KUK News & Events

ಇಂಗ್ಲೆಂಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಕನ್ನಡತಿಗಾದ ಅನ್ಯಾಯದ ವಿರುದ್ಧ ಪ್ರತಿಭಟನೆ

ಇತ್ತೀಚಿಗೆ Oxford ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ರಶ್ಮಿ ಸಾಮಂತ್ ನಮ್ಮ ಕರ್ನಾಟಕದ ಉಡುಪಿಯವರು ಎಂಬ ಸುದ್ದಿ ಎಲ್ಲಾ ಕಡೆ ಪ್ರಕಟವಾಗಿತ್ತು. ರಶ್ಮಿ ಅವರ ಅಭೂತಪೂರ್ವ ಗೆಲುವು ಹಾಗೂ ಆ ಗೆಲುವಿನ ಮೂಲಕ Oxford Student Unionಗೆ ಅಧ್ಯಕ್ಷೆಯಾಗಿ ಆಯ್ಕೆ ಆದ ಮೊಟ್ಟ ಮೊದಲ ಭಾರತೀಯ ಮೂಲದ ವಿದ್ಯಾರ್ಥಿನಿ ಎಂಬುದು ವಿಶೇಷವಾಗಿತ್ತು. Oxford ಅಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಸ್ಟೂಡೆಂಟ್ ಯೂನಿಯನ್ ಗೆ ಆಯ್ಕೆ ಆಗುವುದೇ ಬಹು ದೊಡ್ಡ ವಿಷಯ ಅದರಲ್ಲೂ ಒಬ್ಬ ಹುಡುಗಿ ಭಾರತದ ಕರಾವಳಿ ಮೂಲೆಯಿಂದ, ಮಣಿಪಾಲ ಅಂತಹ ಚಿಕ್ಕ ಪಟ್ಟಣದಿಂದ ಆಂಗ್ಲ ನಾಡಿಗೆ ಬಂದು ಸ್ಟೂಡೆಂಟ್ ಯೂನಿಯನ್ ನ ಅಧ್ಯಕ್ಷ ಸ್ಥಾನಕ್ಕೆ ನಿಂತು, ಚಲಾವಣೆಯಾದ 3708 ಮತಗಳ ಪೈಕಿ, 1966 ಮತ ಪಡೆದು ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿರುವುದು ಇಲ್ಲಿ ವಿಶೇಷವಾಗಿತ್ತು.

Oxford ನಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ನಾವು ಅತಿ ಬುದ್ದಿವಂತರು, ಸೃಜನಶೀಲರು, ಸಂಸ್ಕಾರ, ಆಚಾರ ವಿಚಾರಗಳಲ್ಲಿ ಮಾದರಿಯಾಗಿ ಸಮಾಜದಲ್ಲಿ ಹೆಸರು ಪಡೆಯುವವರು ಎಂದು ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ. ಆದರೆ ರಶ್ಮಿಯು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಂತರ ನಡೆದ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸುವದಲ್ಲದೇ Oxford ಅಂತಹ ಶಿಕ್ಷಣ ಸಂಸ್ಥೆಯಲ್ಲಿ ಯಾವ ರೀತಿಯ ಕ್ರೂರ ರಾಜಕೀಯ, ವರ್ಣಭೇದ ನೀತಿ, ಬೆದರಿಸುವಿಕೆ (Bullying ) ಅನ್ನುವ ವ್ಯವಸ್ಥಿತ ಪದ್ಧತಿ ಇದೆ ಎಂಬುದನ್ನು ರಶ್ಮಿ ಅವರ ಪ್ರಸಂಗ ತೋರಿಸಿಕೊಟ್ಟಿದೆ.
ರಶ್ಮಿ ಸ್ಟೂಡೆಂಟ್ ಯೂನಿಯನ್ ಅಧ್ಯಕ್ಷೆಯಾಗಿ ಆಯ್ಕೆಯಾದ ತಕ್ಷಣವೇ ಕೆಲವು (ಬಹುಶಃ ಅವರ ವಿರುದ್ಧ ಬಣದ) ವಿದ್ಯಾರ್ಥಿಗಳು ಅವರು ಸಾಮಾಜಿಕ ಜಾಲತಾಣದಲ್ಲಿ ೨೦೧೭ ರಲ್ಲಿ ಪೋಸ್ಟ್ ಮಾಡಿದ ಎರಡು ಪೋಸ್ಟ್ ಗಳನ್ನು ಎತ್ತಿ ಹಿಡಿದು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಹೌದು ರಶ್ಮಿ ಮಾಡಿದ ಎರಡು ಪೋಸ್ಟ್ ಗಳು ವಿವಾದಾಸ್ಪದವಾಗಿರುವುದು ಏನೋ ನಿಜವೇ. ಅವರ ಮೊದಲನೇ ಪೋಸ್ಟ್ ನಲ್ಲಿ ಜರ್ಮನಿ ಯ ಬರ್ಲಿನ್ ನಲ್ಲಿಯ ‘ಬರ್ಲಿನ್ ಹೋಲೋಕಾಸ್ಟ್ ಮೆಮೋರಿಯಲ್’ ಎದುರು ತೆಗೆದುಕೊಂಡ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ ಅವರು HOLOCAUST ಪದವನ್ನು ಒಡೆದು HOLLOW ಮತ್ತು CAST ಪದಗಳನ್ನು ಪ್ರತ್ಯೇಕವಾಗಿ ಬರೆದುಕೊಂಡಿದ್ದರು. ಈ ಸ್ಮಾರಕವು ಸಾಮೂಹಿಕ ಹತ್ಯಾಕಾಂಡ ಮತ್ತು ದೌರ್ಜನ್ಯದ ಕನಸನ್ನು ಚಿತ್ರಿಸುತ್ತದೆ ಎಂದು ಫೋಟೋ ಕೆಳಗೆ ಬರೆದುಕೊಂಡಿದ್ದರು. ಈ ಒಂದು Instagram ಪೋಸ್ಟ್ ಸಂವೇದನಾ ರಹಿತವಾಗಿದ್ದು ಎಂದು ಹಲವರು ಆರೋಪಿಸಿದರು. ಇದಲ್ಲದೇ, ಅವರ ಇನ್ನೊಂದು ಪೋಸ್ಟ್ ಬಗ್ಗೆ ಕೂಡ ಹಲವರಿಂದ ಆಕ್ಷೇಪ ಬಂದಿತು. ಇನ್ನೊಂದು ಪೋಸ್ಟ್ ನಲ್ಲಿ ಅವರು ಮಲೇಷ್ಯಾದ ಬೌದ್ಧ ದೇಗುಲದ ಮುಂದೆ ತಮ್ಮ ಫೋಟೋ ನಲ್ಲಿ Ching Chang ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಚೀನಾ ಮೂಲದ ವಿದ್ಯಾರ್ಥಿಗಳಿಗೆ ಅವಹೇಳನಕಾರಿಯಾಗಿದೆ ಎಂದು ಕೇಳಿಬಂತು. ಈ ಎರಡೂ ಪೋಸ್ಟ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ರಶ್ಮಿ ಅವರು ಬರ್ಲಿನ್ ಹೋದಾಗ ಅದು ನನ್ನ ಮೊದಲ ಯುರೋಪ್ ಪ್ರವಾಸವಾಗಿತ್ತು, ಅಸೂಕ್ಷ್ಮತೆಯಿಂದ ವರ್ತಿಸಬೇಕೆಂಬ ನನ್ನ ಉದ್ದೇಶವಾಗಿರಲಿಲ್ಲ, ಇಂಗ್ಲಿಷ್ ನನ್ನ ಮೂಲ ಭಾಷೆಯಾಗಿರದಿದ್ದರಿಂದ ಮೋಜಿಗಾಗಿ ಆ ರೀತಿ ಶೀರ್ಷಿಕೆ ಕೊಟ್ಟು ಬರೆದಿದ್ದೆ ಅದೇ ರೀತಿ ಮಲೇಷ್ಯಾದ ಪೋಸ್ಟ್ ಕೂಡ ಸಸ್ಯಾಹಾರಿಯಾದ ನನಗೆ ಚಿಂಗ್ ಚಾಂಗ್ ಅಂದರೆ ಗಿಡಗಳನ್ನು ಸೇವಿಸುವದು ಎಂಬ ಅರ್ಥದಲ್ಲಿ ಆ ರೀತಿ ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದರು. ಅದಾದ ಮೇಲೆ ಅವರು ರಾಜೀನಾಮೆ ನೀಡಬೇಕಾಯಿತು.
ಇಲ್ಲಿಗೇ ಕಥೆ ಮುಗಿಯಲಿಲ್ಲ. ಇದಾದ ನಂತರ ಹಲವಾರು ಬೆದರಿಕೆಯ ಮೆಸೇಜ್ ಗಳು, ಜಾಲತಾಣಗಳಲ್ಲಿ ಅವರ ಬಗ್ಗೆ ಹಲವು ತಪ್ಪು ಮಾಹಿತಿಯ ಸಂದೇಶಗಳು, ಅವರ ಧರ್ಮದ ಮೇಲೆ, ಅವರ ವೈಯಕ್ತಿಕ ನಿಲುವಿನ ಮೇಲೆ ಮಾನನಷ್ಠ ಪ್ರಚಾರ ಮಾಡುವ ಕಾರ್ಯಕ್ರಮ ತೀವ್ರವಾಗಿ ಶುರುವಾಯಿತು. ಗಂಭೀರವಾದ ವಿಷಯವೇನೆಂದರೆ ಈ ರೀತಿ ಪೀಡನೆ, ಕಾಟಗಳು ಫೇಕ್ ನಂಬರ್ ಮೂಲಕ ಒಂದೇ ಅಲ್ಲದೇ ಡಾ. ಅಭಿಜಿತ್ ಸರ್ಕಾರ್ ಎಂಬ ಒಬ್ಬ Oxford ವಿಶ್ವ ವಿದ್ಯಾಲಯದ ಹಿಸ್ಟರಿ ಪ್ರೊಫೆಸರ್ ಅವರು ರಾಜೀನಾಮೆ ನೀಡಿದ ಎರಡು ದಿನದಲ್ಲಿ ರಶ್ಮಿಯ ಮೇಲೆ ತೀವ್ರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಹಾರ ಮಾಡಿದರು. ಅವರ ಒಂದು Instagram ಪೋಸ್ಟ್ ನಲ್ಲಿ ಈ ರೀತಿ ಬರೆಯುತ್ತಾರೆ
“Very glad to see that she has been forced to resign within 2 days after her election. Tell Zee News that Oxford Students are still not ready for “Sanatani” president”

ರಶ್ಮಿ racism, xenophobia, islamophobia, anti – Semitism, transphobia ಇವೆಲ್ಲ ಆರೋಪದ ಮೇಲೆ ರಾಜೀನಾಮೆ ನೀಡಿದ್ದಾಳೆ ಎಂದು ಅಭಿಜಿತ್ ಸರ್ಕಾರ್ ತನ್ನ Instagram ಪೋಸ್ಟ್ ನಲ್ಲಿ ತಿಳಿಸಿದ್ದಲ್ಲದೇ ಇವೆಲ್ಲ ಬಲ ಪಂಕ್ತಿಯವರ ಲಕ್ಷಣ, ಹಾಗೆಯೇ ರಶ್ಮಿ ಅವರ ಪೋಷಕರ ಫೇಸ್ಬುಕ್ ಸ್ಕ್ರೀನ್ ಶಾಟ್ ಹಾಕಿ “ಜೈ ಶ್ರೀರಾಮ್” ಎಂಬ Profile Frame ಇರುವ ಭಾವ ಚಿತ್ರವನ್ನು ತನ್ನ Instagram ಪುಟದಲ್ಲಿ ಹಂಚಿ, ಅವರು ಬಾಬ್ರಿ ಮಸೀದೆಯನ್ನು ಕೆಡವಿದ ಸಂಭ್ರಮವನ್ನು ಆಚರಿಸುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಜಾಲತಾಣದಲ್ಲಿ ಹಬ್ಬಿಸಿರುವುದು ಅತ್ಯಂತ ವಿಷಾದನೀಯ. ರಶ್ಮಿ ಅವರ ಮೂಲವಾದ ಕರಾವಳಿ ಪ್ರದೇಶ ಕೋಮುವಾದದ ರಾಜಕೀಯದಿಂದ ಕೂಡಿದ್ದು ಹಾಗೂ ಇಸ್ಲಾಮೊಫೋಬಿಯಾ ಗೆ ಪ್ರಸಿದ್ದಿ ಎಂದು ತನ್ನ ಪೋಸ್ಟ್ ನಲ್ಲಿ ಹೇಳಿರುದು ಈತನ ಮನಸ್ಥಿತಿ ಸರಿ ಇಲ್ಲ ಎಂಬುದನ್ನು ಎತ್ತಿ ಹೇಳುತ್ತದೆ. ಈ ರೀತಿಯಾಗಿ ಒಂದಲ್ಲ ಎರಡಲ್ಲ, ಹಲವಾರು ವಿವಾದಾತ್ಮಕ ಸಂದೇಶಗಳನ್ನು ರಶ್ಮಿಯ ವಿರುದ್ಧ ತನ್ನ ಟ್ವಿಟ್ಟರ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಮೂಲಕ ಹಬ್ಬಿಸುತ್ತಿವ ಈತನ ಮೇಲೆ Oxford ವಿಶ್ವವಿದ್ಯಾಲಯ ಇನ್ನೂವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಬ್ರಿಟನ್ನಿನ ಹಿಂದೂ ಸಮೂದಾಯವನ್ನು ಕೆರಳಿಸಿದೆ.

ರಶ್ಮಿ ನೈತಿಕ ಜವಾಬ್ದಾರಿಯನ್ನು ಹೊತ್ತು, ರಾಜೀನಾಮೆ ಕೊಟ್ಟಿರುವುದನ್ನ ಸ್ವೀಕರಿಸಿ ಅವಳ ಮೇಲೆ ಧಾರ್ಮಿಕವಾಗಿ ಈ ರೀತಿ ಕ್ಷುಲ್ಲಕ ಹಾಗೂ ಬೇಕೆಂದೇ ವಿವಾದಾಸ್ಪದ ಸಂದೇಶಗಳ ಮೂಲಕ ಬೆದರಿಸುವಿಕೆಯ ಕಾರ್ಯ Oxford ನಂತಹ ಪ್ರತಿಷ್ಠಿತ ವಿದ್ಯಾಲಯದಲ್ಲೂ ನಡೆಯುತ್ತಿದೆ ಎಂದರೆ ನೀವೇ ಯೋಚನೆ ಮಾಡಿ ಯಾವ ರೀತಿಯ ವ್ಯವಸ್ಥೆ ಅಲ್ಲಿ ಇರಬಹುದು ಅಂತ.

ಕೆಲವು ಮಾಧ್ಯಮಗಳು ಅವರ ರಾಜೀನಾಮೆಯ ಬಗ್ಗೆ ಪ್ರಕಟಿಸಿದ ಮೇಲೂ ಇಂದಿಗೂ ರಶ್ಮಿಯ ಮೇಲೆ ಪದೇ ಪದೇ ದಾಳಿ ಆಗುತ್ತಿರುವುದು ದುಃಖಕರವಾದ ಸಂಗತಿ. ಈ ಹಿನ್ನಲೆಯಲ್ಲಿ ಎಚ್ಚೆದ್ದ ಬ್ರಿಟನ್ ಭಾರತೀಯ ಸಮೂದಾಯ ಇಂದು Oxford ಪ್ರೊಫೆಸರ್ ಅಭಿಜಿತ್ ಸರ್ಕಾರ್ ಮೇಲೆ ಇಲ್ಲಿನ ಪೊಲೀಸ್ ಹಾಗೂ ವಿಶ್ವ ವಿದ್ಯಾಲಯದ ಅಧಿಕಾರಿಗಳ ಗಮನಕ್ಕೆ ತಂದಿದೆ. ಆದರೆ ಇನ್ನೂವರೆಗೂ Oxford ಯೂನಿವರ್ಸಿಟಿ ಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರದಿರುವ ಕಾರಣ ಈ ವಿಷಯದ ಬಗ್ಗೆ ಹೋರಾಟ ಮುಂದೆ ಸಾಗಿದೆ.

ರಶ್ಮಿ ನಮ್ಮೆಲ್ಲರಂತೆಯೇ ಒಬ್ಬ ಸಾಮಾನ್ಯ ಕನ್ನಡತಿ, ಭಾರತೀಯ ಹಾಗೂ ದಿಟ್ಟ ಹುಡುಗಿ. ಅವಳಿಗಾದ ಅವಮಾನ ನಮ್ಮೆಲ್ಲರಿಗಾದ ಅವಮಾನ. ಇಂದು ಅವಳಿಗಾಗಿರುವ ಬೆದರಿಕೆ ಸಹಿಸಿ ಹೀಗೇ ಬಿಟ್ಟರೆ ನಾಳೆ ಉನ್ನತ ವ್ಯಾಸಂಗಕ್ಕೆ Oxford ಹೋಗುವ ನಮ್ಮ ನಿಮ್ಮೆಲ್ಲರ ಬಂಧು ಭಗಿನಿಯರಿಗೂ (ಯಾವುದೇ ಧರ್ಮಕ್ಕೆ ಸೇರಿರಲಿ), ಮಕ್ಕಳಿಗೂ ಇಂತಹ ವರ್ಣಭೇದ ನೀತಿ, ಭೇಧ ಭಾವ ಆಗಲಾರದು ಎಂದು ಯಾವ ಭರವಸೆ ಇದೆ?
ಹೀಗಾಗಿ ಈ ವಿಷಯದ ಬಗ್ಗೆ ಗಂಭೀರವಾಗಿ ವಿಚಾರಿಸಿ. ಹಲವಾರು ಸಂಘ ಸಂಸ್ಥೆಗಳು ಈ ವಿಷಯದ ಬಗ್ಗೆ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿ ಅಧಿಕೃತವಾಗಿ Oxford ಹಾಗೂ ಥೇಮ್ಸ್ ವ್ಯಾಲಿ ಪೊಲೀಸರಿಗೆ ದೂರು ನೀಡಿದೆ. ಇಂದಿಗೂ ಅವಳ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಹಾರ ಆಗುತ್ತಿದೆ. ರಶ್ಮಿ ಮಧ್ಯದಲ್ಲೇ ತನ್ನ ವಿದ್ಯಾಭ್ಯಾಸವನ್ನು ಬಿಟ್ಟು ಮರಳಿ ಭಾರತಕ್ಕೆ ಹೋಗಿದ್ದಾರೆ. Oxford ಯಾವುದೇ ಕ್ರಮ ತೆಗೆದುಕೊಳ್ಳದೇ, ಈ ರೀತಿಯ ಬೆದರಿಕೆಯ ವಾತಾವರಣ ಹೀಗೆ ಮುಂದುವರೆದರೆ ರಶ್ಮಿ ಮರಳಿ Oxford ಗೆ ಬರುವ ಸಾಧ್ಯತೆ ಕಮ್ಮಿಯಾಗಿದೆ. ಹೀಗಾಗಿ ನಾವೆಲ್ಲರೂ ಒಂದಾಗಿ ರಶ್ಮಿಯ ಜೊತೆ ನಿಲ್ಲುವುದು ಅತಿ ಅಗತ್ಯ.
ಈ ಕೆಳಗಿನ ಅರ್ಜಿಯಲ್ಲಿರುವ ಮಾಹಿತಿಯನ್ನು ಓದಿ, ಸಹಿ ನೀಡುವುದರ ಮೂಲಕ ನಿಮ್ಮ ಬೆಂಬಲ ನೀಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಈ ವಿಷಯವನ್ನು ಹಂಚಿ.
ವಿ.ಸೂ : ಈ ನಿವೇದನೆ ಯಾವುದೇ ಧರ್ಮದ ಪರ ಪ್ರತಿಪಾದಿಸಿಲ್ಲ, ಆದರೆ ಕನ್ನಡಿಗತಿಗಾಗಿರುವ ಅನ್ಯಾಯದ ವಿರುದ್ಧವಾಗಿದೆ
Please sign this petition ✍️

http://chng.it/ZdcW4MRw

ಕನ್ನಡಿಗರುಯುಕೆ, ಲಂಡನ್

Leave a Reply

Your email address will not be published. Required fields are marked *