KUK Local Chapters

ಆಂಗ್ಲ ನಾಡಿನ ಕನ್ನಡಿಗರಿಗೆ ಕನ್ನಡತಿಯಿಂದ ಸರಳ ಸುಂದರ ಯೋಗ

ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾರತದ ಯೋಗ ಪರಂಪರೆಯ ಮಹತ್ವವನ್ನು ಸಾರಿದ್ದು, ಪ್ರತಿ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವೆಂದು ಘೋಷಿಸಿದ್ದು, ಪ್ರಪಂಚದ್ಯಾದ್ಯಂತ ಯೋಗಾ ದಿನವನ್ನು ಆಚರಿಸುತ್ತಿರುವುದು ಭಾರತೀಯರಿಗೆ ಒಂದು ಹೆಮ್ಮೆಯ ವಿಷಯ.
ಕಳೆದ ವರ್ಷ ಜೂಲೈ ತಿಂಗಳಲ್ಲಿ ಡಾ. ಭಾಗೀರಥಿ ಕನ್ನಡತಿ ಅವರು ಕನ್ನಡಿಗರುಯುಕೆ ಸಂಪರ್ಕಕ್ಕೆ ಬಂದು ಉಚಿತ ಯೋಗಾ ಶಿಬಿರವನ್ನು ಕನ್ನಡಿಗರುಯುಕೆ ಮುಖಾಂತರ ಶುರು ಮಾಡುವ ಪ್ರಸ್ತಾಪವನ್ನಿಟ್ಟಾಗ ಕೊರೊನ ಮಹಾ ಮಾರಿಯಿಂದ ನೊಂದ ಅನಿವಾಸಿ ಕನ್ನಡಿಗರಿಗೆ ತಮ್ಮ ಆರೋಗ್ಯವನ್ನು ಕಾಪಾಡಲು ಒಂದು ಒಳ್ಳೆಯ ಅವಕಾಶ ಕಲ್ಪಿಸಿ ಕೊಟ್ಟಿತು.  ಮೊದಲ ಹಂತದಲ್ಲಿ ೧೦೦ ಕ್ಕೂ ಹೆಚ್ಚು ಪರಿವಾರಗಳು ನೋಂದಣಿಯಾಗಿದ್ದವು.
ಕಳೆದ ವರ್ಷ ಜೂಲೈ ೧೧ ರಂದು ಮೊದಲ ಶಿಬಿರದ ಉದ್ಘಾಟನೆಯನ್ನು ಆಗಿನ ಕನ್ನಡ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಶ್ರೀ ಸಿ. ಟಿ. ರವಿ ಅವರು ಉದ್ಘಾಟನೆ ಮಾಡಿ ಶುಭ ಕೋರಿದ್ದರು.
ಇದುವರೆಗೆ ಸತತ 6 ತಿಂಗಳಿಂದ ಸುಮಾರು 150 ಕ್ಕೂ ಹೆಚ್ಚು ಪರಿವಾರಗಳು ಯೋಗ ಶಿಭಿರದ ಲಾಭ ಪಡೆಯುತ್ತಿವೆ.
ಸರಳ ಸುಂದರ ಯೋಗ ಹಾಗೂ ಸರ್ವಾಂಗ ಸುಂದರಿ ಯೋಗ, ಈ ಎರಡು ಶಿಬಿರಗಳು ಡಾ. ಭಾಗೀರಥಿ ಕನ್ನಡತಿಯವರಿಂದ ಪ್ರತೀ ಶನಿವಾರ ಹಾಗೂ ಭಾನುವಾರ ಯುಕೆ ಕನ್ನಡಿಗರಿಗಾಗಿ ಸತತವಾಗಿ ನಡೆಯುತ್ತಿವೆ. ಯುಕೆ ಕನ್ನಡಿಗರು ಪ್ರತೀ ವಾರದಂತ್ಯದಲ್ಲಿ ಸಕ್ರೀಯವಾಗಿ ಭಾಗವಹಿಸಲು ಕಾರಣ ಗುರುಮಾ ಭಾಗೀರಥಿಯವರ ಪ್ರಾವೀಣ್ಯತೆ, 20 ವರ್ಷಗಳಿಗೂ ಮೇಲ್ಪಟ್ಟು ಯೋಗ ಕಲಿಸಿದ ಅನುಭವ, ಕಲಿಸುವ ಪದ್ಧತಿ, ಅವರ ಸಂವಹನ ಕಲೆ, ಹಾಗೂ ಅಸ್ಖಲಿತ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸುಲಲಿತವಾಗಿ ಮಾತಾಡುವದರ ಜೊತೆಗೆ ಸೂಚನೆಯನ್ನ ಕೊಡುವ ಕಲೆ!
ಯೋಗಾಭ್ಯಾಸದ ತರಗತಿಯನ್ನು ನಡೆಸುವದೊಂದೇ ಅಲ್ಲ, ಭಾಗೀರತಿ ಕನ್ನಡತಿ ಅವರ ಇನ್ನೊಂದು ಸಾಧನೆಯೆಂದರೆ ಕನ್ನಡೇತರರಿಗೆ ಕನ್ನಡ ಕಲಿಸುವ ಅಭಿಯಾನದಲ್ಲಿ, 20,000 ಕ್ಕೂ ಹೆಚ್ಚಿನ ಜನರಿಗೆ ಕಲಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಮೆಚ್ಚುಗೆ ಪಡೆದದ್ದು. ಹೀಗಾಗಿಯೇ ನನಗೆ ಕನ್ನಡತಿ ಎಂಬ ಅಡ್ಡ ಹೆಸರು ಬಂದಿದ್ದು ಎಂದು ಹೆಮ್ಮೆಯಿಂದ ಅವರು ಹೇಳುತ್ತಾರೆ.
ಅವರ ಅನುಭವ ಇನ್ನೂ ಹೆಚ್ಚು ದೇಶದ ಜನರಿಗೆ ತಲುಪಲಿ, ಅವರ ನಿರಂತರ ಸೇವೆ ಹೀಗೆಯೇ ಮುಂದುವರಿಯಲಿ!
ಗಣಪತಿ ಭಟ್
ಕನ್ನಡಿಗರುಯುಕೆ

Leave a Reply

Your email address will not be published. Required fields are marked *