಲಿ ರಾಜಾ ಮಾರ್ಕೆಟ್ ವೃತ್ತಕ್ಕೆ ಹೋದರೆ ಕೆಂಪೇಗೌಡರು ಕಟ್ಟಿಸಿದ ೪ ದಿಕ್ಕಿನ ಗೇಟ್ಗಳನ್ನು ಈಗಲೂ ಕಾಣಬಹುದಂತೆ. ಬೆಂಗಳೂರಿನಲ್ಲಿರುವ ಆಸಕ್ತರು ಇದನ್ನು ನೋಡಬಹುದು. ಕೆಂಪೇಗೌಡರು ೬೪ ಕಸುಬುಗಳು ಬೆಳವಣಿಗೆ ಹೊಂದಲು ಕಾರಣರಾದರು. ಈಗಿನ ಬಳೆ ಪೇಟೆ, ಕಾಟನ್ ಪೇಟೆ, ಅಕ್ಕಿ ಪೇಟೆ ಇವೆಲ್ಲ ಆಯಾ ವೃತ್ತಿಯ ಜನರು ನೆಲೆ ನಿಂತಿದ್ದರಿಂದ ಬಂದವು. ಅವೆಲ್ಲ ಆಗಿನ ಪೇಟೆ ಕೋಟೆಯಲ್ಲಿ ಇದ್ದವು. ತಿಗಳರು, ಮೇಧರು (ಬಿದಿರಿನ ಕೌಶಲ್ಯ ಹೊಂದಿರುವವರು ) ಮುಂತಾದವರು ಇದ್ದರಂತೆ. ಮೇಧರು ಶಿವನ ಆರಾಧಕರು, ಅವರಿಗೆ ಬೆಂಗಳೂರಿನಲ್ಲಿ ಬಿದಿರಿನ ಮೇಳೆಗಳ ಮಧ್ಯೆ ಸ್ವಯಂಭೂ ಲಿಂಗ ಕಾಣಿಸಿತಂತೆ, ಅದನ್ನು ಅವರು ಪೂಜಿಸಲಾರಂಭಿಸಿದರು. ಅದನ್ನು ಮೇಧರಲಿಂಗನ ಹಳ್ಳಿ ಎಂದು ಕರೆಯುತ್ತಿದ್ದರು. ಅದೇ ಈಗಿನ ಮಲ್ಲೇಶ್ವರ.
ಕೆಂಪೇಗೌಡರ ವಂಶಸ್ಥರಿಂದ ಬೆಂಗಳೂರು ಬಿಜಾಪುರ ಆದಿಲ್ಶಾಹಿಯ ವಶವಾಗುತ್ತದೆ. ಅವನ ಒಬ್ಬ ಸೇನಾಧಿಪತಿಯಾದ ಶಿವಾಜಿಯ ಅಪ್ಪ ಶಹಾಜಿ ಅದನ್ನು ನೋಡಿಕೊಳ್ಳುತ್ತಿರುತ್ತಾನೆ. ನಂತರ ಬೆಂಗಳೂರು ಔರಂಗಜೇಬನ ವಶಕ್ಕೆ ಬರುತ್ತದೆ. ಅವನಿಂದ ಮೈಸೂರಿನ ಚಿಕ್ಕದೇವರಾಯ ಅರಸರು ಬೆಂಗಳೂರನ್ನು ಕೊಳ್ಳುತ್ತಾರೆ. ಚಿಕ್ಕದೇವರಾಯರ ಕಾಲದಲ್ಲಿ ಬೆಂಗಳೂರಿನಲ್ಲಿ ಭಾರತದ ೫೦೦ಕ್ಕೂ ಹೆಚ್ಚು ಸಂಸ್ಥಾನಗಳ ನಾಣ್ಯಗಳು ಚಲಾವಣೆಯಲ್ಲಿ ಇದ್ದವಂತೆ. ಅಷ್ಟು ಅಭಿವೃದ್ಧಿ ಹೊಂದಿತ್ತು ಬೆಂಗಳೂರು. ನಂತರ ಬೆಂಗಳೂರು ಹೈದೆರ್ ಅಲಿ ವಶಕ್ಕೆ ಬಂತು. ಅವನಿಂದ ಟಿಪ್ಪು, ಟಿಪ್ಪುವಿನಿಂದ ಬ್ರಿಟಿಷರ ವಶಕ್ಕೆ. ಬ್ರಿಟಿಷರು ೧೭೯೯-೧೯೪೭ ರ ತನಕ ಬೆಂಗಳೂರನ್ನು ಆಳಿದರು. ಬೆಂಗಳೂರಿನಲ್ಲಿ ಅವರಿಗೆ ಪ್ರತ್ಯೇಕ ಸ್ಥಳ ನಿರ್ಮಿಸಿದ್ದರು. ಅದೇ ಕಂಟೋನ್ಮೆಂಟ್. ಭಾರತೀಯರನ್ನು ದೂರ ಇರಿಸಲು ಮಧ್ಯೆ ಕಬ್ಬನ್ ಪಾರ್ಕ್ ಅನ್ನು ನಿರ್ಮಿಸಿದ್ದರಂತೆ. ಇವುಗಳುಮತ್ತು ಇನ್ನೂ ಅನೇಕ ಸ್ವಾರಸ್ಯಕರ ವಿಷಯಗಳನ್ನು ಧರ್ಮೇಂದ್ರ ಕುಮಾರ್ ಅವರು ಸವಿಸ್ತಾರವಾಗಿ ತಿಳಿಸಿದರು. ಮೈಸೂರಿನ ಮಹಾರಾಣಿಯರಾದ ಲಕ್ಷ್ಮಿ ಅಮ್ಮಣ್ಣಿ ಮತ್ತು ವಾಣಿ ವಿಲಾಸ ಸನ್ನಿಧಾನ ಅವರ ಕೊಡುಗೆಗಳನ್ನು ಬೆಂಗಳೂರು ಮತ್ತು ಮೈಸೂರಿನ ಜನರು ದಿನವೂ ನೆನೆಸಿಕೊಳ್ಳಲೇ ಬೇಕು ಎನ್ನುವವಾಗ ಅವರು ಭಾವುಕರಾಗಿದ್ದರು. ಬೆಂಗಳೂರಿಗೆ ವಿದ್ದ್ಯುದ್ದೀಪ ಬರಲು, ಕಾವೇರಿ ನೀರು ಬರಲು ಮೈಸೂರಿನ ಮಹಾರಾಣಿ ಮತ್ತು ರಾಜರ ಕೊಡುಗೆ ಅಪಾರವಂತೆ. ನಾವೆಲ್ಲರೂ ಅವರನ್ನು ಕೃತಜ್ಞತೆಯಿಂದ ಸ್ಮರಿಸೋಣ. ಅವರ ಮಾತಿನ ನಂತರ ಪ್ರಶ್ನೋತ್ತರ ಕಾರ್ಯಕ್ರಮವಿತ್ತು. ಅವರಿಗೆ ಇತಿಹಾಸದಲ್ಲಿ ಆಸಕ್ತಿ ಬರಲು ಕಾರಣ, ಹೇಗೆ ವಿಷಯ ಸಂಗ್ರಹ ಮಾಡುತ್ತಾರೆ ಹೀಗೆ ಹಲವಾರು ಪ್ರಶೆಗಳು ಬಂತು. ಕಾರ್ಯಕ್ರಮದ ಕೊನೆಯಲ್ಲಿ ಕೆಯುಕೆಯ ಪವಿತ್ರ ಅವರು ಅಭಿವಂದನೆಯನ್ನು ಸಲ್ಲಿಸಿದರು. ಕನ್ನಡಿಗರುಯುಕೆ ವತಿಯಿಂದ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದು ರಶ್ಮಿ ಮಚಾನಿ. ಧರ್ಮೇಂದ್ರ ಅವರನ್ನು ಪರಿಚಯಿಸಿದ್ದು ರಮೇಶ್ ಅವರು, ಗಣಪತಿ ಭಟ್ ಅವರು, ಕಾರ್ಯಕ್ರಮಕ್ಕೆ ಅಡಚಣೆಗಳಾಗದಂತೆ ನೋಡಿಕೊಂಡರು. ಧರ್ಮೇಂದ್ರ ಕುಮಾರ್ ಅವರಿಗೆ ಯಾವುದೇ ರೀತಿಯ ಸಹಾಯ ಮಾಡಲು ಯುಕೆಯ ಕನ್ನಡಿಗರು ಸಿದ್ಧರಿದ್ದರೆಂಬುದನ್ನು ಕನ್ನಡಿಗರುಯುಕೆ ವತಿಯಿಂದ ಗಣಪತಿ ಭಟ್ ಅವರು ಈ ಸಂದರ್ಭದಲ್ಲಿ ಹೇಳಿದರು. ಧರ್ಮೇಂದ್ರ ಕುಮಾರ್ ಅವರನ್ನು ಪರಿಚಯಿಸಿದ ವಿಶ್ವನಾತ್ಜ್ ಗಟ್ಟ್ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಇನ್ನೂ ಸರಣಿ ಕಾರ್ಯಕ್ರಮಗಳನ್ನು ಧರ್ಮೇಂದ್ರ ಅವರ ಜೊತೆ ಹಮ್ಮಿಕೊಳ್ಳುವ ಆಶಯದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಶ್ವೇತಾ ಗುರುನಾಥ, ಲಂಡನ್

Leave a Reply

Your email address will not be published. Required fields are marked *