KUK Local Chapters KUK News & Events

ಕರ್ನಾಟಕ ಸಂಸ್ಕ್ರತಿ ಸಿರಿ | Event Report & Thank You Note

ಸ್ನೇಹಿತರೇ,

ಎನೋ ಒಂದು ರೀತಿಯಲ್ಲಿ ಸಾಗರವು ಉಕ್ಕಿ ಹರಿದು, ಅದರ ಉಬ್ಬರವು ಇಳಿದು ಪ್ರಶಾಂತವಾದಂತಹ ಪರಿಸರದ ಅನುಭವ, ಜೊತೆಗೆ ತಾರಸಿಯ ಮೇಲೆ ಬಿಳುತ್ತಿರುವ ಮಳೆಯ ಹನಿಗಳಿಂದ ಉಂಟಾಗುತ್ತಿರುವ ಇಂಪಾದ ನಿನಾದ, ಅದಕ್ಕೆ ಪೂರಕವಾದಂತಹ ತಂಗಾಳಿ ಎಲ್ಲವು ಸೇರಿ ಒಂದು ಸುಂದರಮಯವಾದ ಸಂಧರ್ಭವನ್ನು ಸೃಷ್ಟಿಸಿದೆಯೆನೊ ಎಂಬ ಭಾಸ. ಆದರೆ ಮನದ ಮೂಲೆಯಲ್ಲೆಲ್ಲೊ ಚಿಕ್ಕ ಅಸಮಾಧಾನ, ಕೂಂಚ ಕಸಿವಿಸಿ. ಕಾರಣ ಇಷ್ಟೆ “ಕನ್ನಡಕ್ಕಾಗಿ ಕೈ ಎತ್ತು, ಅದು ಕಲ್ಪವೃಕ್ಷವಾಗುವುದು” ಎಂದು ಮಹನೀಯರು ಹೇಳಿರುವಂತೆ “ಕನ್ನಡಿಗರುಯುಕೆ” ತಂಡ ಅದನ್ನ ಬಲವಾಗಿ ನಂಬಿಕೊಂಡು ಬಂದಿರುವುದಲ್ಲದೆ ಅವಿರತವಾಗಿ ತನ್ನೆಲ್ಲಾ ಶ್ರಮವನ್ನು ಯುಕೆಯಲ್ಲಿ ನೆಲೆ ಕಂಡುಕೊಂಡಿರುವ ಮತ್ತು ಇಲ್ಲಿಗೆ ಅರಸಿ ಬಂದಿರುವ ಎಲ್ಲಾ ಕನ್ನಡಿಗರನ್ನು ಒಂದೇ  ವೇದಿಕೆಯಡಿ ಒಗ್ಗೂಡಿಸಿ, ಮುಂದಿನ ಪೀಳಿಗೆಗಾಗಿ “ಕನ್ನಡಿಗರುಯುಕೆ” ಯ ಅಂಗಳದಲ್ಲಿ “ಕನ್ನಡ ಕಲಿ” ಯ ಮೂಲಕ ಕನ್ನಡವನ್ನು ಹೆಮ್ಮರವಾಗಿ ಬೆಳೆಸಿ, ಕನ್ನಡದ ಪ್ರತಿಯೊಂದು ಕಂದಮ್ಮಗಳನ್ನು ಅದರಲ್ಲಿ ಅರಳುವ ನಸುನಗುವ ಹೂವುಗಳನ್ನಾಗಿ ನೋಡಬೇಕು ಎನ್ನವ ಮನದ ಇಂಗಿತವನ್ನು ಸಾಕಾರಗೂಳಿಸಲು ಮಾಡುತ್ತಿರುವ ಸಾಹಸ, ಪಡುತ್ತಿರುವ ಶ್ರಮ ಮಾತ್ರ ಇನ್ನೂ ಸಾಕಾಗದೆ ಇರುವಂತೆ ಕಾಣುತ್ತಿರುವುದು.

ಅದೇನೇ ಇರಲಿ, ನಮ್ಮ ನಿರಂತರ ಪ್ರಯತ್ನವಂತೂ ಮುಂದುವರೆಯುತ್ತಲೇ ಇರುತ್ತದೆ. ಅದರ ಫಲವಾಗಿ ಈ ಬಾರಿ ನಾವು ಹಮ್ಮಿಕೊಂಡಿದ್ದ “ಕರ್ನಾಟಕ ಸಂಸ್ಕೃತಿ ಸಿರಿ” ಕಾರ್ಯಕ್ರಮದ ಅಡಿಯಲ್ಲಿ “ಶರಣರ-ದಾಸರ ವೈಭವ” ಎನ್ನುವ ವಿಚಾರ ಸಂಕೀರ್ಣ, ಅದರೊಂದಿಗೆ ಇನ್ನೂ ಹಲವು ಕನ್ನಡಕ್ಕೆ ಸಂಭಂದಪಟ್ಟ ಲಘು ಕಾರ್ಯಕ್ರಮಗಳನ್ನು “ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್” ಮತ್ತು “ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನ” ಅವರ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು. ಕನ್ನಡದ ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಯ ಬೆಳೆವಣೆಗೆಗೆ ದಾಸರ ಹಾಗೂ ಶರಣರ ಕೊಡುಗೆ ಅಪಾರ, ಅದರ ಬಗ್ಗೆ ಹಲವಾರು ವಿದ್ವಾಂಸರು, ಲೇಖಕರು ಮತ್ತು ಸಂಗೀತಗಾರರು ತಮ್ಮದೇ ಆದ ರೀತಿಯಲ್ಲಿ ಬರೆದು, ಹಾಡಿ ಹೂಗಳಿ ತಮ್ಮ ಸೇವೆಯನ್ನು ಸಲ್ಲಿಸಿದ್ದಲ್ಲದೆ ಇನ್ನೂ ಕೆಲವರು ಆಳವಾದ ಅಧ್ಯಯನವನ್ನೇ ಮಾಡಿದ್ದಾರೆ. ಅಂತಹ ಮಹತ್ತರವಾದ ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಯನ್ನು ಮತ್ತು ಅದರ ಆಳ ಅಗಲವನ್ನು ಪರಿಚಯಿಸುವುದರ ಸಲುವಾಗಿ ಹಲವಾರು ಪ್ರಮುಖ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅವರಲ್ಲಿ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಪ್ರೂಫೇಸರ್ ಡಾ. ಎಸ.ಜಿ. ಸಿದ್ದರಾಮಯ್ಯ ನವರು, ಖ್ಯಾತ ಬರಹಗಾರರು ಮತ್ತು ಚಲನಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು,ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಾಹದೇವಯ್ಯನವರು, ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಶ್ರೀ ಅಪ್ಪರಾವ್ ಅಕ್ಕೋನೆ ಯವರು ಮತ್ತು ಖ್ಯಾತ ನಾಟಕಕಾರು, ನಿರ್ದೇಶಕರು ಹಾಗೂ ಚಲನಚಿತ್ರ ನಟರು ಆಗಿರುವ ನಾಗರಾಜು ಮೂರ್ತಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಕಿರೀಟವಿಟ್ಟಂತೆ, ಕಾರ್ಯಕ್ರಮದುದ್ದಕ್ಕೂ ಕನ್ನಡೇತರ ಸ್ಥಳೀಯ ಗಣ್ಯರಾದ  “ಶ್ರೀ ವೀರೆಂದ್ರ ಶರ್ಮಾ”, ಸಂಸದರು ಸೌತಹಾಲ್ ಮತ್ತು “ಮಾ” ಟಿವಿ ಯ ಅಧ್ಯಕ್ಷರಾದ “ಶ್ರೀ ಖುಲದೀಪ್ ಸಿಂಗ ಶೇಖಾವತ” ಅವರೊಟ್ಟಿಗೆ ಕನ್ನಡಿಗರಾದ ಶ್ರೀ ಮತ್ತೂರು  ನಂದಕುಮಾರ್ ಅವರ ಉಪಸ್ಥಿತಿ ಗಮನ ಸೆಳೆಯಿತು.

ಶೀವಶರಣೆ ಅಕ್ಕಮಾಹದೇವಿಯವರ ರಚನೆಯ ಪ್ರಾರ್ಥನಾ ಗೀತೆಯೊಂದಿಗೆ, ಗಣ್ಯರು ದೀಪ ಬೆಳಗುವುದರ ಮೂಲಕ ಪ್ರಾರಂಭವಾದ ಕಾರ್ಯಕ್ರಮ, “ಕನ್ನಡ ಕಲಿ” ಮಕ್ಕಳಿಂದ ಹಲವಾರು ವಚನಗಾಯನದೊಂದಿಗೆ ಮಮ ಲೀಲಾಜಾಲವಾಗಿ ಮುಂದುವರೆಸಿಕೊಂಡುಹೋಯಿತು.

ಈ ಮಧ್ಯೆ ಸ್ಥಳಿಯ “ಸ್ಲೌ” ನ ” ಗಿಳಿವಿಂಡು” ತಂಡದ ಅಕ್ಷತಾ ಲಂಕ್ಕುಂಡಿ, ಚಿನ್ಮಯಿ ಲಕ್ಕುಂಡಿ, ಸುರಭಿ ಪುರೋಹಿತ,ಸಂಪದಾ ಪುರೋಹಿತ, ನೀನಾದ ಲಕ್ಕುಂಡಿ ಯವರಿಂದ, ಶ್ರೀಮತಿ ಗೌರಿ ಪ್ರಸನ್ನ ಅವರ ನಿರ್ದೇಶನದಲ್ಲಿ, ಶ್ರೀಮತಿ ಸಂಧ್ಯಾ ಪ್ರಮೋದ ಮತ್ತು ಸಂಪದಾ ಅವರ ಗಾಯನ, ಶ್ರೀಮತಿ ಸಂಧ್ಯಾ ಪುರೋಹಿತ ಅವರ ನೃತ್ಯಸಂಯೋಜನೆಯೊಂದಿಗೆ ಸೊಗಸಾಗಿ “ಶ್ರೀನೀವಾಸ ನಾಯಕ”, ಪುರಂದರದಾಸರು ಆದ ಸನ್ನಿವೇಶವನ್ನು “ದಾಸರೆಂದರೆ ಪುರಂದರ ದಾಸರಯ್ಯ” ಎನ್ನುವ ಕಿರುನಾಟಕದ ಮೂಲಕ ಪ್ರಸ್ತೂತ ಪಡಿಸಿ ನೆರೆದಿದ್ದವರ ಗಮನ ಸೆಳೆಯಿತು. ನಂತರ ಶ್ರೀ ಸಿದ್ದರಾಮಯ್ಯನವರು “ಕನ್ನಡ ಕಲಿ” ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡುವುದರ ಮೂಲಕ ಕನ್ನಡ ಕಲಿಕೆಯ ಸಮಗ್ರ ಮಾಹಿತಿಯನ್ನು ನೆರೆದಿದ್ದವರಿಗೆ ಮನದಟ್ಟು ಮಾಡಿದರು. ಮುಂದೆ ಶರಣರು ಮತ್ತು ದಾಸರ ವೈಭವ ವಿಚಾರ ಸಂಕೀರ್ಣದ ಅಂಗವಾಗಿ ಮಾತನಾಡಿದ ಅವರು ಇಂದು ಕನ್ನಡ ಮತ್ತು ಕನ್ನಡತನವೇನಾದರೂ ಸಂಕಷ್ಟದಲ್ಲಿದೆ ಅಥವಾ ಕ್ಷೀಣಿಸುತ್ತಿದೆ ಎನ್ನುವುದಾದರೆ ಅದು ಕನ್ನಡದಲ್ಲಿ ಕೊರತೆಯಿದೆ ಎಂದಾಗಲಿ ಅಲ್ಲ, ಅದೇನಿದ್ದರೂ ಮನೆಯಲ್ಲಿ ಮತ್ತು ಕನ್ನಡದ ಮಾತೃಭಾಷೆಯಲ್ಲಿನ ಕೊರತೆಯಿಂದಲೆ ಎಂದು ಹೆಳುವುದರ ಮೂಲಕ, ನೆರೆದಿದ್ದವರ ಗಮನ ಸೆಳೆದು ಆ ದಿಕ್ಕಿನಲ್ಲಿಯೂ ಯೋಚಿಸುವಂತೆ ಕರೆ ನೀಡಿದರು. ತದನಂತರ ನಮ್ಮ ಅಚ್ಚು ಮೆಚ್ಚಿನ ಮೆಷ್ಟ್ರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿ, ದಾಸರ ಶರಣರ ಕೊಡುಗೆಯ ಬಗ್ಗೆ ಮತಾನಾಡಲು ಹಲವಾರು ಘಂಟೆಗಳು ಮಾತನಾಡವಷ್ಟು ಸಮಗ್ರವಾದ ಮತ್ತು ಹುಲುಸಾದ ವಿಷಯವಾಗಿದ್ದರಿಂದ ಸ್ವಲ್ಪ ಎಚ್ಚರದಿಂದಲೇ, ಸಮಯ ಮತ್ತು ಮುಂದಿನ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಚುಟುಕಾಗಿ ಸಮಾನತೆಯ ಬಗ್ಗೆ ಶರಣರು ಸಾರಿದ ತತ್ವಗಳ ಬಗ್ಗೆ ಭಾಷಣವನ್ನು ಮಾಡಿ ಮುಗಿಸುವುದರ ಮೂಲಕ ತಮ್ಮ ಮಾಷ್ಟ್ರಗಿರಿಯ ಜಾಣ್ಮೆಯನ್ನು ತೋರಿದರು. ಮುಂದೆ ಶ್ರೀ ಮಾಹದೇವಯ್ಯನವರು ಮಾತನಾಡಿ ಬಸವ ತತ್ವ ಮತ್ತು ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡರು. ಶ್ರೀ ಅಪ್ಪರಾವ್ ಅಕ್ಕೋನೆಯವರು ಹಲವಾರು ಶೀವಶರಣೆಯರ ಕೊಡುಗೆಗಳ ಬಗ್ಗೆ ಮಾತನಾಡುತ್ತ ಅವರ ತತ್ವಗಳಮೇಲೆ ಬೆಳಕನ್ನು ಚಲ್ಲಿದರು. ಸವೀತಾ ಗಣೇಶ್ ಪ್ರಸಾದ ಮತ್ತು ರಂಜನಿ ವೈನತೇಯ ಅವರು ಸೊಗಸಾಗಿ ದಾಸರ ಪದಗಳು ಮತ್ತು ಶರಣರ ವಚನಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರಗನ್ನು ತುಂಬಿದರು. ನಾಗರಾಜುಮೂರ್ತಿಯವರು ಮಾತನಾಡಿ ನೆರೆದಿದ್ದ ಗಣ್ಯೆರಿಗೆ ಹಾಗೂ ತಮ್ಮ ಮತ್ತು ತಮ್ಮ ತಂಡವು ಈ ಪ್ರವಾಸದಲ್ಲಿ ಉಳಿದುಕೂಳ್ಳಲು ಅನುವುಮಾಡಿಕೊಟ್ಟ ಪ್ರತಿಯೊಬ್ಬರಿಗೂ ವಂದನೆಯನ್ನು ಸಲ್ಲಿಸುವುದರ ಮೂಲಕ ಮುಂದಿನ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು.

ನಾಗರಾಜುಮೂರ್ತಿ ಯವರ ನಿರ್ದೇಶನದಲ್ಲಿ ಪ್ರಯೋಗರಂಗ ತಂಡದ ಕಲಾವಿದರು ಬಸವಣ್ಣನವರ ಅನುಭವ ಮಂಟಪದ ಕಾಲದ ಸಮಗ್ರ ಮಾಹಿತಿಯನ್ನು ಒದಗಿಸಿಕೊಡುವ “ಶಿವರಾತ್ರಿ” ನಾಟಕವನ್ನು ಅತ್ಯದ್ಬುತವಾಗಿ ಪ್ರದರ್ಶಿಸುವುದರ ಮೂಲಕ ನೆರೆದಿದ್ದ ಪ್ರೆಕ್ಷರ ಪ್ರಶಂಸೆಗೆ ಪಾತ್ರವಾಯಿತು. ಕಾರ್ಯಕ್ರಮದ ಕುತೂಹಲವನ್ನು ಕಾಯ್ದುಕೊಂಡಿರಿಸಿದ್ದ, “ಕನಸು ನಾಗತಿಹಳ್ಳಿ ಚಂದ್ರಶೇಖರ್” ಅವರ ಕತೆಯಾದಾರಿತ, “ನಾಗತಿಹಳ್ಳಿ ಚಂದ್ರಶೇಖರ್” ಅವರ ನಿರ್ದೇಶನದ ಹೊಸ ಚಿತ್ರದ ಶೀರ್ಶಿಕೆ “ಇಂಡಿಯಾ ವರ್ಸೆಸ್ ಇಂಗ್ಲೆಂಡ್”…ಆದರೆ ಕ್ರಿಕೆಟ್ ಅಲ್ಲಾ!! ಜಗತ್ತಿನಾದ್ಯಂತ ಮೂದಲಬಾರಿಗೆ ಪ್ರಕಟಗೊಳಿಸುವುದರ ಮೂಲಕ, ಊಟದಲ್ಲಿನ ಉಪ್ಪಿನಕಾಯಿಯ ಹಾಗೆ ಶೀರ್ಶಿಕೆಯು ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಿತು. ಕೊನೆಯಲ್ಲಿ ಯುವ ಪ್ರತಿಭೆಗಳನ್ನೊಳಗೊಂಡ ತಂಡ “ಪ್ರಾಜೆಕ್ಟ್ ಮಿಶ್ರಮ್” ತಮ್ಮ ವಿಭಿನ್ನವಾದ ಸಂಗೀತದ ಮಿಶ್ರಣದ ಮೂಲಕ ಮಿಂಚಿನ ಸಂಚಾರವನ್ನು ಮೂಡಿಸಿ ನೆರೆದಿದ್ದವರನ್ನು ತಲೆದೂಗೂವಂತೆ ಮಾಡಿತು. ಸ್ಮೀತಾ ಕದಡಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನೀರೂಪಿಸಿದರು.

ಆಹ್ವಾನವನ್ನು ಮನ್ನಿಸಿ ಆಗಮಿಸಿದ್ದ ಶ್ರೀ ಸಿದ್ದರಾಮಯ್ಯನವರಿಗೆ,  ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ, ಶ್ರೀ ಮಾಹದೇವಯ್ಯನವರಿಗೆ, ಶ್ರೀ ಅಪ್ಪಾರಾವ್ ಅಕ್ಕೋನೆಯವರಿಗೆ, ನಾಗರಾಜುಮೂರ್ತಿ ಮತ್ತು ಅವರ ಪ್ರಯೋಗರಂಗ ತಂಡದ ಎಲ್ಲಾ ಕಲಾವಿದರಿಗೂ, ಭಾಗವಹಿಸಿದ ಕನ್ನಡ ಕಲಿ ಯ ಎಲ್ಲಾ ಮಕ್ಕಳಿಗೂ ಹಾಗೂ ಅವರ ಪೋಷಕರಿಗೂ, ಕರೆಯನ್ನು ಮನ್ನಿಸಿ ಆಗಮಿಸಿ ತನು,ಮನ ಧನದಿಂದ ಸಹಕರಿಸಿದ  ಪ್ರತಿಯೊಬ್ಬರಿಗೂ “ಕನ್ನಡಿಗರು ಯುಕೆ”‌ ತಂಡದ ಪರವಾಗಿ ರವಿ ಮತ್ತು ರಮೇಶ ಮಾರಿಗುಡಿಯವರು ವಂದನೆಗಳನ್ನು ಸಲ್ಲಿಸುವುದರ ಮೂಲಕ, ನಮ್ಮ ಮುಂದಿನ ಕಾರ್ಯಕ್ರಮವಾದ ಕನ್ನಡ ರಾಜ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕರಿಸುವಂತೆ ಕೋರಲಾಯಿತು.

ಮತ್ತೊಂದು ಯಶಸ್ವಿ ಕಾರ್ಯಕ್ರಮಕ್ಕೆ ಗೌರವ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹ ನೀಡಿದ ಯುಕೆ ಕನ್ನಡಿಗರಿಗೆ ಕನ್ನಡಿಗರುಯುಕೆಯ ಕಾರ್ಯಕಾರಿ ಸಮಿತಿ ಹಾಗೂ ಆಯೋಜನ ಸಮಿತಿ ಸದಾ ಚಿರಋಣಿ .

ಕೊನೆಯದಾಗಿ “ಕನ್ನಡಿಗರುಯುಕೆ” ತಂಡದ ಪರವಾಗಿ ಕಾರ್ಯಕ್ರಮದ ಹೊಣೆಯನ್ನು ಹೊತ್ತ, “ಇವೆಂಟ ಟೀಮ್”ನ ಎಲ್ಲಾ ಸದೆಸ್ಯರಿಗೂ, ಊಟ ಮತ್ತು ಉಪಚಾರದ ಹೊಣೆಯನ್ನು ಹೊತ್ತ “ವೆನ್ಯೂ & ಕೇಟರಿಂಗ್ ಟೀಮ್” ಹಾಗೂ “ಶಿವಳ್ಳಿ ಕ್ಯಾಟೆರೇರ್ಸ್” ನ ಎಲ್ಲಾ ಸದಸ್ಯರಿಗೂ, ಕಲಾವಿದರು ಮತ್ತು ಗಣ್ಯರು ಉಳಿದುಕೂಳ್ಳಲು ಬೆಕಾದ ಎಲ್ಲಾ ವ್ಯೆವಸ್ಥೆಯ ಹೂಣೆಯನ್ನು ಹೊತ್ತ ವೀರುಪ್ರಸಾದ, ಪ್ರದೀಪ್ ಮತ್ತು ರಮೇಶ ಮಾರೇಗುದ್ದಿ ಹಾಗೂ ಪರಿವಾರದವರಿಗೂ, ಕಾರ್ಯಕ್ರಮನ್ನು ಸುಂದರವಾಗಿ ಚಿತ್ರಿಕರಿಸಿಕೂಟ್ಟ ವೀಡಿಯೂಗ್ರಾಫರ್ ಬಾಲಾಜಿ, ಪ್ರವೀಣ್ ಕಟ್ಟಾ ಮತ್ತು ಛಾಯಾಚಿತ್ರಗಳನ್ನು ಒದಗಿಸಿಕೊಟ್ಟ ಗಣೇಶ್ ಹಾಗೂ ವಿಜಯ್ ಅವರಿಗೂ, ಕಾರ್ಯಕ್ರಮವನ್ನು ನೀರೂಪಿಸಿದ, ಸ್ಮೀತಾ ಕದಡಿ ಅವರಿಗೂ, ಕಾರ್ಯಕ್ರಮವನ್ನು ಆಯೋಜಿಸಲು ಸಭಾಂಗಣದ ವ್ಯವಸ್ಥೆಯನ್ನು ಮಾಡಿಕೊಟ್ಟ “ರೇ” ಯವರಿಗೂ,  ಕಾರ್ಯಕ್ರಮದ ಆಯೋಜನೆಯ ಮುಂದಾಳತ್ವನ್ನು ವಹಿಸಿದ್ದ, ಕನ್ನಡಿಗರುಯುಕೆಯ ಕಾರ್ಯಕಾರಿ ಸಮಿತಿ ಹಾಗೂ ಆಯೋಜನ ಸಮಿತಿಯ ಎಲ್ಲಾ ಕಾರ್ಯಕರ್ತರಿಗೂ ಹೃದಯಾಂತರಾಳದಿಂದ ವಂದನೆಗಳನ್ನು ತಿಳಿಸುವುದರೊಂದಿಗೆ ಮುಂಬರುವ ಎಲ್ಲಾ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚಿನರೀತಿಯಲ್ಲಿ ಸ್ಪಂದಿಸಿಸುವಂತೆ ತಮ್ಮಲ್ಲಿ ವಿನಂತಿ.

ಈ ಮೂಲಕ ಮತ್ತೊಮ್ಮೆ ಎಲ್ಲರಿಗೂ ವಂದನೆಗಳನ್ನು ತಿಳಿಸುವುದರ ಮೂಲಕ ಮುಂದಿನ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಸಹಕಾರದ ನಿರಿಕ್ಷೆಯಲ್ಲಿ…

KannadigaruUK

Report by – -ಗೋವರ್ಧನ ಗಿರಿ ಜೋಷಿ

Leave a Reply

Your email address will not be published. Required fields are marked *