KUK News & Events

Ugadi 2019 – Big Thank You!

ಇದೇ ಏಪ್ರಿಲ್ ೭ ರಂದು ಫೆಲ್ಟಮ್, ಲಂಡನ್ ನಲ್ಲಿ ನಡೆದ ಕನ್ನಡಿಗರುಯುಕೆಯ ಯುಗಾದಿ ೨೦೧೯ ಆಚರಣೆಗೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಆಗಮಿಸಿ ಬೇವುಬೆಲ್ಲ ಸ್ವೀಕರಿಸಿ, ಹಬ್ಬದೂಟವನ್ನು ಸವಿದು, ವಿವಿಧ ಕಾರ್ಯಕ್ರಮಗಳನ್ನು ಮನಸಾರೆ ಆನಂದಿಸಿ, ಕಲಾವಿದರಿಗೆಲ್ಲ ಉತ್ತೇಜನ ನೀಡಿ ಸಕ್ರಿಯವಾಗಿ ಪಾಲ್ಗೊಂಡ, ಎಲ್ಲ ಕನ್ನಡಾಭಿಮಾನಿ ಪ್ರೇಕ್ಷಕರಿಗೂ, ಕನ್ನಡಿಗರುಯುಕೆಯ ಪರವಾಗಿ ಅನಂತಾನಂತ ಪ್ರಣಾಮಗಳು, ಮನದಾಳದ ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ನಮ್ಮ ಸ್ಪೂರ್ತಿ. ಈ ನಿಮ್ಮ ಬೆಂಬಲ ಇನ್ನೂ ಅನೇಕ ಕಾರ್ಯಕ್ರಮಗಳನ್ನು, ಇನ್ನೂ ಅನೇಕ ಕನ್ನಡಕಲಿ ಕೇಂದ್ರಗಳನ್ನು ಪರಿಣಾಮಕಾರಿಯಾಗಿ, ಬೃಹತ್ ಪ್ರಮಾಣದಲ್ಲಿ ಆಂಗ್ಲನಾಡಿನ ಕನ್ನಡ ಸಮುದಾಯಕ್ಕೆ ಮುಟ್ಟಿಸಲು ನೆರವಾಗುವುದರಲ್ಲಿ ಸಂಶಯವಿಲ್ಲ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಾಗಿ ಕೆಲವು ಮಾತುಗಳನ್ನಾಡಿದ ಭಾರತೀಯ ಹೈ ಕಮಿಷನರ್ (ಯುಕೆ) ಗೌರವಾನ್ವಿತ ಶ್ರೀಮತಿ ರುಚಿ ಘನಶ್ಯಾಮ್ ಹಾಗೂ ಕನ್ನಡದಲ್ಲಿ ಮಾತಾಡಿ ಮಾರ್ಗದರ್ಶನ ನೀಡಿದ ಅವರ ಪತಿ, ಕನ್ನಡಿಗ ಎ. ಆರ್. ಘನಶ್ಯಾಮ್ ಅವರಿಗೆ ಕನ್ನಡಿಗರುಯುಕೆ ಹಾಗೂ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು. ಅವರು ನಮ್ಮ ಕೋರಿಕೆಯನ್ನು ಮನ್ನಿಸಿ ಪಾಲ್ಗೊಂಡಿದ್ದು ನಮ್ಮ ಸೌಭಾಗ್ಯ ಮತ್ತು ಕನ್ನಡಿಗರುಯುಕೆಯ ಚಟುವಟಿಕೆಗಳ ಕುರಿತ ಅವರ ಮೆಚ್ಚುಗೆಯ ಮಾತುಗಳು ಹೆಮ್ಮೆಯ ವಿಷಯ. ಅವರ ಜೊತೆಗೂಡಿ ಬಂದಿದ್ದ ಚಿರಪರಿಚಿತ, ಕನ್ನಡಿಗರುಯುಕೆಯ ಮಿತ್ರ, ಭಾರತೀಯ ಹೈ ಕಮಿಷನ್ ನ ಎ ಎಸ್ ರಾಜನ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು. ಇವರೊಂದಿಗೆ ಹಾಜರಿದ್ದ ನೆಹರು ಕೇಂದ್ರದ ಉಪ ನಿರ್ದೇಶಕ ಬೃಜ್ ಕುಮಾರ್ ಗುಹಾರೆಗೂ ಧನ್ಯವಾದಗಳು. ಎಂದಿನಂತೆ ಸದಾ ಬೆಂಬಲ ನೀಡಿ ನಮ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಲ್ಯಾಮ್ಬೆತ್ ನ ಮಾಜಿ ಮೇಯರ್ ನಮ್ಮ ಕನ್ನಡಿಗ ಡಾ|| ನೀರಜ್ ಪಾಟೀಲ್ ರವರಿಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಲೆ ಮತ್ತು ಪ್ರತಿಭಾ ಪ್ರದರ್ಶನಾದಿಂದ ಸಭಿಕರನ್ನು ಮನರಂಜಿಸಿದ ಎಲ್ಲ ಕಲಾವಿದರಿಗೂ ಕನ್ನಡಿಗರುಯುಕೆಯು ಆಭಾರಿಯಾಗಿರುತ್ತದೆ. ಇಲ್ಲಿ ವಿಶೇಷವಾಗಿ ಕನ್ನಡಿಗರುಯುಕೆಯ ಕನ್ನಡಕಲಿ ಚಿಣ್ಣರ ಪ್ರತಿಭೆ ಮತ್ತು ಕನ್ನಡ ಕಲಿಕೆಯ ಪ್ರದರ್ಶನ ಪ್ರಶಂಸಾರ್ಹ. ಆ ಎಲ್ಲ ಪುಟಾಣಿಗಳಿಗೂ, ಅವರ ಹೆತ್ತವರಿಗೂ ಮತ್ತು ತರಬೇತಿ ನೀಡಿದ ಕನ್ನಡಕಲಿ ಶಿಕ್ಷಕಿಯರಿಗೆಲ್ಲ ಕನ್ನಡಿಗರುಯುಕೆಯು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆ, ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ, ಜಾನಪದ ಹಾಗು ರಂಗಗೀತೆಗಳ ಕಲಾವಿದೆ ಅನನ್ಯ ಭಟ್ ತಮ್ಮ ಸುಮಧುರ ಕಂಠದಿಂದ ಹಾಡಿ ಪ್ರೇಕ್ಷಕರೆಲ್ಲ ಹುಚ್ಚೆದ್ದು ಕುಣಿದು “ಮೆಂಟಲ್ ಹೊಜಾವ” ಮಾಡಿ ನಮ್ಮ ಯುಗಾದಿ ಹಬ್ಬಕ್ಕೆ ವಿಶೇಷ ಮೆರುಗನ್ನು ತಂದಿದ್ದನ್ನು ನಾವು ಎಂದೂ ಮರೆಲಾರೆವು. ಎಲ್ಲ ಕನ್ನಡಿಗರ ಪರವಾಗಿ ಅನನ್ಯ ಭಟ್ ಗೆ ವಿಶೇಷ ಕೃತಜ್ಞತೆಗಳು. ಈ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ವಹಿಸಿದ ವಿದ್ಯಾರಾಣಿಯವರಿಗೂ ಕನ್ನಡಿಗರುಯುಕೆಯಿಂದ ಧನ್ಯವಾದಗಳು

ನಮ್ಮ ಕಾರ್ಯಕ್ರಮಗಳ ಜೀವನಾಡಿಯಾಗಿ ತಮ್ಮ ಧನಸಹಾಯದಿಂದ ನಮ್ಮ ಚಟುವಟಿಕೆಗಳಿಗೆ ಬೆಂಬಲವಾಗಿರುವ ಎಲ್ಲ ಪ್ರಾಯೋಜಕರಿಗೂ ಕನ್ನಡಿಗರುಯುಕೆ ಚಿರಋಣಿಯಾಗಿರುತ್ತದೆ. ಕಾರ್ಯಕ್ರಮದ ಯಶಸ್ಸಿನ ಪಾಲಿನಲ್ಲಿ ಧ್ವನಿ ವ್ಯವಸ್ಥೆ ಒದಗಿಸಿದ ಜಾಸ್ ಲೈವ್ ನ ಶ್ರೀನಾಥ್ ಗೂ, ಸ್ವಾದಿಷ್ಟಕರ ಅಧಿಕೃತ ಕರ್ನಾಟಕ ಹಬ್ಬದೂಟ ಸರಬರಾಜು ಮಾಡಿದ ಅಶೋಕ್ ಭಟ್ ಅವರಿಗೂ ನಮ್ಮ ಕೃತಜ್ಞತೆಗಳು. ಈ ಎಲ್ಲ ಸುಂದರ ಕ್ಷಣಗಳನ್ನು ಛಾಯಾಚಿತ್ರಗಳ ಮೂಲಕ ಸೆರೆಹಿಡಿದು ನೆನಪುಗಳನ್ನು ಸದಾ ಹಸಿರಾಗಿರಿಸಿದ್ದಕ್ಕಾಗಿ ವೇಣು ಕ್ಲಿಕ್ಸ್ ಕ್ರಿಯೇಟಿವ್ ಸ್ಟುಡಿಯೋದ, ಕನ್ನಡಿಗರುಯುಕೆ ಕಾರ್ಯಕರ್ತ ವೇಣು ಭಾರದ್ವಾಜ್ ಗೆ ನಾವೆಲ್ಲಾ ಆಭಾರಿಯಾಗಿರುತ್ತೇವೆ ಇದಲ್ಲದೆ ಬಾರ್ ಕೋಡೆಡ್ ಟಿಕೆಟಿಂಗ್ ಸೇವೆಯನ್ನು ಒದಗಿಸಿದ್ದಕ್ಕಾಗಿಯೂ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಪ್ರತಿ ಬಾರಿಯಂತೆ ನಮ್ಮ ಕಾರ್ಯಕ್ರಮಗಳ ಬೆನ್ನೆಲುಬಾಗಿರುವ ಎಲ್ಲ ಸ್ವಯಂಸೇವಕರಿಗೂ, ಕಾರ್ಯಕಾರಿ ಸಮಿತಿಯ ಸದಸ್ಯರಿಗೂ ಕನ್ನಡಿಗರುಯುಕೆ ಚಿರಋಣಿಯಾಗಿರುತ್ತದೆ. ನಮ್ಮ ಕಾರ್ಯಕ್ರಮದ ಪ್ರಚಾರಕ್ಕೆ ಬೆಂಬಲ ಮತ್ತು ಇನ್ನಿತರ ಸಹಾಯ ನೀಡಿದ ನಮ್ ರೇಡಿಯೋ ಸಂಸ್ಥೆಗೆ ನಮ್ಮ ಧನ್ಯವಾದಗಳು.

ಈ ಕಾರ್ಯಕ್ರಮ ನಮ್ಮ ನೆಚ್ಚಿನ ಕನ್ನಡಿಗ, ಕನ್ನಡಿಗರುಯುಕೆ ರೂವಾರಿ, ಮಾಜಿ ಚೇರ್ಮನ್ ದಿವಂಗತ ಪವನ್ ಮೈಸೂರ್ ಗೆ ಒಂದು ಅರ್ಪಣೆ. ಈ ಸಂದರ್ಭದಲ್ಲಿ ಹಾಜರಿದ್ದು ಪವನ್ ಸ್ಮರಣೆಯಲ್ಲಿ ಭಾಗಿಯಾಗಿದ್ದಕ್ಕಾಗೆ ಶ್ರೀಮತಿ ಅರ್ಚನಾ ಪಿ ಮೈಸೂರ್ ಅವರಿಗೆ ನಮ್ಮ ನಮನಗಳು.

ಕನ್ನಡ ಭಾಷೆ ಹಾಗೂ ಸಂಸ್ಕೃತಿ ಯನ್ನು ಆಂಗ್ಲನಾಡಿನಲ್ಲಿ ಪಸರಿಸುವುದರಲ್ಲಿ, ಕನ್ನಡ ಸಮುದಾಯದ ಸೇವೆಯಲ್ಲಿ ನಿರಂತರ ನಿರತವಾಗಿರುವ ಕನ್ನಡಿಗರುಯುಕೆಗೆ ಬೆಂಬಲ, ಪ್ರೋತ್ಸಾಹ ನೀಡುತ್ತಿರುವ ಆಂಗ್ಲನಾಡಿನ ಎಲ್ಲ ಕನ್ನಡಿಗರಿಗೂ ಮತ್ತೊಮ್ಮೆ ಕೃತಜ್ಞತೆಗಳು.

Leave a Reply

Your email address will not be published. Required fields are marked *