KUK Local Chapters

ಕಾಫಿಯ  ಜೊತೆಗಿಷ್ಟು ಹರಟೆಯ ಹುರುಗಾಳು – “ನಾಗಿನ್”

ಮಂದಗೆರೆ ವಿಶ್ವನಾಥ್ – ಬೆಳೆದದ್ದು ಬೆಂಗಳೂರಿನಲ್ಲಿ. ಮೈಸೂರ್ ಮೆಡಿಕಲ್ ಕಾಲೇಜ್ನಲ್ಲಿ ಓದಿ ಪದವಿ ಪಡೆದು, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ೧೯೯೨ರಿಂದ ಇಂಗ್ಲೆಂಡ್ನಲ್ಲಿ ಇದ್ದೇನೆ. Manchester Royal Eye Hospitalನಲ್ಲಿ  consultant ophthalmologist ಆಗಿ ಕೆಲಸ. ಕನ್ನಡ ಬಳಗದ ಅಜೀವ ಸದಸ್ಯ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯ. ಚೆಶೈರಿನ Poynton ನಲ್ಲಿ ವಾಸ.

 

‘ದ್ಯಾಮವ್ವ! ಮನೀಲಿರೋ ಲಕ್ಶ್ಮೀನಾ ಕಳಸ್ಬ್ಯಾಡ! ಒಳ್ಳೇದಾಗಾಕಿಲ್ಲ!’ ಅಣ್ಣ ಕೊಟ್ರೇಶನ ಮಾತನ್ನು ಕೇಳಿಯೂ  ಕೇಳದವಳಂತೆ ದೂರದ ರಸ್ತೆಯ ಮೇಲೆ ನಿಂತಿದ್ದ ಕಾರನ್ನೇ ನೋಡುತ್ತಿದ್ದಳು ದ್ಯಾಮವ್ವ.ಚಿಂತೆಯ ರೇಖೆಗಳು ಹಣೆಯಲ್ಲಿ ಮೂಡಿದ್ದವು. ಇಂದು ಅವಳ ಜೀವಮಾನದಲ್ಲೇ ದೊಡ್ಡ ಪರೀಕ್ಷೆಯ ಸಮಯವಾಗಿತ್ತು. ಮಗು ದುರ್ಗೆ ಕವಡೆಗಳೊಂದಿಗೆ ಆಡುತ್ತ ಜೋಪಡಿಯ ಮೂಲೆಯೊಂದರಲ್ಲಿ ಕೂತಿದ್ದಳು.

ಕೆಂಪಾಪುರ ೧೦-೧೨ ಗುಡಿಸಲುಗಳ ಒಂದೆರಡು ಮನೆಗಳ ಕುಗ್ರಾಮ. ಮಳೆಯ ಕೃಪಾಕಟಾಕ್ಷವಿಲ್ಲದೆ ಬಿಸಿಲಿನಲ್ಲಿ ಬೆಂದ ಭೂಮಿಯ ಗ್ರಾಮ. ಸಿದ್ಧಲಿಂಗನಿಗೆ ಒಂದು ಗುಂಟೆ ಜಮೀನಿದ್ದರೂ ಅದರಲ್ಲಿ ಹೇರಳೆ ಗಿಡವಲ್ಲದೆ ಬೇರೇನೂ ಬೆಳದಂತಿರಲಿಲ್ಲ. ಮೊದಲೇ ಬರಡು ನಾಡು, ಸಿದ್ಧಲಿಂಗನೂ ಸೋಮಾರಿ. ಸಾರಾಯಿ ಬಿಟ್ಟು ಸ್ವಲ್ಪ ಜಮೀನಿನ ಕಡೆಗೆ ಗಮನ ಹರಿಸಿದ್ದರೆ ಎರಡು ಹೊತ್ತಿಗೆ ಊಟಕ್ಕಾಗುವ ಹಾಗೆ ಜೋಳವನ್ನೋ, ನವಣೆಯನ್ನೋ ಬೆಳೆಯಬಹುದಿತ್ತು. ಕೊಟ್ರೇಶನೂ ಸಿದ್ಧಲಿಂಗನೂ ಸಾರಾಯಿಯಿಂದಾಗಿ ಜೊತೆಗೂಡಿದ್ದರು. ತಂಗಿ ದ್ಯಾಮವ್ವ ವಯಸ್ಸಿಗೆ ಬಂದಾಗ, ಯಾರಿಗೆ ಕೊಟ್ಟು ಮದುವೆ ಮಾಡಿದ್ರೂ ಖರ್ಚೆಂದು ಅರಿತ ಕೊಟ್ರೇಶ, ಗೆಳೆಯ ಸಿದ್ಧಲಿಂಗನನ್ನೇ ಒಪ್ಪಿಸಿ ಮದುವೆ ಮಾಡಿದ್ದ.ಸಿದ್ದಲಿಂಗ ಸ್ವಂತಿಕೆಯಿಲ್ಲದ ಸೋಮಾರಿ. ಹಾಗಾಗಿ ಕೊಟ್ರೇಶನದೇ ಮನೆಯಲ್ಲಿ ಖಾರುಬಾರು.

೫ ವರ್ಷದ ಹಿಂದೆ ಮಗು ಹುಟ್ಟಿದಾಗ ಉಂಟಾದ ಸಡಗರವೆಲ್ಲ ೩ ತಿಂಗಳಲ್ಲೇ ಮಾಯವಾಗಿತ್ತು. ಮೈಯಿನ ಚರ್ಮವೆಲ್ಲ ಒಡಕ, ಕಣ್ಣುಗಳೇಕೋ ಅರ್ಧ ತೆರೆದಂತೆ ಮಾತ್ರವಿದೆ, ಮಗಿವಿನ ಅಳುವಿನ ದನಿಯಲ್ಲಿ ಸೀಟಿಯ ಶಬ್ದ. ಕಾಳಿ ಗುಡಿ ಪೂಜಾರಪ್ಪನಿಗೆ ತೋರಿಸಿದಾಗ ‘ ನಿಮ್ಮನೇಲಿ ನಾಗರವೊಂದು ಹುಟ್ಟಿದೆ. ಶಾಂತಿ ಮಾಡಿಸದಿದ್ರೆ ಊರಿಗೆ ಬರಗಾಲ’ ಎಂದು ಹೆದರಿಸಿದ. ಇದ್ದ ಒಂದು ಬಳೆಯನ್ನು ಮಾರಿ ಪೂಜೆಗೆ ಕೊಟ್ಟಳು ದ್ಯಾಮವ್ವ. ಇವತ್ತು ಸರಿ ಹೋಗತ್ತೆ, ನಾಳೆ ಸರಿ ಹೋಗತ್ತೆ ಹೀಗೆಂದು ೩ ವರ್ಷ ಕಾದರೂ ಏನು ಬದಲಾಗದಾಗ ಪೂಜಾರಪ್ಪನ ಮಂತ್ರದ ಮೇಲಿನ ನಂಬಿಕೆಯೇ ಹೋಯಿತು ದ್ಯಾಮವ್ವನಿಗೆ. ಚುರುಕಿನ ದುರ್ಗಿಯ ಕೂಡ ಬಸ್ತಿಯ ಮಕ್ಕಳಾರೂ ಆಡುತ್ತಿರಲಿಲ್ಲ. ಸೀಳಿ ಹೋದ ಒಡಕು ಚರ್ಮ, ಕಿರಿದಾದ ಕಣ್ಣು, ಮೂಗು, ಬಾಯಿನ ದುರ್ಗಿಯನ್ನು ಮುಟ್ಟಲೂ ಹೇಸಿಗೆಯೋ, ಹೆದರಿಕೆಯೋ, ಅಂತೂ ಬೇರೆ ಮಕ್ಕಳಾರು ಅವ್ಳ ಜೊತೆ ಬೇರೆಯಲಿಲ್ಲ. ಮನೆಯ ಕೋಳಿ, ಮೇಕೆಗಳೊಂದಿಗೆ ಅವಳ ಆಟ. ಬರಡಾದ ಜೀವನದಲ್ಲಿ ಮುಂದಿನ ಊಟಕ್ಕೆ ಯೋಚನೆ ಮಾಡಬೇಕಾದ ಸನ್ನಿವೇಶದಲ್ಲಿ ಮಗಳ ಬಗ್ಗೆ ಎಷ್ಟೇ ಯೋಚನೆ ಬಂದರೂ ಪರಿಹಾರವೇ ಕಾಣದೆ ಹತಾಶಳಾಗಿದ್ದಳು ದ್ಯಾಮವ್ವ.

ಸಂತೆಗೆಂದು ಗದುಗಿಗೆ ಹೋಗಿ ಬಂದ ಕೊಟ್ರೇಶ, ‘ದ್ಯಾಮವ್ವ, ಈರಭಧ್ರ ಟಾಕೀಸ್ನಾಗೇ ಸಿನೆಮಾ ಒಂದು ಬಂದೈತೆ. ಅದರಲ್ಲಿ ಹುಡುಗಿ ಬೇಕಾದಾಗ ಹಾವಾಗ್ತಾಳಂತೆ. ನಾವ್ಯಾಕೆ ದುರ್ಗೆಯೇನ ಹಾವಿನ ಹುಡುಗಿ ಅಂತ ತೋರಿಸಬಾರ್ದು, ದುಡ್ಡು ಬರತೈತೆ ‘ ಅಂದ. ದುಡ್ಡಿಗಾಗಿ ಮಗಳನ್ನು ಯಾರ್ಯಾರೋ ಮುಂದೆ ಹಂಗೆ ಪ್ರದರ್ಶನ ಮಾಡುವುದು ದ್ಯಾಮವ್ವನಿಗೆ ತುಸುವಾದರೂ ಇಷ್ಟವಿರಲಿಲ್ಲ.  ಪಕ್ಕದ ಊರಿಗೆ ಬಂದಿದ್ದ ಶಾಲೆಗೆ ದುರ್ಗಿನ ಸೇರಿಸಬೇಕೆಂದು ಅಸೆ ಪಟ್ಟಿದ್ದ ದ್ಯಾಮವ್ವನ ಮಾತನ್ನು ಕೊಟ್ರೇಶನಾಗಲಿ ಸಿದ್ಧಲಿಂಗನಾಗಲಿ ಹಾಕಿಕೊಳ್ಳಲಿಲ್ಲ. ಈಗೆರಡು ವರ್ಷಗಳಿಂದ ಊರೂರಿನ ಸಂತೆಗಳಿಗೆಲ್ಲ ದುರ್ಗಿಯನ್ನು ಕರೆದುಕೊಂಡು  ಹೋಗಿ “ನಾಗರ ಹುಡುಗಿ”ಅಂತ ತೋರಿಸಿ ದುಡ್ಡು ಮಾಡತೊಡಗಿದರು. ಮನಸ್ಸಿಲ್ಲದಿದ್ದರೂ  ಮನೆಯ ಓಲೆ ಉರಿಯಲು ಸಾಕಾಗುವಷ್ಟು ಹಣ ಬರುತ್ತಿದ್ದರಿಂದ ದ್ಯಾಮವ್ವನೂ ಸುಮ್ಮನಿದ್ದಳು. ಜೀವನ ಪರ್ಯಂತ ಇದೆ ಜೀವನವೇ? ದೊಡ್ಡವಳಾದ ಮೇಲೆ ಯಾರು ಇವಳನ್ನು ಮದುವೆಯಾಗ್ತಾರೆ? ಮುಂತಾದ ಯೋಚನೆಗಳು ಆಗಾಗ್ಗೆ ಬಂದಾಗ, ‘ದ್ಯಾವ್ರೆ ನಾನ್ಯಾವ ಪಾಪ  ಮಾಡಿದ್ದೆ’ ಅಂತ ಕಣ್ಣೇರು ಸುರಿಸುತಿದ್ದಳು.

‘ಅವರು ಕಿರಿಸ್ತಾನರಂತೆ! ನಮ್ಮ ದುರ್ಗಿಯ ಜಾತಿಯನ್ನು ಕೆಡಸ್ತಾರೆ, ಜೋಕೆ!’ ಸಿಟ್ಟಿನಿಂದ ಅಂದ ಕೊಟ್ರೇಶ. ಎಂದಿನಂತೆ ಸಿದ್ಧಲಿಂಗನ ಅಭಿಪ್ರಾಯವೇನೂ ಇರಲಿಲ್ಲ. ಕೊಟ್ರೇಶನ  ಬಾಲಂಗೋಚಿಯಂತೆ ಹ್ಞೂಗೊಡುವುದೇ  ಅವನಿಗೆ ತಿಳಿದದ್ದು. ಪಟ್ಟಣದಿಂದ ಬಂದಿದ್ದ ದಂಪತಿಗಳು ‘ನಾವು ದುರ್ಗಿಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇವೆ. ಓದು ಬರಹ ಕಲೆಸುತ್ತೇವೆ. ನಮ್ಮ ಮಗಳಾಗಿ ಬೆಳೆಸುತ್ತೇವೆ ‘ ಅಂದರು. ದುರ್ಗಿಯನ್ನು ಮನೆ ಬಿಟ್ಟು ಕಳಿಸುವುದು ದ್ಯಾಮವ್ವನಿಗೂ ಇಷ್ಟವಿರಲಿಲ್ಲ. ಇತ್ತ ಅಣ್ಣನ ವಿರೋಧ ಬೇರೆ. ಏನು ಮಾಡುವುದೆಂಬ ಯೋಚನೆಯಲ್ಲಿ ಹಣೆಯಲ್ಲಿ ನೆರಿಗೆಗಳು ಮೂಡಿದ್ದವು.

ಆದರೆ ಎಲ್ಲೋ ಒಂದು ಆಸೆಯ ರೇಖೆಯು ಮೂಡುತಿತ್ತು.

‘ನಡೀರ್ರೀ!  ನಮ್ಮ ದುರ್ಗಿ ಖರೀದಿಗೆ ಇಲ್ಲ!’ ಕೊಟ್ರೇಶ ಜೋರು ಮಾಡುತ್ತ ಬಂದವರನ್ನು ಮನೆಯಿಂದಾಚೆ ಕಳಿಸತೊಡಗಿದಾಗ, ದ್ಯಾಮವ್ವನ ಮನಸ್ಸಿನಲ್ಲಿ ಸಣ್ಣ ಝರಿಯಾಗಿ ಮೂಡಿ ಬಂದ ಮಗಳ ಭವಿಷ್ಯದ ಕನಸು ಭೋರ್ಗರೆಯುತ್ತಾ ಪ್ರವಾಹದೋಪರಿಯಾಗಿ ಹರಿದಿತ್ತು. ‘ ಸ್ವಾಮೇರಾ, ಇರಿ ವಸಿ,’ ಎಂದವಳೇ ಒಂದು ಸೀರೆಯಲ್ಲಿ ದುರ್ಗಿಯ ಲಂಗವನ್ನು, ಅವಳ ಪ್ರೀತಿಯ ಕೋತಿ ಬೊಂಬೆಯನ್ನು ಮತ್ತು ಡಬ್ಬದಲ್ಲಿ ಒಂದಷ್ಟು ಅವಲಕ್ಕಿಯನ್ನು ಕಟ್ಟಿ, ‘ಇನ್ಮೇಲೆ ಇವಳು ನಿಮ್ಮ ಮಗಳು’ ಅಂತ ದುರ್ಗಿಗೆ ಮುತ್ತಿಟ್ಟು ಅವರೊಡನೆ ಕಳಿಸಲುಮುಂದಾದಳು. ‘ನೀನ್ಯಾರೆ ಲೌಡಿ ಅವಳನ್ನು ಬೇರೆ ಮನೆಗೆ ಕಳಿಸೋಕ್ಕೆ’ ಅಂತ ತೂರಾಡಿಕೊಂಡು ಅಡ್ಡ ಬಂದ ಸಿದ್ಧಲಿಂಗು.ದ್ಯಾಮವ್ವನಿಗೆ ಅದೇನು ಶಕ್ತಿ ಬಂತೋ, ಒಂದೇ ಕೈನಿಂದ ಅವನನ್ನು ದೂರ ನೂಕಿದಳು. ಉರುಟಿ ಬಿದ್ದ ಸಿದ್ಧಲಿಂಗನನ್ನು ನೋಡಿ ಕೊಟ್ರೇಶ ಗರ ಬಡಿದವರಂತೆ ಒಂದು ಹೆಜ್ಜೆ ಮುಂದೆ ಹಾಕಲಿಲ್ಲ.  ಏನಾಗುತ್ತಿದ್ದೆಯೇನೆಂಬುದರ ಬಗ್ಗೆ ಪರಿವೆಯೇ ಇಲ್ಲದ ಪುಟ್ಟ ದುರ್ಗಿ ತನ್ನ ಗಂಟಿನೊಂದಿಗೆ ಪಟ್ಟಣದಿಂದ ಬಂದವರ ಜೊತೆ ಕಾರಲ್ಲಿ ಕೂತುಮನೆ ಬಿಟ್ಟೇ ಹೋಯಿತು. ಕಾರು ಮುಂದೆ ಹೊರಟು ದೃಷ್ಟಿಯಿಂದ ಮರೆಯಾದಂತೆ ದ್ಯಾಮವ್ವನ ಮುಖದ ಮೇಲೆ ಕಣ್ಣೀರ ಧಾರೆ. ಅದು ವಿಷಾದದ ಕಣ್ಣೀರೋ ಅಥವಾ ಆನಂದದ ಭಾಷ್ಪವೊ ದೇವರೇ ಬಲ್ಲ.

Harlequin Lchthyosis, a rare variant of Ichthyosis

‘ನರೋನ್ಹಾನವರೇ. ಈ ಹುಡುಗಿಗೆ Ichthyosis ಎಂಬ ಖಾಯಿಲೆಯಿದೆ. ನಮ್ಮ ಚರ್ಮ ಮೃದುವಾಗಿರಲು ಕಾರಣ ಆಗಾಗ್ಗೆ ಹಳೆತ  ಚರ್ಮಜೀವಕೋಶಗಳು ಸವೆದು ಹೊಸ ಚರ್ಮ ಬರುವುದು. ಇದು ನಮಗೆ ಕಾಣದಂತೆ, ಗೊತ್ತಾಗದಂತೆ ನಡೆಯುವ ಕ್ರಿಯೆ. Ichthyosis ಖಾಯಿಲೆಯಲ್ಲಿ, ಚರ್ಮ ಸವೆಯದೆ ಒಂದರಮೇಲೊಂದು ಪದರಗಳು  ಸೇರಿಕೊಂಡು ದಪ್ಪವಾಗಿ ಮಧ್ಯೆ ಬಿರುಕುಗಳಾಗಿ  ನೋಡಲು ಹಾವಿನ ಚರ್ಮದಂತೆಯೋ ಅಥವಾ ಮೀನಿನ ಚರ್ಮದಂತೆಯೋ ಕಾಣುತ್ತದೆ.’ ‘ಡಾಕ್ಟ್ರೇ, ಎಷ್ಟು ದುಡ್ಡಾದರೂ ಆಗಲಿ. ನೀವು ಚಿಕಿತ್ಸೆ ಕೊಡಿ.’ ‘ಹಾಗಲ್ಲ ನರೋನ್ಹಾ! ಪೂರ್ಣ ಗುಣವಾಗುವ ಭರವಸೆಯಿಲ್ಲ, ಆದಷ್ಟು ಚರ್ಮ ಮೃದುವಾಗಲು ಚಿಕಿತ್ಸೆ ಕೊಡುತ್ತೇನೆ. ಜೀವನ ಪರ್ಯಂತ ಆರೈಕೆ ಮಾಡಬೇಕಾಗತ್ತೆ.”ಇನ್ನೊಬ್ಬರ ಮನೆಯ ಲಕ್ಷ್ಮಿ ಇನ್ನು ಮೇಲೆ ನಮ್ಮ ಮನೆಯಲ್ಲಿರಲು  ಬಂದಿದ್ದಾಳೆ. ಇವಳನ್ನು ಚೆನ್ನಾಗೆ ಬಾಳಿಸುವುದೇ ನಮ್ಮ ಕನಸು.’ ಅಂದರು ನರೋನ್ಹಾ. ಮಕ್ಕಳಿಲ್ಲದ ನರೋನ್ಹಾ ದಂಪತಿಗಳು ಕೆಂಪಾಪುರಕ್ಕೆ ಹೋಗಿ ದುರ್ಗಿಯನ್ನು ಕರೆತಂದ ಸಂಗತಿಯನ್ನು, ದುರ್ಗಿಯ ಹಿನ್ನಲೆಯನ್ನು ಹೇಳಿದರು.

ಆ ಹುಡುಗಿಗೆ ಲಕ್ಷ್ಮಿ ಎಂಬ ಹೆಸರನ್ನು ಕೊಟ್ಟು ಅವಳ ಆರೈಕೆ ಶಿಕ್ಷಣ ಎಲ್ಲದರ ವ್ಯವಸ್ಥೆಯನ್ನು ನೋಡಿ ಕೊಂಡಿದ್ದರು ನರೋನ್ಹಾ ದಂಪತಿಗಳು. ೧೫ ವರ್ಷಗಳ ಹಿಂದೆ ಹೀಗೆ ಶುರುವಾಯಿತು ನನ್ನ ಮತ್ತು ಲಕ್ಷ್ಮಿಯ ಸಂಬಂಧ. ಬಾಗಿಲಿನ ಕರೆಗಂಟೆ ಸದ್ದಾಯಿತು. ಬಾಗಿಲು ತೆಗೆದಾಗ ಕಂಡದ್ದು ನಗು ಮೊಗದ ಲಕ್ಷ್ಮಿ.’ ಡಾಕ್ಟರ್ ಅಂಕಲ್, ಮುಂದಿನ ವಾರ ನನ್ನ ಪುಸ್ತಕ ರಿಲೀಸ್ ಆಗ್ತಾ ಇದೆ. ನೀವು ಖಂಡೀತ ಬರಬೇಕು’ ಆಮಂತ್ರಣವನ್ನು ಕೈಗೆ ಕೊಟ್ಟಳು. ಲಕ್ಷ್ಮಿ ಈಗ ೨೦ರ ನವ ಯುವತಿ. ಉದಯೋನ್ಮುಖ ಪ್ರತಿಭೆಯ ಲೇಖಕಿಯೆಂದು ಮಾನ್ಯತೆ ಪಡೆದಿದ್ದಾಳೆ.

ಇಂದು ಭಾನುವಾರ. ಯಾವುದಕ್ಕೂ ಅವಸರವಿಲ್ಲ. ನಿಧಾನವಾಗಿ ಕಾಫಿ ಹೀರುತ್ತಾ ಈ ಹರಟೆಯ ಹುರುಗಾಳನ್ನು ಸವಿಯಿರಿ.  ಅಪರೂಪದ ಅನುಭವಗಳನ್ನು ಹಂಚಿಕೊಳ್ಳಬೇಕೆನಿಸಿತು. ಈ ವಿಷಯದ ಬಗ್ಗೆ ನಿಮ್ಮದೇನಾದರೂ ಅಭಿಪ್ರಾಯವಿದ್ದರೆ ಬರೆಯಿರಿ. ಬಿಡುವುಮಾಡಿಕೊಂಡು ಓದಿದ್ದಕ್ಕೆ ನನ್ನ ಧನ್ಯವಾದಗಳು.

ಮಂದಗೆರೆ ವಿಶ್ವನಾಥ್

vishmand148@yahoo.co.uk

Leave a Reply

Your email address will not be published.