KUK Local Chapters KUK News & Events

ಸಾಗರದಾಚೆಗಿನ ಸಂಗೀತಾಸಕ್ತರ ಚಿತ್ತ, ಭಾವ – ಸಂಗಮದೊಳಗೂಂದು ಸುತ್ತ!

ನಮಸ್ಕಾರ ಸ್ನೇಹಿತರೇ,

ಕರೋನಾದ ಕನವರಿಕೆಯಲ್ಲಿ ಮತ್ತೊಂದು ವಾರ ಕಳೆದು ಹೋಗಿದೆ. ಅದೃಷ್ಟವೂ, ಇಲ್ಲಾ ದುರಾದೃಷ್ಟವೂ ತಿಳಿಯದಾಗಿದೆ. ಕರೋನಾದಿಂದ ಗೃಹ ಬಂಧನ ಸುಧೀರ್ಘವಾಗುತ್ತಿದ್ದಂತೆ ಹಲವಾರು ಹೊಸ ವಿಚಾರಗಳಿಗೆ, ಆಯಾಮಗಳಿಗೆ, ಪ್ರಯೋಗಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಲು ಕಷ್ಟವೆಂದೆನಿಸಿದರೂ ಕಾಲ ಅನುವು ಮಾಡಿಕೊಡುತ್ತಿದೆ.

ಸಂಗೀತವೆನ್ನುವುದು ಸದಭಿರುಚಿಯ, ಸಾಮರಸ್ಯದ ಸಂಸ್ಕೃತಿಯಲ್ಲಡಗಿದ ಸೂಕ್ಷ್ಮತೆಯನ್ನು ಪ್ರಾಯೋಗಿಕವಾಗಿ ಪ್ರಚುರಪಡಿಸುವ ಒಂದು ಸಾಧನವೆಂದರೆ ತಪ್ಪಾಗಲಾರದೆನೋ. ಅಂತಹ ಸಂಗೀತ, ಸಪ್ತಸ್ವರಗಳೊಂದಿಗಿನ ಸಂಗೀತಗಾರನೊಬ್ಬನ ಒಡನಾಟ, ವಾದ್ಯವೃಂದಗಳೊಂದಿಗಿನ ಅವನ ಆಟೋಟ, ಸಾಹಿತಿಯೊಬ್ಬನ ಶಬ್ದಗಳೊಂದಿಗಿನ ಗುದ್ದಾಟ ಎಲ್ಲವನ್ನು ಒಂದಡೆ ಮೇಳೈಸಿ ಸಾಧರ
ಪಡಿಸುವ ಸಾಂಸ್ಕೃತಿಕ ಹಬ್ಬವೆ ಸರಿ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಅಂತಹ ಒಂದು ಸಾಂಸ್ಕೃತಿಕ ಹಬ್ಬಕ್ಕೆ ಸಾಕ್ಷಿಯಾಗುವಂತಾದರೆ ಪರಮಾನಂದವಲ್ಲವೆ…?? ಇಲ್ಲಿ ಅಂದರೆ “ಕನ್ನಡಿಗರುಯುಕೆ” ಯ ಪರ್ಯಾಯ ಪ್ರಪಂಚದ ಅಂಗಳದಲ್ಲಿ ಎರಡೂವರೆ ಗಂಟೆಗಳಕಾಲ ಆದದ್ದು ಅಂತಹದ್ದೆ ಒಂದು ಸುಮಧುರವಾದಂತಹ ಅನುಭವ. ಕನ್ನಡಕ್ಕಾಗಿ, ಕನ್ನಡತನಕ್ಕಾಗಿ, ಕನ್ನಡಿಗರಿಗಾಗಿ, ಕನ್ನಡಾಭಿಮಾನಕ್ಕಾಗಿ ಸದಾ ತುಡಿಯುವ ಕನ್ನಡಿಗರುಯುಕೆ ತಂಡ, ಆ ತುಡಿತದ ತತ್ಪರಿಣಾಮವಾಗಿ “ಭಾವ-ಸಂಗಮ” ಎನ್ನುವ ಭವ್ಯವಾದ ಸಂಗೀತೋತ್ಸವನ್ನು ಇದೆ ಮೇ ೨೫, ೨೦೨೦ ರಂದು ಜೂಮ್ ಮತ್ತು ಫೆಸ್ಬುಕ ನ ನೇರಪ್ರಸಾರದ ತಂತ್ರಾಂಶದ ಸಹಾಯದೊಂದಿಗೆ ಎರ್ಪಡಿಸಲಾಗಿತ್ತು. ಕಾರ್ಯಕ್ರಮದ ಕೆಂದ್ರ ಬಿಂದುಗಳಾದ ವಿದೂಷಿ ನಂದಿನಿ ರಾವ್ ಗುಜ್ಜರ್ ಹಾಗೂ ಶ್ರೀ ಗಣೇಶ ದೆಸಾಯಿಯವರು ಮತ್ತು ಕಾರ್ಯಕ್ರಮದ ಪ್ರಮುಖ ಆಕರ್ಷಣೆ, ಹಿಂದೂಸ್ಥಾನಿ, ಜಾನಪದ, ಕಗ್ಗ, ದಾಸರ ಪದ, ಭಾವ ಸಂಗೀತ ಹಾಗೂ ಕರ್ನಾಟಿಕ್ ಸಂಗೀತ ಪ್ರಾಕಾರದ ಸಂಮ್ಮಿಲನದೊಂದಿಗೆ ಆಯ್ದುಕೊಂಡ ವಿವಿದ ಆಯಾಮದ ಗೀತೆಗಳು.

ನಿರೂಪಣೆಯ ಹೊಣೆಯನ್ನು ಹೊತ್ತ ಶ್ರೀಮತಿ ರೂಪಾ ಗುರುರಾಜ ಅವರು ತಮ್ಮ ಸಂಪದ್ಭರಿತವಾದ ಸಾಹಿತ್ಯದೊಂದಿಗಿನ ವಿಶ್ಲೇಷಣೆ ಯ ನಿರೂಪಣೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಿದರು. ರೂಡಿಯಂತೆ ಪ್ರಥಮವಾಗಿ ವಿಘ್ನನಿವಾರಕನನ್ನು ಕರ್ನಾಟಿಕ್ ಶೈಲಿಯಲ್ಲಿ ಸಂಯೋಜಿಸಿದ ಪ್ರಾರ್ಥನಾ ಗೀತೆಯನ್ನು ಪ್ರಸ್ತುತ ಪಡಿಸುವುದರ ಮೂಲಕ ನಂದಿನಿ ರಾವ್ ಗುಜ್ಜರ್ ಅವರು “ಭಾವ-ಸಂಗಮದ” ಭವ್ಯವಾದ ಬಾಗಿಲನ್ನು ನೆರೆದಿದ್ದ ಸಂಗೀತಾಸಕ್ತರಿಗೆ ತೆರೆದಿಟ್ಟರು. ಶ್ರೀ ಗಣೇಶ ದೆಸಾಯಿಯವರು “ಕಾವೇರಿಯಿಂದ ಮಾ ಗೋದಾವರಿಯವರಗೆ” ಎನ್ನುವ ಶ್ರೀ ವಿಜಯ ಅವರು ರಚಿಸಿದ ಕನ್ನಡ ನಾಡಿನ ಗತವೈಭವವನ್ನೂ ವರ್ಣಿಸುವ ಹಳೆಗನ್ನಡದ ಗಮಕ ಶೈಲಿಯ ಗೀತೆಯನ್ನು ಪ್ರಸ್ತುತ ಪಡಿಸುವುದರೊಂದಿಗೆ ಮೊದಲ ಪ್ರಯತ್ನದಲ್ಲಿಯೆ ಸಂಗೀತಾಸಕ್ತರನ್ನು ತುದಿಗಾಲಿನ ಮೇಲೆ ತಂದು ನಿಲ್ಲಿಸಿಬಿಟ್ಟರು. ಮೂಲತಃ ನಾನು ಸಂಗೀತ ಹಾಗೂ ಸಾಹಿತ್ಯದ ಅಭಿಮಾನಿಯಾದರೂ ಹಾಗೂ ದಾಸರ ಮತ್ತು ಶರಣರ ತವರೆನಿಸಿದ ಉತ್ತರ ಕರ್ನಾಟಕದವನಾದರೂ ಆ ಭಾಗದ ಹಲವಾರು ಹಿಂದುಸ್ಥಾನಿ ಸಂಗೀತಗಾರರ ಸಂಗೀತವನ್ನು ಕೆಳಿದ್ದುಂಟು ಆದರೆ ಇದೇ ಮೊದಲ ಬಾರಿಗೆ ಗಣೇಶ ದೆಸಾಯಿ ಹಾಗೂ ನಂದಿನಿ ಗುಜ್ಜರ್ ಅವರನ್ನು ಆಲಿಸುವ ಸೌಭಾಗ್ಯ ಒದಗಿಬಂದು ಒಳಗೆ ಅಡಗಿ ಕುಳಿತಿದ್ದ ಸಂಗೀತಾಭಿಮಾನಿಯನ್ನು ಬಡದೆಬ್ಬಿಸಿ ಮನತಣಿಸಿದಂತಾಯಿತು.

ಮುಂದುವರಿದು ವಿದೂಷಿ ನಂದಿನಿಯವರು ಸಂಗೀತದ ವಿವಿಧ ವಿಭಾಗಗಳಿಂದ ಆಯ್ದು ಗೀತೆಗಳಾದ ಕನ್ನಡ ತಾಯಿ ಭುವನೇಶ್ವರಿಯ ಪ್ರಾರ್ಥನೆ, ಸ್ವಾಗತಂ ಕೃಷ್ಣ ಶರಣಾಗತಂ ಕೃಷ್ಣ, ಜೋಗದ ಸಿರಿ ಬೆಳಕಿನಲ್ಲಿ, ಎಸುಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿಬಂದ ಈ ಶರೀರ, ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜೀದೊಡೆಂತಯ್ಯ ಎನ್ನುವ ಗೀತೆಗಳನ್ನು ಹಾಡುವುದರ ಮೂಲಕ ಸಂಗೀತೋತ್ಸವಕ್ಕೆ ಮೆರಗನ್ನು ತಂದುಕೂಟ್ಟರು.

ಅದೇ ರೀತಿಯಾಗಿ ಪಂಡಿತ್ ಗಣೇಶ ದೆಸಾಯಿ ಯವರು ಶಶಿಮುಖಿ ಗೋಪಿಯ ಕಂದನೇ ವಿಠ್ಠಲ, ಡಿವಿಜಿಯವರ ಮಂಕುತಿಮ್ಮನ ಕಗ್ಗದಿಂದ ಆಯ್ದ ದಿವಸದಿಂದ ದಿವಸಕ್ಕೆ ನಿಮಿಷದಿಂದ ನಿಮಿಷಕ್ಕೆ, ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು, ಕಲ್ಲನಾಗರ ಕಂಡರೆ ಹಾಲನೆರೆ ಎನ್ನುವರಯ್ಯ ದಿಟ್ಟ ನಾಗರವ ಕಂಡೊಡೆ ಕೊಲ್ಲು ಕೊಲ್ಲೆನ್ನುವರಯ್ಯ ಅದರೊಂದಿಗೆ ಬಸವಣ್ಣನವರ ವಚನಗಳಲ್ಲೊಂದಾದ ಗೀತವ ಹಾಡಿದರೇನು, ಶಾಸ್ತ್ರಪುರಾಣವ ಓದಿದರೇನು, ಭಾವಗೀತೆಯಾದ ಈ ಜೀವನ ಒಂದು ಸವಿಯದ ನೆನಪು, ಸಂತ ಶಿಶುನಾಳ ಶರೀಫರ ಬೆಳಗಾಯಿತೇಳು ತಂಗಿ ಬಾಗಿಲ ತೆರೆಯೆ ಮೂಡಲ ಬೆಳಗೀತು ಮುಖವ ತೊಳೆಯೆ, ಶ್ರೀಮತಿ ರೊಪಾ ಗುರುರಾಜ ಅವರು ರಚಿಸಿದ ಹಾಗು ಸ್ವತಃ ಗಣೇಶ ದೆಸಾಯಿಯವರೆ ರಾಗ ಸಂಯೋಜಿಸಿದ ಪುಟ್ಟ ಕಾಗದದ ದೋಣಿಯಂತೆ, ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ ಅವರ ಗಝಲ್ ರೊಪದ ಯಾಕೆ ಕಾಡುತಿದೆ ಸುಮ್ಮನೆ ನನ್ನನು, ಕೊನೆಯಲ್ಲಿ ಶ್ರೀ ಸುಬ್ಬರಾಯ ಚಕ್ಕೊಳಿಯವರ ಕರಿಮುಗಿಲ ಬಾನಿನಲ್ಲಿ ಮಿಂಚರಳಲು ಗೀತೆಯ ಮೂಲಕ ಸುಶ್ರಾವ್ಯವಾಗಿ ಹಾಡಿ ಸಾಗರದಾಚೆಗಿನ ಸಂಗೀತಾಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸಿದರು.

 

ಗಣೇಶ ದೆಸಾಯಿಯವರು ತಮ್ಮ ಸ್ವತಂದ ಸಂಗೀತ ಶಾಲೆಯಾದ ಸಮರಸದಿಂದ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯ ವಿವರವನ್ನು ಹಂಚಿಕೊಳ್ಳುವುದರೊಂದಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಯುಕೆ ಕನ್ನಡಿಗರೊಂದಿಗೆ ಒಡನಾಟವನ್ನು ಬೆಳೆಸಿಕೊಳಲು ಪ್ರಯತ್ನಿಸುವುದಾಗಿ ಹೆಳಿದರು.

ಒಟ್ಟಾರೆಯಾಗಿ “ಕನ್ನಡಿಗರುಯುಕೆ” ತಂಡ ಅಕ್ಷಯಪಾತ್ರ ಫೌಂಡೇಷನ್ ಯುಕೆ, ಅವರಿಗೆ ಕರೋನಾದ ಈ ಕಷ್ಟಕಾಲದಲ್ಲಿ ಕೈಲಾದಷ್ಟು ಸಾಹಾಯ ಒದಗಿಸುವ ನಿಟ್ಟಿನಲ್ಲಿ ಮಾಡಿದ ವಿಭಿನ್ನವಾದಂತ ಒಂದು ಪ್ರಯತ್ನದಲ್ಲಿ ಯುಕೆ ಕನ್ನಡಿಗರ ಸಹಯೋಗದೊಂದಿಗೆ ಯಶಸ್ವಿಯಾಗಿ ಸಂಗೀತದ ಸಾಂಸ್ಕೃತಿಕ ಹಬ್ಬವನ್ನು ಪರ್ಯಾಯ ಪ್ರಪಂಚದಲ್ಲಿ ಸೇರಿದ್ದ ವಿವಿಧ ದೇಶದ ಕನ್ನಡಿಗರೊಂದಿಗೆ ಅದ್ದೂರಿಯಾಗಿ ಆಚರಿಸಿತು ಎಂದರೆ ತಪ್ಪಾಗಲಾರದೆನೋ.

ವಂದನೆಗಳೊಂದಿಗೆ
-ಗೋವರ್ಧನ ಗಿರಿ ಜೋಷಿ

Leave a Reply

Your email address will not be published. Required fields are marked *