KUK Local Chapters

ಹೀಗಾಗಿತ್ತು ಜಗಳ – ಚೇತನ್ ಅತ್ನಿ

ಚೇತನ್ ಅತ್ನಿ – ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವನು, ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಿಂದ ಬಿ.ಇ ಪದವಿ ಮುಗಿಸಿ ಬೆಂಗಳೂರಿನಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ.ಸದ್ಯಕ್ಕೆ ಕಂಪನಿ ಕಡೆಯಿಂದ ಲಂಡನ್ಗೆ ವರ್ಗಾಯಿಸಲಾಗಿದೆ. ಒಂದರಿಂದ ಹತ್ತನೇ ತರಗತಿಯವರೆಗೂ ನಾನು ಕನ್ನಡ ಮಾದ್ಯಮದಲ್ಲಿ ಒಂದಿದುದರಿಂದ ಕನ್ನಡ ಪುಸ್ತಕಗಳ ಓದಿನಲ್ಲಿ ಒಂದಷ್ಟು ಆಸಕ್ತಿ ನನ್ನ ಇಷ್ಟು ದಿನದ ಓದಿನ ಆಸಕ್ತಿಯು ಬರಹದ ಪ್ರಯತ್ನಕ್ಕೆ ಹಚ್ಚ್ಚಿದೆ.

ನಾನು ಮೂಲತಃ ಅರೆಮಲೆನಾಡು ಪ್ರದೇಶವಾದ ಹಾಸನ ಜಿಲ್ಲೆಯ ಒಂದು ಹಳ್ಳಿಯಿಂದ ಬಂದವನು ನನ್ನ ಸ್ಕೂಲು ಕಾಲೇಜು ಜೀವನವನ್ನು ಅಲ್ಲೇ ಕಳೆದಿದ್ದೇನೆ ನಂತರ ನನ್ನ ಹೆಚ್ಚಿನ ಜೀವನ ಸವೆದದ್ದು ಬೆಂಗಳೂರಿನಲ್ಲಿ. ಈ ಜಗಳ ಎಂಬುದು ಎಲ್ಲರ ಜೀವನದಲ್ಲೂ ನೆಡೆದಿರುವಂತದ್ದೇ ಕೆಲವರು ಪ್ರತಿಷ್ಠೆಗಾಗಿ ಆಡಿದರೆ ಇನ್ನು ನೋಡುವವರಿಗೆ ಮನೋರಂಜನೆ ಅದರಲ್ಲೂ ಹಳ್ಳಿ ಜನಗಳ ಜಗಳವಂತೂ ವಿಶಿಷ್ಟ ಮತ್ತು ವ್ಯವಿಧ್ಯಮಯ ಅವರು ಜಗಳವಾಡುವಾಗ ತೋರುವ ಹಾವಭಾವ ಆಡುವ ಮಾತು ಅಬಬ್ಬಾ ಉತ್ಪ್ರೇಕ್ಷೆಯಲ್ಲ ನೀವೊಮ್ಮೆ ನೋಡಲೇಬೇಕು ಮತ್ತು ಕೇಳಲೇಬೇಕು ……!!!!, ಇದರಿಂದ ನಿಮ್ಮ ಶಬ್ದಕೋಶವು ಉತ್ತಮವಾಗುತ್ತದೆ ನೀವು ಕೇಳಿರದ, ಕೇಳಲು ಸಿಕ್ಕೂ ಕೇಳಬಾರದೆಂದು ಕಿವಿಮುಚ್ಚಿಕೊಂಡ ಅತ್ತ್ಯುಕೃಷ್ಟವಾದ ಪದಗಳೇ ಇಲ್ಲಿ ಜಾರಿಯಲ್ಲಿ ಇರುವುದು ಮತ್ತೆ ಭಾಷಾತಜ್ನ್ಯರಿಗೂ ಇವುಗಳ ಅರ್ಥ ತಿಳಿದಿರಲಿಕ್ಕೇನೋ, ಬರಿ ಅಷ್ಟೇ ಅಲ್ಲ ನಿಮಗೆ ವ್ಯಕ್ತಿಗಳ ಇತಿಹಾಸದ ಬಗ್ಗೆ ಕೂಡ ಸ್ತೂಲ ಪರಿಚಯವಾಗುತ್ತದೆ ಅದರಲ್ಲೂ ಅವರು ಮಾಡಿದ ಮೋಸ , ಕೆಟ್ಟ ಕೆಲಸಗಳ ಬಗ್ಗೆ ಹೆಚ್ಚಾಗಿ (ಇಲದಿದ್ದರೆ ನಿಮ್ಮ ಜೀವನದಲ್ಲಿ ಅಮೂಲ್ಯ ಕ್ಷಣವೊಂದನ್ನು ಕಳೆದುಕೊಂಡಂತೆ ಮೊನ್ನೆ ಫೇಸ್ಬುಕ್ ಅಲ್ಲಿ ಯಾರೋ ಇದನ್ನು ನಶಿಸುತ್ತಿರುವ ಕಲೆಗೆ ಹೋಲಿಸಿದ್ದಾರೆ) ಮೂಲತಃ ಜಿಜ್ಞಾಸುವಾದ ನನಗೆ ಇದೊಂದು ಆಸಕ್ತಿಕರ ವಿಷಯವು ಕೂಡ.

ಅಯ್ಯೋ ಇದೇನಪ್ಪ ಇವನು ತನ್ನ ಬಗ್ಗೆ ಹೇಳಿಕೊಳ್ಳುತಿದ್ದವನು ಜಗಳದ ಕಡೆ ತಿರುಗಿದ ಅಂದು ಕೊಂಡಿರ ಇದೆ ನೋಡಿ ನನಗೆ ಜಗಳದ ಬಗ್ಗೆ ಇರುವ ಆಸಕ್ತಿ, ನನಗೆ ಜಗಳದ ಬಗ್ಗೆ ಒಂದಷ್ಟು ಆಸಕ್ತಿ ಅದರಲ್ಲೂ ಹಳ್ಳಿಗಳ ಜಗಳದ ಬಗ್ಗೆ ಒಂದಷ್ಟು ಒಲವು ಹೆಚ್ಚೇ ಏಕೆಂದರೆ ಹಳ್ಳಿಗಳಲ್ಲಿ ಜನ ತಮ್ಮ ಪರಿಮಿತಿಯನ್ನು ಬಿಟ್ಟು ಮುಂದುವರೆಯುವುದಿಲ್ಲ ಇಲ್ಲಿ ಕೃತಿಗಿಂತ ಮಾತಿಗೆ ಪ್ರಾಮುಖ್ಯತೆ ಆದರೆ ಪಟ್ಟಣಗಳಲ್ಲಿ ಹಾಗಲ್ಲ ಹೆಚ್ಚು ಕಡಿಮೆ ಶಕ್ತಿ ಪ್ರದರ್ಶನವೇ ಹೆಚ್ಚು. ಅಂದಹಾಗೆ ನಾನಿಲ್ಲಿ ಹೇಳಲು ಹೊರಟಿರುವ ವಿಷಯ ಜಗಳದ ಬಗ್ಗೆ ಮತ್ತು ಘಟನೆ ನೆಡದ್ದದ್ದು ಬೆಂಗಳೂರಿನಲ್ಲಿ.

ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ, ನನ್ನ ಅಣ್ಣನ ಮನೆಯಿರುವ ನಾಗರಭಾವಿಯಿಂದ ನನ್ನ ಕಂಪೆನಿಗೆ ನಾಗರಬಾವಿಯ ಬಿಡಿಏ ಕಾಂಪ್ಲೆಕ್ಸ್ ಮುಂದೆ ಬಂದು ಗೊರಗುಂಟೆ ಪಾಳ್ಯದ ಸರ್ಪಗಾವಲನ್ನು ದಾಟಿ (ನಾನೇಕೆ ಇದನ್ನು ಸರ್ಪಗಾವಲೇನುತೆನೆಂದರೆ ಇಲ್ಲಿ ನಮ ಟ್ರಾಫಿಕ್ ಪೋಲಿಸಿನವರು ಎಲ್ಲಿರ್ತಾರೆ ಅಂತ ಯಾರಿಗೂ ಗೊತ್ತಾಗಲ್ಲ, ಗೊತ್ತಾಗೋದು ನಮ್ಮನ ಹಿಡಿದ್ಮೇಲೇನೇ ಹಾವಿನಂತರ ಕಾಯ್ತಾಇರ್ತಾರೆ, ನನ್ನ ಅಭಿಪ್ರಾಯದ ಪ್ರಕಾರ ಇವರು ತಮ್ಮ ಬುದ್ದಿವಂತಿಕೆನ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಲ್ಲಿ ಹಾಕಿದ್ದರೆ ಜನ ಉಸಿರಾಡುತಿದ್ದರು) ಬೆಲ್ ಸರ್ಕಲ್ನ ಅಂಡರ್ಪಾಸ್ ನುಸುಳಿ ಸಾಗುತ್ತೆ ನನ್ನ ಪ್ರಯಾಣ, ಈ ಮಾರ್ಗವೇ ತುಂಬಾ ಅಸ್ತವ್ಯಸ್ತವಾದದ್ದು ತುಮಕೂರು ಕಡೆಯಿಂದ, ಸುಂಕದಕಟ್ಟೆ/ಮೈಸೂರು ರೋಡಿನ ಕಡೆಯಿಂದ ಬರುವ ಹೆಚ್ಚು ಕಡಿಮೆ ಅರ್ಧಕ್ಕೂ ಹೆಚ್ಚು ವೆಹಿಕಲ್ಗಳು ಬೆಲ್ ಸರ್ಕಲ್ ಕಡೆ ತಿರುಗುತ್ತವೆ ಈ ರೀತಿ ಸಮರೋಪಾದಿಯಲ್ಲಿ ಬರುವ ವಾಹನಗಳು ರೈಲ್ವೆ ಟ್ರ್ಯಾಕ್ ಪಾಸಿಂಗ್ ಬ್ರಿಡ್ಜ್ನ್ನು ದಾಟಲು ಪರದಾಡುತ್ತ ಹಗ್ಗೆ ಸ್ತಬ್ದವಾಗಿ ನಿಂತುಬಿಡುತ್ತವೆ ಹೀಗೆ ಇಲ್ಲಿ ವಿಶ್ರಮಿಸಿದ ನಂತರ ಮತ್ತೆ ಸಮುದ್ರದಲ್ಲಿ ಮೀನುಗಳು ಹರಿದಾಡುವಂತೆ ಬೆಲ್ ಸರ್ಕಲ್ ಅನ್ನು ದಾಟಿ ಹೋಗುತ್ತವೆ .

ಸರಿ ಮುಖ್ಯ ವಿಷಯಕ್ಕೆ ಬರೋಣ, ಹೀಗೆ ಒಂದು ದಿನ ಕಾರಿನಲ್ಲಿ ಆಫೀಸಿಗೆ ಹೊರಟಿದ್ದೆ ಗೊರಗುಂಟೆ ಪಾಳ್ಯ ಸಿಗ್ನಲ್ ದಾಟಿ ಮುಂದೆ ಬಂದ್ರೆ ಎಲ್ಲ ವೆಹಿಕಲ್ಸ್ ಹಾಗೆ ನಿಂತುಬಿಟ್ಟಿವೆ ನಾನೇನೋ ಯಾವ್ದೋ ವೆಹಿಕಲ್ ಜಾಮ್ ಆಗಿರ್ಬೇಕು ಅಂದ್ಕೊಂಡೆ ಆದ್ರೆ ಎರಡು ಮೂರೂ ನಿಮಷ ಆದ್ರೂ ಯಾರು ಮುಂದೇನೆ ಹೋಗ್ತಿಲ್ಲ ಹಾಗೆ ಪಕ್ದಲ್ಲಿರೋರುನ್ನ ಕೇಳ್ದೆ , ಅವ್ರು ರೈಲ್ವೆ ಟ್ರ್ಯಾಕ್ ಪಾಸಿಂಗ್ ಬ್ರಿಡ್ಜ್ ಮೇಲೆ ಆಕ್ಸಿಡೆಂಟ್ ಆಗಿದೆ ಅಂದ್ರು (ಈ ಬ್ರಿಡ್ಜ್  ಗೊರಗುಂಟೆ ಪಾಳ್ಯ ಸಿಗ್ನಲ್ ಮತ್ತೆ  ಬೆಲ್ ಸರ್ಕಲ್ನ ಅಂಡರ್ಪಾಸ್  ಮಧ್ಯ ಇದೆ ಇದು ಕೂಡ ನನ್ನ ಆಸಕ್ತಿಕರವಾದ ವಿಷ್ಯದಲ್ಲಿ ಒಂದು ಈ ಬ್ರಿಡ್ಜ್ನ ಡಿಸೈನ್ ಮಾಡಿರೋನು ಇಂಜಿನಿಯರ್ ಅಂತೂ ಅಲ್ವೆಲ್ಲ ಯಾರು ರೈಲ್ವೆ ಟೀಟೀ ಇರ್ಬೇಕು ರೈಲ್ ಬೋಗಿಗಳಲ್ಲಿ ನುಗ್ಗಿ  ನುಗ್ಗಿ ಈ ಬ್ರಿಡ್ಜ್ ಮೇಲೆ ಓಡಾಡೋರು ನುಗ್ಗಕೊಂಡ್ ಓಡಾಡ್ಲಿ ಅಂತ ಅಷ್ಟ್ ಕಾಂಪ್ಯಾಕ್ಟ್ ಆಗಿ ಡಿಸೈನ್ ಮಾಡಿದಾನೆ ಅದು ನಾಲ್ಕಾರು ವರ್ಷಗಳನ್ನು ತಗೊಂಡು, ಒಂದ್ ವೆಹಿಕಲ್ ಹೋದರೆ ಇನೊಂದು ಹೋಗೋಕೆ ಆಗಲ್ಲ ಆದ್ರು ಇದು ೪ ಲೈನ್  ಬ್ರಿಡ್ಜ್).

ಇರ್ಲಿ ವಿಷ್ಯಕ್ಕೆ ಬರಣ, ಐದು ನಿಮಷ ಆಯಿತು ಆದ್ರೂ ಯಾರು ಮುಂದುಕ್ಕೆ ಹೋಗ್ತಿಲ್ಲ ಸರಿ ನಾನು ಅತ್ತಿತ್ತ ನೋಡ್ದೆ ಪಕ್ಕದಲ್ಲಿದ್ದೋರು ಆಕ್ಸಿಡೆಂಟ್ ಆಗಿ ಇಬ್ಬರು ಸತ್ತುಹೋಗಿ ಗಾಡಿ ಜಖಮ್ಮ್ ಆಗಿದೆ ಅಂದ್ರು ಇನೊಬ್ಬರು ಇಲ್ಲ ಇಲ್ಲ ಆಕ್ಸಿಡೆಂಟ್ ಆಗಿ ಇಬ್ಬರು ಜಗಳ ಆಡ್ತಿದಾರೆ ಅಂದ್ರು ಮತ್ತೊಬ್ರು ಈ ಪೊಲೀಸವರಿಗೆ ಬಂದು ಕ್ಲಿಯರ್ ಮಾಡೋಕೆ ಏನ್ ಕಷ್ಟ ಎಲ್ಲಿಗೆ ಹೋಗಿದಾರೋ ಅಂತ ಬಯ್ಕೊಂಡ. ಎಲ್ಲರು ಅವ್ರವ್ರ್ ವಿಶ್ಲೇಷಣೆಯಲ್ಲಿ ಇದ್ರು ನಾನು ಕಾರಲ್ಲಿ ಬಂದಾಗಿದೆ ತಿರ್ಗೋಸಕಂತು ಆಗಲ್ಲ ಅಂತ ಸುಮ್ನೆ ಕುಳುತೆ.

ಅಷ್ಟ್ರಲ್ಲಿ ಮತೊಬ್ಬ ಬಂದ, ಅವ್ನು ಕಥೆನೇ ಹೇಳೋಕೆ ಶುರು ಮಾಡ್ದ, ನಂಗು ಅದೇ ಬೇಕಿತ್ತು ಅನ್ನಿ..!!!. ಒಬ್ಬ ಜೋರಾಗಿ ಬಂದನಂತೆ ಮುಂದೆ ಹೋಗುತಿದ್ದವನಿಗೆ ಡಿಕ್ಕಿ ಹೊಡೆದನಂತೆ ಆಮೇಲೆ ಇಬ್ಬರಿಗೂ ಜಗಳ ಶುರುವಾಯ್ತಂತೆ, ನಾನು ಹೂಗುಟ್ಟುತ್ತ ಕೇಳುತ್ತ ಕುಳಿತೆ ಅವ್ನು ಮುಂದುವರೆದು ಪೊಲೀಸರು ತಡೆದರಂತೆ ಆದ್ರೂ ಬಿಡಲಿಲ್ಲವಂತೆ ಒಬ್ಬ ರಾಜಕಾರಣಿಯ ಮಗನಂತೆ ಇನ್ನೊಬ್ಬ ಸಂಘಟನೆಯವನಂತೆ ಇಬ್ಬರದೂ ಒಂದೇ ಹಟವಂತೆ ನಾನು ಸರಿ ಎಂದು ಅವನಂತೆ ನಾನು ಸರಿ ಎಂದು ಇವನಂತೆ ಏನು ಮಾಡಿದರು ಮುಗಿಯುತ್ತಿಲ್ಲವಂತೆ ಹೀಗಂತೆ ಹಾಗಂತೆ ನನಗಂತೂ ಕೇಳಲು ಚನ್ನಗಿತ್ತಂತೆ. ಹೀಗೆ ಅಂತೆ ಕಂತೆಗಳನ್ನೂ ಸೇರಿಸಿ ಹೇಳತೊಡಗಿದ ನೀವು ಸುಮ್ಮನೆ ಮನೆಗೆ ಹೋಗಿ ಇವತ್ತಿಗೆ ಈ ಟ್ರಾಫಿಕ್ ಕ್ಲಿಯರ್ ಆಗಲ್ಲ ಅಂತ ಉಪದೇಶ ಕೂಡ ಮಾಡಿದ, ಆದ್ರೆ ಎಲ್ಲಿ ಹೋಗೋದು ಎಲ್ಲ ಜಾಮ್ ಆಗಿಬಿಟ್ಟಿದೆ ಕಾರನ್ನು ಅಲ್ಲೇ ಬಿಟ್ಟು ನೆಡೆದುಕೊಂಡ ಹೋಗಬೇಕಷ್ಟೆ ಅಂದುಕೊಂಡ ಸುಮ್ಮನಾದೆ ಅಷ್ಟಕ್ಕೂ ನಂಗೇನು ಅಂತ ಘನಂದಾರಿ ಕೆಲಸವಿರಲಿಲ್ಲ ಅಂದುಕೊಳ್ಳಿ.

ಹತ್ತು ಹದಿನೈದು ನಿಮಿಷ ಹೀಗೆ ಹೋಯಿತು ಆದರೂ ಯಾವ ಗಾಡಿಯು ಮುಂದೆ ಹೋಗುತ್ತಿಲ್ಲ, ಇನ್ನೆರಡು ನಿಮಿಷ ಬಿಟ್ಟು ಒಬ್ಬ ಹೆಂಗಸು ಕಡಲೆಕಾಯಿ ಹಿಡಿದು ಬಂದಳು ನಾನು ಒಂದಷ್ಟು ಕೊಂಡೆ ಮತ್ತೆ ತಿನ್ನಲು ಶುರು ಮಾಡಿದೆ ಆಕೆ ಮತ್ತೊಂದು ಕಥೆ ಶುರು ಮಾಡಿದಳು ಸರ್ ಅಲ್ಲಿ ನಾಲ್ಕೈದು ಜನ ಹೊಡಾಡ್ತಿದಾರೆ ಸರ್ ಯಾರೋ ಆಟೋದವನು ದುಬಾರಿ ಕಾರಿಗೆ ಡಿಕ್ಕಿ ಹೊಡ್ಡ್ನತೆ ಪಾಪ ಅವ್ರಿಗೆ ಎಷ್ಟು ಖರ್ಚು ಆದ್ರೆ ಈ ಆಟೋದವನು ಎಲ್ಲಿಂದ ತರ್ತಾನೆ ಅಷ್ಟ್ ದುಡ್ಡು ಆದ್ರು ಅಷ್ಟು ದುಬಾರಿ ಕಾರು ಕೊಂಡವರಿಗೆ ಬೇಜಾಗಿರುತ್ತದಲ್ವಾ ಅದನ್ನು ರಿಪೈರಿ ಮಾಡಿಸಲ್ಲು ಟೈಮು ದುಡ್ಡು ಎಲ್ಲ ಬೇಕು ಈ ಶ್ರೀಮಂತರ ಹತ್ತಿರ ಎಷ್ಟೇ ದುಡಿದ್ದರು ಅವ್ರಿಗೆ ಅವ್ರದೇ ಆದ ಕಷ್ಟಗಳಿರುತ್ತದಲ್ಲವಾ ಪಾಪ ಹಾಗೆ ಸೇರಿಸಿ ಆಟೋದವನು ದಿನಕ್ಕೆ ಎಷ್ಟು ದುಡಿದಾನು ಅವನು ದುಡಿದ ದುಡ್ಡು ಗಾಡಿಯ ಗ್ಯಾಸ್ಗೆ ಅವನ ಕುಟುಂಬದ ಖರ್ಚಿಗೆ ಸಾಕಾಗುವುದಿಲ್ಲ ಹೀಗಿರುವಾಗ ಅವನೆಲ್ಲಿ ದುಡ್ಡು ಕೋಟ್ಯಾನು ಅಂತ ಬುದ್ದಿಜೀವಿಗಳ ತರ ಮತ್ತು ತದ್ವಿರುದ್ಧವಾದ ಮಾತುಗಳನ್ನಾಡಿ ಹೊರಟು ಹೋದ್ಳು (ಆದರೂ ಆ ಹೆಂಗಸಿನ ತರ್ಕ ಸರಿಯಾಗಿತ್ತು ಎಲ್ಲರಿಗು ಅವರವರ ಕಷ್ಟಗಳೇ ಹೆಚ್ಚು ಬೇರೆಯವರಿಗೆ ಸಣ್ಣದಾಗಿ ಕಂಡರೂ ಅನುಭವಿಸುವವರಿಗೆ ತಿಳಿದಿರುವಂಥದ್ದು, ಅವಳ ಮಾತುಗಳನ್ನು ಕೇಳಿ ನನಗೆ ಆಶ್ಚರ್ಯವೂ ಆಯಿತು).

ಅಷ್ಟರಲ್ಲಿ ಸಾಮನ್ಯವಾಗಿ ಗೊರಗುಂಟೆಪಾಳ್ಯದ ಸಿಗ್ನಲ್ನಲ್ಲಿ ಹೂವು ಮಾರುವ ಹುಡುಗರು ಬಂದರು (ನನ್ನ ಪ್ರತಿದಿನದ ಪ್ರಯಾಣದಲ್ಲಿ ನನ್ನನು ಸೆಳೆಯುವ ವಿಷಯಗಳಲ್ಲಿ ಇವರ ಜೀವನ ಕೂಡ ಒಂದು, ಇವರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಹೂವು ಮಾರ್ತಾರೆ ಉಳಿದ ಸಮಯದಲ್ಲಿ ಗಾಡಿಗಳನ್ನು ಒರೆಸೋ ಬಟ್ಟೆಗಳು ಮಕ್ಕಳ ಆಟಿಕೆಗಳು ಹೀಗೆ ತರೆವಾರಿಯಾದ ವಸ್ತುಗಳನ್ನ ಮಾರ್ತಾರೆ ಕೆಲವು ಹುಡ್ಗ್ರು ಸಂಜೆ ಪೇಪರ್ ಮಾರ್ತಾರೆ, ಇವರಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಅಂದ್ರೆ ಇವರ ಫ್ಯಾಷನ್ ಸೆನ್ಸ್ ತರೇವಾರಿ ಹೈರ್ಸ್ಟೈಲೆಗಳು, ಬಟ್ಟೆಗಳು, ಟ್ಯಾಟೂ , ಕೈಯಲ್ಲಿ ಕಟ್ಟಿದ ಬಾಯ್ನಡ್ಗಳು ಯಾವ ಹೀರೋಗಳಿಗೂ ಕಡಿಮೆ ಇಲ್ಲದಂತೆ) ಒಬ್ಬ ಹುಡುಗ ಬಂದು ಹೂವು ತೆಗೆದುಕೊಳ್ಳುವಂತೆ ಒತ್ತಾಯಿಸಲು ಪ್ರಾರಂಭಿಸಿದ, ಅಣ್ಣ ಒಂದ್ ತಗೊಳ್ಳಿ ಅಣ್ಣ ಒಂದ್ ತಗೊಳ್ಳಿ ಬರಿ ೧೦ ರೂಪಾಯಿ ಅಂತ ಸರಿ ನನಗು ಕೂತು ಕೂತು ಬೋರೆಹೊಡಿತಿತ್ತು ಒಂದು ಮಲ್ಲಿಗೆ ದಂಡನ್ನು ಕೊಂಡು ಅವನನ್ನು ಮಾತಿಗೆ ಏಳದೆ. ಏನಾಗಿದ್ಯಂತೋ ಅಲ್ಲಿ ಆಕ್ಸಿಡೆಂಟ್ ಅಂತೆ ಅಣ್ಣ ಅಂದ ನಾನು ನೀನು ನೋಡಿಕೊಂಡು ಬಂದೆಯ ಅಂದೇ ಅವ್ನು ಸ್ವಲ್ಪ ಎಕ್ಸೈಟ್ ಆಗಿ ಎರಡು ಕಾರ್ಗಳಿಗೆ ಆಕ್ಸಿಡೆಂಟ್ ಆಗಿದೆ ಅಣ್ಣ ಅದ್ರಲ್ಲಿ ಒಂದು ಸ್ಪೋರ್ಟ್ಸ್ ಕಾರು ಸೂಪರಾಗಿದೆ ಬರಿ ಟೈಯರ್ ನೋಡ್ಬೇಕು ನೀವು, ಆ ಕಾರಿನ ಅಣ್ಣ ಎಷ್ಟ್ ಫಾಸ್ಟ್ ಆಗಿಬಂದ್ರು ಅಂತೀರಾ ೧೨೦ ನಲ್ಲಿ ಬಂದಿರ್ಬೇಕು ಇನೊಂದ್ ಕಾರ್ವನಿಗೆ ಓಡ್ಸೋಕೆ ಬರ್ದೇ ಗುಡ್ದ್ಬಿಟ್ಟಿದಾನೆ ಅಂತ ಬೈದ ಇಷ್ಟು ಹೇಳಿ ಮತೊಬ್ಬ ಕಸ್ಟಮರ್ ಹುಡುಕಿಕೊಂಡು ಹೊರಟ.

ನಾನು ಇದೇನಪ್ಪ ಒಬ್ಬೊಬ್ಬರು ಒಂದ್ ಒಂದ್ ತರ ಹೇಳ್ತಾರೆ ಅಂತ ಈ ಕುತೂಹಲಕಾರಿ ಕ್ಲೈಮಾಕ್ಸ್ ನೋಡಲು ಸಿದ್ದನಾದೆ, ಅಷ್ಟರಲ್ಲಿ ವೆಹಿಕಲ್ಗಳು ಮೂವ್ ಆಗೋಕೆ ಶುರುವಾಯಿತು ಒಂದ್ ಒಂದ್ ಅಡಿ ಮುಂದೆ ಹೋಗುವಾಗಲೂ ನನಗೆ ಕುತೂಹಲ ಜಾಸ್ತಿ ಆಗ್ತಾ ಇತ್ತು.

ಕೊನೆಗೂ ಆ ಕ್ಲೈಮಾಕ್ಸ್ ಜಾಗ ಬಂದೆ ಬಿಡ್ತು ನೋಡ್ದುದ್ರೆ ಒಂದ್ ಗೂಡ್ಸ್ ಆಟೋ ಮತ್ತೆ ಟೆಂಪೋ ಒಟ್ಟಿಗೆ ಹೋಗಲು ಹೋಗಿ ಸಿಕ್ಕಿಹಾಕಿಕೊಂಡು ನಜ್ಜು ಗುಜ್ಜಾಗಿವಿ ಪಾಪ ಪೊಲೀಸರು ಕಷ್ಟಪಟ್ಟು ಬಿಡಿಸಿ ಜಾಗ ಮಾಡಿಕೊಡುತ್ತಿದ್ದರು. ಆಟೋದ ಬಲಕೆನ್ನೆಗೆ ಪೆಟ್ಟುಬಿದ್ದಿದ್ದರೆ ಟೆಂಪೋದ ಎಡಕೆನ್ನೆಗೆ ಪೆಟ್ಟುಬಿದ್ದಿತ್ತು ಎರಡರ ಏಡ ಮತ್ತು ಬಲ ಕಿವಿಗಳು ಒಂದಕೊಂದು ಸಿಕ್ಕಿಹಾಕಿಕೊಂಡು ಮತ್ತು ಬ್ರಿಡ್ಜ್ನ ಡಿವೈಡರ್ಗೆ ಸಿಕ್ಕಿ ಕಿತ್ತುಹೋಗಿ ನೆಲದಮೇಲೆ ದಾರುಣವಾಗಿ ಬಿದ್ದಿದ್ದವು ಒಟ್ಟಿನಲ್ಲಿ ಎರಡು ವಾಹನಗಳ ಸ್ಥಿತಿ ಗಂಭೀರವಾಗಿತ್ತು ಇಷ್ಟೆಲ್ಲಾ ಆಗಿದ್ದರು ಕೂಡ ಇಬ್ಬರು ಡ್ರೈವೇರ್ಗಳನ್ನು ಬಿಟ್ಟಿರಲಿಲ್ಲ ಅವ್ರ ಸ್ಥಿತಿ ವೆಹಿಕಲ್ಗಳಿಗಿಂತ ದಾರುಣವಾಗಿಯೇ ಕಂಡುಬಂತು ಒಂದ್ಕಡೆ ಅನ್ನ ಕೊಡುವ ಮಾರ್ಗಕ್ಕೆ ಕನ್ನಬಿದ್ದಿದ್ದರೆ ಇನೊಂದು ಕಡೆ ಈ ಪೊಲೀಸರು ಯಾವಾಗ ಬಿಡುತ್ತಾರೋ ಎಂದು ಕಾದು ಕೂರುವ ಪರಿಸ್ಥಿತಿ. ಅಷ್ಟರಲ್ಲಿ ಪೋಲೀಸಿನವನೊಬ್ಬರು ನಿದಾನವಾಗಿ ಸಾಗುತ್ತಿದ್ದ ವಾಹನಗಳಿಗೆ ಮುಂದೆ ಹೋಗಿ ಮುಂದೆ ಹೋಗಿ ಎಂದು ಹೇಳುತಿದ್ದ ನಾನು ಅವರ ಆಜ್ಞೆಯನ್ನು ಪಾಲಿಸುವವನಂತೆ ಬ್ರಿಡ್ಜ್ ದಾಟಿ ಮುಂದೆ ಹೊರಟೆ.

ಮನುಷ್ಯನ ಮನಸ್ಸು ಮತ್ತು ಮಾತಿಗಿರುವ ಶಕ್ತಿ ಇದು ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಮನುಷ್ಯ ತನ್ನ ಕೈಯಲ್ಲಿ ಆಗದನ್ನು ಮಾತಿನಲ್ಲಿ ಅಡಿ ತೀರಿಸಿಕೊಳ್ಳುತ್ತಾನೆ. ಎಂಬಲ್ಲಿಗೆ ನನ್ನ ಜಗಳ ನೋಡುವ ಚಟ ಆ ದಿನಕ್ಕೆ ತೀರಿತು.

 

Leave a Reply

Your email address will not be published. Required fields are marked *