KUK Local Chapters

ಕನ್ನಡಿಗರುಯುಕೆ ಕನ್ನಡ ಕಲಿ ೩ ನೇ ಹಂತದ ಆನ್ಲೈನ್ ಶಿಬಿರ ಉದ್ಘಾಟನೆ

ಕನ್ನಡಿಗರುಯುಕೆ ಪ್ರಮುಖ ಉಪಕ್ರಮ ಗಳಲ್ಲಿ ಒಂದಾದ ಕನ್ನಡ ಕಲಿಯ ಆನ್ಲೈನ್ ಹಂತ-3 ಜನವರಿ 16 ರಂದು ಉದ್ಘಾಟಿಸಲಾಯಿತು. ಪೋಷಕರು ಶಿಕ್ಷಕರು ಮತ್ತು ಅತಿಥಿಗಳನ್ನು ಪ್ರತಿನಿಧಿಸುವ 65ಕ್ಕೂ ಹೆಚ್ಚು ಕುಟುಂಬಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿಯ ರಾಜೇಶ್ ರವರು ಕನ್ನಡ ಕಲಿಯ ಆಶಯ ಮತ್ತು ಅದು ಬೆಳೆದು ಬಂದ ಬಗೆಯನ್ನು ಹಾಗೂ ಕನ್ನಡ ಅಕಾಡೆಮಿ ಮತ್ತು ಪ್ರಾಧಿಕಾರಗಳ ಸಹಭಾಗಿತ್ವದ ವಿವರಣೆಯನ್ನು ನೀಡಿದರು. ಕನ್ನಡ ಕಲಿ ಶಿಕ್ಷಕಿಯರು ತಮ್ಮ ಪರಿಚಯದೊಂದಿಗೆ ಮಕ್ಕಳನ್ನು ಸ್ವಾಗತಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ಬರಹಗಾರರು ಹಾಗೂ ಯಕ್ಷಗಾನ ಕಲಾವಿದರು ಆದಂತಹ  ಏರೋಸ್ಪೇಸ್ ಇಂಜಿನಿಯರ್’ ಯೋಗೀಂದ್ರ ಮರವಂತೆ ಅವರು ಪೋಷಕರಿಗೆ ಕನ್ನಡ ಕಲಿಕೆಯ ಮಹತ್ವವನ್ನು ವಿವರಿಸುತ್ತಾ ಅದು ಕೇವಲ ಭಾಷಾಕಲಿಕೆ ಅಲ್ಲದೆ, ಅದೊಂದು ವಿಚಾರ ಕ್ರಮದ ಶಕ್ತಿಯಾಗಿದೆ ಎಂಬುದನ್ನು ವಿವರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ “ರತ್ನಾಕರವರ್ಣಿ ಮುದ್ದಣ ದತ್ತಿ ಪ್ರಶಸ್ತಿ” ಪಡೆದ ತಮ್ಮ ‘ಲಂಡನ್ ಡೈರಿ’ ಪುಸ್ತಕದ ಬಗ್ಗೆ ವಿವರಣೆ ನೀಡಿದರು.
       ಬೆಂಗಳೂರಿನಿಂದ ಜೊತೆಯಾದ ‘ಕರ್ನಾಟಬಲ’ ಮುಖ್ಯಸ್ಥ ಭುವನೇಶ್ ಕೆ ಅವರು ಮಾತನಾಡಿ ಕರ್ನಾಟಕದ ಹಿರಿಮೆಯನ್ನು ಜಗತ್ತಿಗೆ ಸಾರುವ ಕಾರ್ಯದ ಬಗೆಗೆ ವಿವರಣೆ ನೀಡುತ್ತಾ 85 ಜನರ ತಂಡ ಸಕ್ರೀಯವಾಗಿ ಕರ್ನಾಟಕದ ಇತಿಹಾಸ, ಸಂಸ್ಕೃತಿ, ಸಂಗೀತ, ವಿಜ್ಞಾನ-ತಂತ್ರಜ್ಞಾನ ವಾಸ್ತುಶಿಲ್ಪ ಹೀಗೆ ವಿವಿಧ ಆಯಾಮಗಳಲ್ಲಿ ಸಂಶೋಧನೆ ಮಾಡಿ ಅದರ ಚಿತ್ರೀಕರಣದ ಸುರುಳಿಗಳನ್ನು ಜಗತ್ತಿನ ಎಲ್ಲ ಕನ್ನಡಿಗರಿಗೆ ತಲುಪಿಸುವ ಕಾರ್ಯವನ್ನು ಯೂಟ್ಯೂಬ್, ಫೇಸ್ ಬುಕ್ ಮೂಲಕಮಾಡುತ್ತಿರುವುದಾಗಿ ನೆರೆದ ಪೋಷಕರಿಗೆ ವಿವರಿಸಿದರು. ಕನ್ನಡ ಕಲಿಯ ಗ್ರಂಥಗಳ ಆನ್ಲೈನ್ ಕಲಿಕೆಯ ಸಾಧ್ಯತೆಗಳ ಬಗ್ಗೆ ಅಶ್ವಿನ್ ಅವರು ವಿವರಣೆ ನೀಡಿದರು. ತರಗತಿಗಳ ಪ್ರಾರಂಭದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪೋಷಕರಿಗೆ ನೀಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು
ವರದಿ – ವೇದಮಾತಾ ವಿ ಕಮತದ, ಕ್ರೂ ಇಂಗ್ಲೆಂಡ್

Leave a Reply

Your email address will not be published. Required fields are marked *