KUK Local Chapters

KannadigaruUK in 2020 Report

೨೦೦೫ರಲ್ಲಿ ಕೆಲವೇ ಕೆಲವು ಕುಟುಂಬಗಳಿಂದ ಶುರುವಾದ ಕನ್ನಡಿಗರುಯುಕೆ ಅಂದಿನಿಂದ ಇಂದಿನವರೆಗೂ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಮನೋರಂಜನಾತ್ಮಕ ಕನ್ನಡ ಚಟುವಟಿಕೆಗಳನ್ನು  ಮಾಡುತ್ತಾ ಕನ್ನಡವನ್ನು  ಜೀವಂತವಾಗಿರಿಸಿ ಸಮಸ್ತ ಯುಕೆಯಲ್ಲಿರುವ ಕನ್ನಡಿಗರನ್ನು ಒಂದೆಡೆ ಸೇರಿಸುವಂತಹ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
KUK Talkies ಮೂಲಕ ಇಂಡಿಯಾ ವೆರ್ಸಸ್ ಇಂಗ್ಲೆಂಡ್ ಚಲನ ಚಿತ್ರವನ್ನು ಇಂಗ್ಲೆಂಡ್ ನ ಹಲವಾರು ಸಿನೆಮಾಗಳ ಮೂಲಕ ಈ ವರ್ಷ ಬಿಡುಗಡೆ ಮಾಡುವದನ್ನು ಬಿಟ್ಟರೆ ಮಿಕ್ಕಿದ ಎಲ್ಲಾ ಕಾರ್ಯಕ್ರಮಗಳು ನಡೆದಿದ್ದು ಆನ್ಲೈನ್ ಪ್ಲಾಟ್ಫಾರ್ಮ್ ಮುಖಾಂತರವೇ. ರಮೇಶ್ ಅರವಿಂದ ಅವರ ಶಿವಾಜಿ ಸುರತ್ಕಲ್ ಸಿನಿಮಾ ಲಂಡನ್ ಗ್ರಾಂಡ್ ಪ್ರೀಮಿಯರ್ ಮಾರ್ಚ್ ೨೦೨೦ ರಲ್ಲಿ ಆಯೋಜಿಸಲಾಗಿತ್ತು ಆದರೆ ಲೊಕ್ಡೌನ್ ಕಾರಣ ರದ್ದುಗೊಳಿಸಲಾಯಿತು. ನಿರ್ದೇಶಕರಾದ ಆಕಾಶ್ ಶ್ರೀವತ್ಸ ಹಾಗೂ ನಟ ರಮೇಶ್ ಅರವಿಂದ ಲಂಡನ್ ಪ್ರೀಮಿಯರ್ ಗೆ ಬರುವ ಎಲ್ಲಾ ಯೋಜನೆಗಳನ್ನು ಕರೋನ ಕಾರಣದಿಂದ ರದ್ದುಗೊಳಿಸಲಾಯಿತು.
ಮಾರ್ಚ್ ೨೦೨೦ ರಿಂದ ಆಗಸ್ಟ್ ತಿಂಗಳ ವರೆಗೆ ಯುನೈಟೆಡ್ ಕಿಂಗ್ಡಮ್ ನ ಕನ್ನಡಿಗರಿಗಾಗಿ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಜೂಮ್ Platform ಮುಖಾಂತರ ಹಮ್ಮಿಕೊಂಡಿತು. ಮುಖ್ಯವಾಗಿ ಅಕ್ಷಯ ಪಾತ್ರ ಫೌಂಡೇಶನ್ ಮೂಲಕ ಶ್ರೀ ಮೋಹನ್ ದಾಸ್ ಪೈ ಜೊತೆ ಸಂಭಾಷಣೆ, ಕ್ರಿಕೆಟ್ ಪಟು ವಿಜಯ್ ಭರದ್ವಾಜ ಜೊತೆ ಸಂಭಾಷಣೆ, ಕರೋನ ಬಗ್ಗೆ ಮಾಹಿತಿ ನೀಡುವ ಸಲುವಾಗಿ UK ಯ ಪ್ರಸಿದ್ಧ ವೈದ್ಯರಾದ ಡಾ. ಉಮೇಶ್ ಪ್ರಭು ಹಾಗೂ ಡಾ. ವಿನೋದ್ ಗಡಿಯಾರ ಜೊತೆ ಸಂಭಾಷಣೆ, ಕರ್ನಾಟಕದಿಂದ ಲೋಕಸಭಾ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ಹಾಗೂ ಯುವ ನಾಯಕ ತೇಜಸ್ವಿ ಸೂರ್ಯ ಜೊತೆ ಅನಿವಾಸಿ ಯುಕೆ ಕನ್ನಡಿಗರ ಸಂವಾದ, ಖ್ಯಾತ ನಟ ರಮೇಶ್ ಅರವಿಂದ ಅವರ ಜೊತೆ ಸಂಭಾಷಣೆ, ಸಿನಿಮಾ ಛಾಯಾಗ್ರಾಹಕ ಸತ್ಯ ಹೆಗಡೆ ಜೊತೆ ಸಂಭಾಷಣೆ  ಹೀಗೆ ಹಲವಾರು ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಶ್ರೀ ಗಣೇಶ್ ದೇಸಾಯಿ ಹಾಗೂ ವಿಧುಷಿ ನಂದಿನಿ ರಾವ್ ಅವರಿಂದ ಭಾವ ಸಂಗಮ – ಕರ್ನಾಟಕ ಶಾಸ್ತ್ರೀಯ, ಭಾವಗೀತೆ, ಜಾನಪದ ಸೊಗಡಿನ ಮಧುರ ಸಂಗಮ ಜೊತೆಗೆ ರೂಪ ಗುರುರಾಜ್ ಅವರ ನಿರೂಪಣೆ, ಪ್ರಾಣೇಶ್ ಹಾಗೂ ತಂಡದಿಂದ ನಗೆ ಹಬ್ಬ, ನಮ್ದುಕೆ ತಂಡದಿಂದ ಲಂಡನ್ ನಲ್ಲಿ ಒನ್ ಅಂಡ್ ಹಾಫ್ ಮೀಟರ್ ಎಂಬ ಹಾಸ್ಯವಳಿ ಹೀಗೆ ಹಲವಾರು ಕಲಾವಿದರು ಆನ್ಲೈನ್ ಮುಖಾಂತರ ಯುಕೆ ಕನ್ನಡಿಗರನ್ನು ಮನೋರಂಜಿಸಿದರು.
ಯುಕೆ ಕನ್ನಡಿಗರ ಅರೋಗ್ಯ ದೃಷ್ಠಿಯಿಂದ ಹಮ್ಮಿಕೊಳ್ಳಲಾದ ಯೋಗ ಶಿಬಿರಕ್ಕೆ ಯುಕೆ ಕನ್ನಡಿಗರಿಂದ ಉತ್ತಮ ಸ್ಪಂದನೆ ದೊರಕಿತು. ಪ್ರತೀ ವಾರದಂತ್ಯ ಡಾ. ಭಾಗೀರಥಿ ಕನ್ನಡತಿಯವರಿಂದ ಯೋಗಾಭ್ಯಾಸ ಸತತವಾಗಿ ಕಳೆದ ಜೂಲೈ ತಿಂಗಳಿಂದ ನಡೆಯುತ್ತಿದೆ. ಇದಲ್ಲದೇ, ಬಹು ಮುಖ್ಯವಾಗಿ ಆಂಗ್ಲೆಂಡಿನಲ್ಲಿರುವ ಮಕ್ಕಳಿಗಾಗಿ ಕನ್ನಡ ಕಲಿಸುವ ಕನ್ನಡ ಕಲಿ ಯೋಜನೆಗೆ ಕೂಡ ಅತಿ ಹೆಚ್ಚು ವಿದ್ಯಾರ್ಥಿಗಳಿಂದ ಹಾಗೂ ಸ್ವಯಂ ಸೇವಕ ಶಿಕ್ಷಕ ಶಿಕ್ಷಕಿಯರಿಂದ ಪ್ರೋತ್ಸಾಹ ದೊರಕಿತು. ಕನ್ನಡ ಅಕಾಡೆಮಿ ಅವರ ಸಹಯೋಗದಿಂದ ನಡೆಸಲಾಗುತ್ತಿರುವ ಆನ್ಲೈನ್ ಶಿಬಿರಕ್ಕೆ ಈಗಾಗಲೇ ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ೫೦ ಕ್ಕೂ ಹೆಚ್ಚು ಶಿಕ್ಷಕರು ನೋಂದಣಿಯಾಗಿ ಕನ್ನಡ ಕಲಿಯುತ್ತಿರುವುದು ಸಂತೋಷ ಹಾಗೂ ತೃಪ್ತಿ ತಂದಿದೆ. ಕಾಫಿ ಜೊತೆ ಮಾತುಕತೆ ಎಂಬ ಆನ್ಲೈನ್ ಕಾರ್ಯಕ್ರಮ ಕೂಡ ವಾರದಂತ್ಯದಲ್ಲಿ ಹಮ್ಮಿಕೊಂಡಿದ್ದು, ಹಲವಾರು ಸ್ಥಳೀಯ ಪ್ರತಿಭೆಗಳಿಗೆ ಹಾಗೂ ಕರ್ನಾಟಕದ ಗಣ್ಯ ವ್ಯಕ್ತಿಗಳಿಗೆ ಕನ್ನಡಿಗರುಯುಕೆ ವೇದಿಕೆಯ ಮೂಲಕ ಅವರ ಅಭಿಪ್ರಾಯವನ್ನು ಹಂಚಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿರುವುದು ಗಮನಾರ್ಹ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ “ಕನ್ನಡಿಗರು ಯುಕೆ” ಸಂಸ್ಥೆಯ ಕಾರ್ಯಕ್ರಮಗಳಲ್ಲಿಯೇ ಅತ್ಯಂತ ಪ್ರಮುಖ ಕಾರ್ಯಕ್ರಮವಾದ, ಕನ್ನಡ ರಾಜ್ಯೋತ್ಸವ ಹಬ್ಬದ ಆಚರಣೆಯನ್ನು ನವೆಂಬರ್ ೮ ರಂದು ಅಂತರ್ಜಾಲದ ಮೂಲಕ ಆಯೋಜಿಸಿ, ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರದ ಮೂಲಕ ವಿಶಿಷ್ಟ ರೀತಿಯಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಹಾಗೂ ೨೦೦ ಕ್ಕೂ ಹೆಚ್ಚು ಕನ್ನಡ ಪರಿವಾರಗಳು ಭಾಗವಹಿಸಿದ್ದವು. ಮುಖ್ಯ ಅತಿಥಿಗಳಾಗಿ  ಶ್ರೀ ಚರಣಜೀತ್ ಸಿಂಗ್( ಡೆಪ್ಯೂಟಿ ಹೈ ಕಮೀಷನರ್, ಇಂಡಿಯನ್ ಹೈ ಕಮೀಷನ ಲಂಡನ್), ಶ್ರೀ ಜರ್ಮಿ ಪಿಲ್ಮೋರ್- ಬೆಡ್ಫೊರ್ಡ(ಡೆಪ್ಯೂಟಿ ಹೈ ಕಮೀಷನರ್ , ಬ್ರಿಟಿಷ್ ಹೈ ಕಮೀಷನ ಬೆಂಗಳೂರು), ಡಾ.ಅಶ್ವತ್ ನಾರಾಯಣ (ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ),ಶ್ರೀ ಸಿ.ಟಿ.ರವಿ(ಬಿಜೆಪಿಯ ಪ್ರದಾನ ಕಾರ್ಯದರ್ಶಿಗಳು ಹಾಗೂ ಮಾಜಿ ಮಂತ್ರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು), ಶ್ರೀ ಟಿ.ಎಸ್.ನಾಗಾಭರಣ(ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು), ಶ್ರೀ ಮುರಳಿಧರ್.ಕೆ(ಕಾರ್ಯದರ್ಶಿಗಳು,ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು) ಉಪಸ್ಥಿತರಿದ್ದರು. “ಕೆಯುಕೆ ಗಾಟ್ ಟ್ಯಾಲೆಂಟ”  ಸ್ಪರ್ಧೆಯ ಕೊನೆಯ (ಫೈನಲ್) ಹಂತದ ಸ್ಪರ್ಧೆಗಳ ತಿರ್ಪುಗಾರರಾಗಿ ಉಪಸ್ಥಿತರಿದ್ದ ಖ್ಯಾತ ಗಾಯಕಿಯರಾದಂತ‌ ಅನನ್ಯ ಭಟ್, ಸಂಗೀತಾ ರಾಜೀವ್, ವಿದೂಷಿ ನಂದಿನಿ ರಾವ್ ಹಾಗೂ ಗಾಯಕರಾದಂತ ಗಣೇಶ ದೇಸಾಯಿಯವರು‌ ವಿವಿಧ ವಿಭಾಗದ ಗಾಯನ ಸ್ಪರ್ಧೆಯ ಪ್ರದರ್ನಗಳನ್ನು ವಿಕ್ಷೀಸಿ ತಮ್ಮ ತಿರ್ಪಿನೊಂದಿಗೆ ಸ್ಪರ್ಧಾಳುಗಳಿಗೆ ಸಮಯೊಚಿತವಾದ ಸಲಹೆ ಸೂಚನೆಗಳನ್ನು ನೀಡಿ ಹುರಿದುಂಬಿಸಿದರು. ಕನ್ನಡ ಕಲಿ ಮಕ್ಕಳಿಗೆ ಕನ್ನಡದಲ್ಲೇ ಮಾತನಾಡುವ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಿರಂತನ ದಾವಣಗೆರೆ, ರಾಗ ಲಂಡನ್, ನೋಡುಮಗ ಡಾಟ್ ಕಾಂ ಹಾಗೂ ನಮ್ ರೇಡಿಯೋ ಅವರಿಂದ ಸಹಯೋಗವಿತ್ತು.
ಹೀಗೆಯೇ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕನ್ನಡಿಗರುಯುಕೆ ಸಂಸ್ಥೆಯು, ಈ ವರ್ಷ ಕರೋನ ನೀಡಿರುವ ನಿರ್ಬಂಧವನ್ನು ಭೇದಿಸಿ, ಕನ್ನಡ ಸಂಸ್ಕೃತಿ ಹಾಗೂ ಭಾಷೆಯನ್ನು ಪಸರಿಸುವ ಉದ್ದೇಶದಲ್ಲಿ ಸಫಲವಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಗಣಪತಿ ಭಟ್
ಕಾರ್ಯಕಾರಿ ಸಮಿತಿ
ಕನ್ನಡಿಗರುಯುಕೆ

Leave a Reply

Your email address will not be published. Required fields are marked *