KUK Local Chapters

ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡ ಸಂಘಗಳ ಡಿಂಡಿಮ

ಯುನೈಟೆಡ್ ಕಿಂಗ್ಡಮ್ ನಲ್ಲಿ ಸಾಕಷ್ಟು ಕನ್ನಡಿಗರಿದ್ದಾರೆ, ಕನ್ನಡ ಬುದ್ದಿ ಜೀವಿಗಳಿದ್ದಾರೆ, ಉತ್ತಮ ಬರಹಗಾರರಿದ್ದಾರೆ, ಸಂಗೀತ, ಕಲೆ ಹಾಗೂ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿರುವರಿದ್ದಾರೆ, ಚಲನ ಚಿತ್ರದಲ್ಲಿ ಬಂಡಾಯ ಹೂಡಿ ನಿರ್ಮಾಪಕರಾಗಿರುವರೂ ಇದ್ದಾರೆ! ಇದಕ್ಕಿಂತ ಹೆಚ್ಚಾಗಿ ನಮ್ಮ ಸಾಮಾನ್ಯ ಕನ್ನಡಿಗನು ಇಲ್ಲಿ ಡಾಕ್ಟರ್ ಅಥವಾ ಇಂಜಿನಿಯರ್ ಆಗಿ ಒಳ್ಳೆಯ ಜೀವನ ನಡೆಸಿಕೊಂಡು ಹೋಗುತ್ತಿದ್ದಾನೆ. ಆದರೆ ಕನ್ನಡ ಭಾಷೆಯ ವಿಷಯ ಬಂದಾಗ ನಾವು ಎಲ್ಲರೂ ಕನ್ನಡ ಬೆಳೆಸೋಣ, ಉಳಿಸೋಣ ಎಂಬ ದ್ಯೇಯದಿಂದ ಒಳ್ಳೆಯ ಭಾವನೆಯಂತೂ ವ್ಯಕ್ತಪಡಿಸುತ್ತೇವೆ ಆದರೆ ನಿಜವಾಗಿಯೂ ಈ ಭಾವನೆ ಇಲ್ಲಿಯ ಕನ್ನಡ ಸಂಘಗಳ ಮೂಲಕ ಹೇಗೆ ಪಸರಿಸಲಾಗುತ್ತಿದೆ ಎಂಬುದನ್ನು ನಾವು ತಿಳಿಯಬೇಕಾಗಿದೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಇಲ್ಲಿ ಕನ್ನಡ ಸಿನಿಮಾಗಳು ಹಾಗೂ ಕರ್ನಾಟಕದಿಂದ ಬಂದ ಕಲಾವಿದರಿಂದ ವಿಶೇಷ ಕಾರ್ಯಕ್ರಮಗಳೂ ಹೆಚ್ಚಾಗುತ್ತಿವೆ. ಹೆಚ್ಚಿನದಾಗಿ ಇವೆಲ್ಲ ಟಿಕೆಟ್ ಹಣ ಕೊಟ್ಟು ಹೋಗುವಂತಹ ಕಾರ್ಯಕ್ರಮಗಳು. ಎಲ್ಲೆಲ್ಲಿ ಒಳ್ಳೆಯ ಕಾರ್ಯಕ್ರವಿರುತ್ತದೋ, ಎಲ್ಲೆಲ್ಲಿ ಒಳ್ಳೆಯ ಪ್ರಖ್ಯಾತ ಕಲಾವಿದರಿರುತ್ತಾರೋ, ಅಲ್ಲಲ್ಲಿ ಟಿಕೆಟ್ ಫುಲ್ ಸೇಲ್ ಆಗುವದಂತೂ ಖಂಡಿತ. ಹೀಗೆಯೇ ಒಂದು ಒಳ್ಳೆಯ ಸಿನಿಮಾ ಬಂದರೆ, ಒಬ್ಬ ಜನ ವಿಖ್ಯಾತ ಕಲಾವಿದ ಬಂದಾಗ ಜನ ಕ್ಯೂ ನಿಂತು ಟಿಕೆಟ್ ತಕೊಂಡು ನೋಡುತ್ತಾರೆ. ಈ ರೀತಿ ಆಕರ್ಷಣೆಯುಳ್ಳ ಕಾರ್ಯಕ್ರಮಗಳಿಗೆ ಜನರ ಬೆಂಬಲ ಇಲ್ಲಿ ಸದಾ ಇರುತ್ತದೆ ಎಂಬುದು ಸಾಮಾನ್ಯ ಎಲ್ಲರೂ ತಿಳಿದಿರುವ ವಿಷಯ. ಅದಲ್ಲದೇ ಇಲ್ಲಿ ಯುಗಾದಿ, ದೀಪಾವಳಿ ಹಾಗೂ ರಾಜ್ಯೋತ್ಸವದ ಸಮಯ ಬಂದಾಗ, ಸುಮಾರು ಹತ್ತು ಹದಿನೈದು ಕನ್ನಡ ಸಂಘಗಳು ಒಂದಾದ ಮೇಲೆ ಇನ್ನೊಂದು ತಮ್ಮದೇ ಆದ ಒಂದು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಲಂಡನ್, ಹ್ಯಾರೋ, ರೇಡಿಂಗ್, ನ್ಯೂಬರಿ, ಡಾರ್ಸೆಟ್, ಬ್ರಿಸ್ಟಲ್, ಕಾರ್ಡಿಫ್, ಮ್ಯಾಂಚೆಸ್ಟರ್, ಸ್ಕಾಟ್ಲೆಂಡ್, ಕೇಂಬ್ರಿಜ್ ಹೀಗೆ ಅಲ್ಲಲ್ಲಿಯ ಕನ್ನಡಿಗರು ತಮ್ಮದೇ ಆದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಹೀಗೆ ಇಷ್ಟೊಂದು ಪ್ರದೇಶಗಳಲ್ಲಿ ಕನ್ನಡದ ಕಂಪು ಪಸರಿಸಬೇಕೆಂದರೆ ಅದಕ್ಕೊಂದು ಉತ್ತೇಜಕ ಸ್ಫೂರ್ತಿ ಇರಬೇಕಲ್ಲವೇ?
ಇದೆಲ್ಲ ವಿಶ್ಲೇಷವಾಗಿ ಅರಿತುಕೊಳ್ಳಬೇಕೆಂದರೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಹೇಗೆ ನಮ್ಮ ಫಸ್ಟ್ ಜನರೇಶನ್ ಕನ್ನಡಿಗರು ಬಂದರು? ಅವರು ಎಲ್ಲಿಂದ ಒಟ್ಟುಗೂಡಿದರು ಎಂದು ಅರಿತುಕೊಳ್ಳುವದು ಮುಖ್ಯವಾದಂತದ್ದು. ಇದಕ್ಕೆ ಒಂದು ಸಿಂಪಲ್ ಟೆಸ್ಟ್ ಮಾಡಿ ನೋಡಿ. ಗೂಗಲ್ ಹೋಗಿ “UK Kannadigas ” ಎಂದು ಸರ್ಚ್ ಮಾಡಿ ನೋಡಿ!
ಸರ್ಚ್ ಮಾಡಿ ನೋಡಿದರೆ ಸಾಮಾನ್ಯವಾಗಿ ಬರುವುದು ಕನ್ನಡ ಬಳಗ ಹಾಗೂ ಕನ್ನಡಿಗರುಯುಕೆ ಅಂತರ್ಜಾಲ ವಿಳಾಸ.
ಕನ್ನಡ ಬಳಗ ಸಂಸ್ಥೆ ಶುರುವಾಗಿದ್ದು ೧೯೮೩ ರಲ್ಲಿ. ಕಳೆದ ೩೫ ವರ್ಷದಿಂದ ಈ ಸಂಸ್ಥೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಹಲವಾರು ಕನ್ನಡ ಚಟುವಟಿಕೆಗಳನ್ನು ಮುಖ್ಯವಾಗಿ ನಮ್ಮ ಕರ್ನಾಟಕದ ಸಾಹಿತ್ಯ, ಕಲೆ, ಸಂಗೀತ ಹಾಗೂ ಇನ್ನನೇಕ ಕಲೆ, ಸಂಸ್ಕೃತಿಗಳನ್ನು ಯುಗಾದಿ ಹಾಗೂ ದೀಪಾವಳಿ ಹಬ್ಬಗಳನ್ನು ಆಯೋಜಿಸುವ ಮುಖಾಂತರ ಪಸರಿಸುತ್ತಾ ಬರುತ್ತಿದೆ. ಯುನೈಟೆಡ್ ಕಿಂಗ್ಡಮ್ ನಲ್ಲಿ ಇರುವ ಕನ್ನಡ ಸಂಘಗಳಲ್ಲಿ ಕನ್ನಡ ಬಳಗ ಒಂದು ಪ್ರತಿಷ್ಠಿತ ಹಾಗೂ ಅತಿ ಶ್ರೀಮಂತ ಕನ್ನಡ ಸಂಘ ಹೇಳಿದರೆ ತಪ್ಪಲ್ಲ. ಹಲವಾರು ವರ್ಷಗಳ ಹಿಂದೆ ಕರ್ನಾಟಕ ಪ್ರದೇಶಗಳಿಂದ ಬಂದಿರುವ ಡಾಕ್ಟರ್ಸ್ ತಮ್ಮ ತ್ಯಾಗ ತಪಸ್ಸಿನಿಂದ ಬೀಜ ಬಿತ್ತಿ, ಪೋಷಿಸಿ ಬೆಳೆಸಿರುವ ಸಂಘ, ಕನ್ನಡ ಬಳಗ. ಸುಮಾರು ೬೦೦ ಕ್ಕೂ ಹೆಚ್ಚು ಅಜೀವ ಸದಸ್ಯರಿರುವ ಸಂಘ, ಕನ್ನಡ ಬಳಗ. ನೀವೇ ಊಹಿಸಿ, ೭೦ ಹಾಗೂ ೮೦ ರ ದಶಕದಲ್ಲಿ ಇಲ್ಲಿ ಬಂದು ನೆಲೆಸಿರುವ ಕನ್ನಡಿಗರಿಗೆ ನಮ್ಮ ಕನ್ನಡ ಭಾಷೆಯನ್ನು ಕೇಳಬೇಕಾದಲ್ಲಿ ಎಷ್ಟೊಂದು ಮೈಲು ಪ್ರಯಾಣ ಮಾಡಿ ಹೋಗಬೇಕಾಗಿತ್ತು ಅಂತ. ನಾನು ೨ ವರ್ಷಗಳ ಹಿಂದೆ ಅರವಿಂದ್ ಕುಲಕರ್ಣಿ ಹಾಗೂ ಸ್ನೇಹ ಕುಲಕರ್ಣಿ ದಂಪತಿಗಳನ್ನು ಮೊಟ್ಟ ಮೊದಲು ಭೇಟಿಯಾದಾಗ ಅವರಲ್ಲಿ ಕಂಡ ಭಾಷಾಭಿಮಾನದ ಬಗ್ಗೆ ಈ ಬರಹದ ಮೂಲಕ ವಿವರಿಸಲು ಅಸಾಧ್ಯ. ಅವರಂತೆಯೇ ಹಲವಾರು ಗಣ್ಯ ಡಾಕ್ಟರ್ಸ್ ಕಟ್ಟಿರುವ ಸಂಘ, ಕನ್ನಡ ಬಳಗ. ಕನ್ನಡ ಬಳಗದ ಪ್ರೇರಣೆಯಿಂದಲೇ, ಅನಿವಾಸಿ ಬರಹಗಾರರ ಒಕ್ಕೂಟ ಶುರುವಾಗಿದ್ದು ಹಾಗೂ ಹಲವಾರು ಕನ್ನಡಿಗರು ಸಾಹಿತ್ಯದಲ್ಲಿ ಅಭಿರುಚಿಯನ್ನಿಟ್ಟು ಅದನ್ನು ಇಲ್ಲಿ ಬೆಳೆಸಿ ಪೋಷಿಸುವ ಪ್ರಯತ್ನ ಮಾಡುತ್ತಿರುವದು ನನಗೆ ತಿಳಿದ ವಿಷಯ. ಚಾರಿಟಿ ಸಂಸ್ಥೆಯಾದ ಕನ್ನಡ ಬಳಗ ಇಂದು ಸಾಮಾಜಿಕ ಜಾಲತಾಣದಲ್ಲಿ ಅಷ್ಟೊಂದು ಸಕ್ರೀಯವಾಗಿಲ್ಲದಿದ್ದರೂ, ತುಂಬು ಅಭಿಮಾನದಿಂದ ಸಂಸ್ಥೆಯ ಮೆಂಬರ್ಸ್ ಹಿತಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಾ ಇದೆ.
೨೦೦೪ – ೨೦೦೫ ರಲ್ಲಿ ಶುರುವಾದ ಇನ್ನೊಂದು ಕನ್ನಡ ಸಂಘ ಕನ್ನಡಿಗರುಯುಕೆ. ಲಂಡನ್ ಪ್ರದೇಶದ ಸುತ್ತ ಮುತ್ತ ಇರುವ ಕನ್ನಡಿಗರು ಒಂದಾಗಿ ಮುಖ್ಯವಾಗಿ ರಾಜ್ಯೋತ್ಸವ ಆಚರಣೆಯಿಂದ ಖ್ಯಾತಿಯಾದ ಈ ಸಂಸ್ಥೆಯಲ್ಲಿ ನಾನೂ ಕೂಡ ಸದ್ಯದ ಕಾರ್ಯನಿರ್ವಾಹಕ ಪ್ರತಿನಿಧಿ. ಕನ್ನಡಿಗರುಯುಕೆ ಮುಖ್ಯವಾಗಿ ರೇಡಿಂಗ್ ಎಂಬ ಲಂಡನ್ ಹತ್ತಿರದ ಪಟ್ಟಣದಲ್ಲಿ ಹುಟ್ಟಿಕೊಂಡ ಸಂಘ. ಶ್ರೀಮತಿ ಗಾಯತ್ರಿ ವಿನಯ ಹಾಗೂ ಅವರ ಹಲವಾರು ಸ್ನೇಹಿತರು ಒಳಗೂಡಿ ಕನ್ನಡಿಗರುಯುಕೆ ಸಂಘಟನೆಯನ್ನು ಶುರು ಮಾಡಿದ್ದು. ಲಂಡನ್ ಅಕ್ಕ ಪಕ್ಕ ಐ ಟಿ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡಿರುವರು ಸಾಕಷ್ಟು ಜನರಿದ್ದಾರೆ ಎಂದು ನಿಮಗೆಲ್ಲ ಗೊತ್ತಿರುವ ವಿಷಯವೇ. ಕಮ್ಯೂನಿಟಿ ಇಂಟರೆಸ್ಟ್ ಕಂಪನಿ ಎಂದು ನೋಂದಾಯಿಸಿಕೊಂಡಿರುವ ಕನ್ನಡಿಗರುಯುಕೆ ಸಂಸ್ಥೆಯ ಕಾರ್ಯಕ್ರಮಕ್ಕೆ ಹೆಚ್ಚಿನದಾಗಿ ಲಂಡನ್ ಸುತ್ತ ಮುತ್ತ ಇರುವ ಕನ್ನಡಿಗರು ಬರುವುದು ಸಾಮಾನ್ಯ . ಸದಸ್ಯತ್ವದ ಶುಲ್ಕ ಕನ್ನಡ ಬಳಗದ ಅರ್ಧಕ್ಕಿಂತ ಕಮ್ಮಿ. ಕನ್ನಡಿಗರುಯುಕೆ ಸದಸ್ಯರಾದವರಿಗೆ ಕೆಲವೊಮ್ಮೆ ಸ್ಪೆಷಲ್ ಡಿಸ್ಕೌಂಟ್ ಸಿಗುತ್ತದೆಯೇ ಹೊರತು ಆಫೀಸ್ ಬೀರೆರ್ಸ್ ಅಥವಾ ಛೇರ್ಮನ್ ಆಯ್ಕೆಯಲ್ಲಿ ಅವರ ಭಾಗವಹಿಕೆ ಇಲ್ಲ. ಹೆಚ್ಚಿನ ಬಂಡವಾಳ ಇಲ್ಲದಿದ್ದರೂ, ಕಿಸೆ ತೂತಾದರೂ ಕನ್ನಡಿಗರುಯುಕೆ ಸಂಸ್ಥೆಯು ನಿರಂತರವಾಗಿ ಹಲವಾರು ಕರ್ನಾಟಕದ ಯುವ ಕಲಾವಿದರನ್ನು ಕಾರ್ಯಕ್ರಮಕ್ಕೆ ಕರೆಸಿ, “ಕನ್ನಡ ಕಲಿ” ಎಂಬ ಕನ್ನಡ ತರಬೇತಿ ಕಾರ್ಯಕ್ರಮವನ್ನು ಇಂಗ್ಲೆಂಡ್ನಲ್ಲಿ ಹುಟ್ಟಿ ಬೆಳೆಯುತ್ತಿರುವ (ಕನ್ನಡಿಗರ) ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಸಂಸ್ಥೆಯ ಚಾಪ್ಟರ್ಸ್ – ಗಳಾದ ಬೇಸಿಂಗ್ ಸ್ಟೋಕ್, ಹ್ಯಾರೋ ಹಾಗೂ ಮಿಲ್ಟನ್ ಕೇನ್ಸ್ ನಲ್ಲಿ ಸ್ವಯಂಸೇವಕ ಶಿಕ್ಷಕರಿಂದ ಕಳೆದ ೧೦ ವರ್ಷಗಳಿಂದ ಉಚಿತವಾಗಿ ನಡೆಸಿಕೊಂಡು ಬರುತ್ತಾ ಇದೆ. ಇದಲ್ಲದೇ ಇನ್ನಿತರ ಕೇಂದ್ರಗಳಲ್ಲಿ ಕೂಡ ಕನ್ನಡ ಕಲಿ ಶಿಬಿರಗಳನ್ನು ನಡೆಸುತ್ತಿರುವ ಶ್ರೇಯಸ್ಸು ಕನ್ನಡಿಗರುಯುಕೆ ಸಂಸ್ಥೆಗೆ ಸಲ್ಲುತ್ತದೆ. ಇನ್ನೊಂದು ಕನ್ನಡ ಸಂಘ ಸ್ಕಾಟಿಷ್ ಕನ್ನಡ ಸಂಘ ೨೦೦೨ ರಲ್ಲಿ ಶುರುವಾಗಿರುವದು ಗಮನಿಸುವಂತಹ ವಿಷಯ. ಸ್ಕಾಟಿಷ್ ಕನ್ನಡ ಸಂಘದ ಸ್ಥಾಪನೆ ಬಗ್ಗೆ ಬರೆಯಲು ಹೆಚ್ಚಿನ ವಿವರಗಳಿಲ್ಲವಾದರೂ ಈ ಸಂಘ ಸ್ಕಾಟ್ಲೆಂಡ್ ನಲ್ಲಿ ಒಳ್ಳೆಯ ಕನ್ನಡ ಕಾರ್ಯಕ್ರಮಗಳನ್ನು ಹಲವಾರು ವರ್ಷಗಳಿಂದ ಹಮ್ಮಿಕೊಂಡು ಬರುತ್ತಾ ಇದೆ.
೨೦೧೫ ರ ವರೆಗೆ ಕನ್ನಡ ಬಳಗ ಹಾಗೂ ಕನ್ನಡಿಗರುಯುಕೆ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಕ್ಕೆ ಕನ್ನಡಿಗರು ದೂರ ದೂರದಿಂದ ಪ್ರಯಾಣ ಮಾಡಿ ಭಾಗವಹಿಸುತ್ತಿರುವುದು ಸಾಮಾನ್ಯವಾಗಿತ್ತು. ಈಗಲೂ ಕನ್ನಡಿಗರು ದೂರ ದೂರ ಪ್ರದೇಶಗಳಿದ ಕಾರ್ಯಕ್ರಮಕ್ಕೆ ಬರುತ್ತಾರೆ ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಇಂಗ್ಲೆಂಡ್, ಸ್ಕಾಟ್ಲೆಂಡ್ ಹಾಗೂ ವೇಲ್ಸ್ ಪ್ರದೇಶಗಲ್ಲಿರುವ ಮೂಲೆ ಮೂಲೆಯಲ್ಲಿರುವ ಕನ್ನಡಿಗರು ತಮ್ಮದೇ ಆದ ಗುಂಪು ಕಟ್ಟಿ ಹಲವಾರು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವದು ಈಗ ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಉತ್ತೇಜಕ ಸ್ಫೂರ್ತಿ ಏನೆಂಬುದನ್ನು ಮೊದಲು ಕೇಳಿದ ಪ್ರಶ್ನೆಗೆ ನನ್ನ ಉತ್ತರ ಸರಳವಾಗಿದೆ ಅಂದುಕೊಂಡಿದ್ದೇನೆ. ಯಾವುದೇ ಕನ್ನಡ ಸಂಘವು ಬೆಳೆಯಬೇಕಾದರೆ ಸ್ವ ಮನಸ್ಸಿನ ಕನ್ನಡಿಗರ ಒಂದು ಸಂಘಟನೆ ರೂಪುಗೊಳ್ಳುವದು ತುಂಬಾ ಮುಖ್ಯವಾದದ್ದು. ಮೊದಲು ಕನ್ನಡ ಬಳಗವೇ ಆಗಲಿ ಅಥವಾ ಕನ್ನಡಿಗರುಯುಕೆಯೇ ಆಗಲಿ, ಸಂಘ ಶುರುವಾಗಿದ್ದು ಒಂದೆರಡು ಪ್ರಭಾವಿ ಕನ್ನಡಿಗರು ಮುಂದೆ ಬಂದು, ಒಬ್ಬನ ಅಥವಾ ಇಬ್ಬರ ನಾಯಕತ್ವದಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿದ್ದು. ಕನ್ನಡ ಬಳಗ ಶುರುವಾದಾಗ ಬಹುಶಃ ಒಬ್ಬರು ಇನ್ನೊಬ್ಬರ ಮನೆಗೆ ಯಾವುದಾದ್ರೂ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮಾತ್ರ ಈ ಥರ ಸಂಘ ಸಂಸ್ಥೆಗಳ ಬಗ್ಗೆ ಮುಖ ಮುಖಿ ಮಾತುಕತೆ ಆಗುತ್ತಿತ್ತೇನೋ! ಬೇರೆ ಯಾವುದೇ ತ್ವರಿತ ಸಂಭಾಷಣೆಗೆ ಆಸ್ಪದ ಇರುತ್ತಿರಲಿಲ್ಲ. ಆಗೆಲ್ಲ ಫೇಸ್ಬುಕ್ ಇದೆ ಅಂತ ಯಾರಿಗಾದ್ರೂ ಗೊತ್ತಿತ್ತಾ? ಫೇಸ್ಬುಕ್ ಶುರು ಆಗಿದ್ದೆ ೨೦೦೪ ರಲ್ಲಿ… ಆಗಿನ ಕಾಲದಲ್ಲಿ ಏಪ್ರಿಲ್ ನಲ್ಲಿ ಯುಗಾದಿ ಇದೆಯಪ್ಪಾ ಎಲ್ಲರೂ ಬನ್ನಿ ಎಂದು ಯಾರಿಂದಲೋ ಸಂದೇಶ ಕಳಿಸಬೇಕಾಗಿತ್ತು.
೨೦೦೦ ನೇ ಇಸವಿಯ ನಂತರ ಇಮೇಲ್ ಮಾಧ್ಯಮ ಹೆಚ್ಚಾಗಿರುವದರಿಂದ ಇಮೇಲ್ ನಲ್ಲಿ ಮೆಸೇಜ್ ಕಳುಹಿಸಲಾಗುತ್ತಿತ್ತು. ಕನ್ನಡಿಗರುಯುಕೆ ಶುರುವಾದ ಮೇಲೆ ಒಂದು ಯಾಹೂ ಗ್ರೂಪ್ ಶುರು ಮಾಡಲಾಯಿತು. KUK runs Yahoo Group for its Members ಎಂದು KUK ಅಂತರ್ಜಾಲದಲ್ಲಿ ಬೋಲ್ಡ್ ಆಗಿ ಬರೆಯಲಾಗಿತ್ತು.
೨೦೧೫ ರ ವರೆಗೂ ಬೆರಳೆಣಿಸುವಷ್ಟು ಕನ್ನಡ ಸಂಘಗಳಿದ್ದವು. ನನಗಿನ್ನೂ ನೆನಪಿದೆ, ೨೦೧೪ ರಲ್ಲಿ ಕನ್ನಡಿಗರುಯುಕೆ ದಶಮಾನೋತ್ಸವ ಸಮಯದಲ್ಲಿ ದಿನಕ್ಕೆ ೧೦ ರಿಂದ ೧೨ ಎಮೈಲ್ಸ್ ನಮ್ಮ ಕಮಿಟಿ ಜೊತೆ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಇವೆಂಟ್ ಮುಂಚೆ ವಾರಕ್ಕೆ ಎರಡು ಕಾನ್ಫರೆನ್ಸ್ ಕಾಲ್ ಇರುತ್ತಿತ್ತು. ನಾವೆಲ್ಲ ಮೆಂಬರ್ಸ್ ಫೋನ್ ಲಿಸ್ಟ್ ಇಟ್ಟುಕೊಂಡು ಪ್ರೋಗ್ರಾಮ್ ಗೆ ಬನ್ನಿ ಎಂದು ಎಲ್ಲರಿಗೂ ಫೋನ್ ಹೊಡೀತಿದ್ವಿ. ವಾಟ್ಸಪ್ಪ್ ಕಂಪನಿ ಶುರುವಾಗಿದ್ದು ೨೦೦೯ ರಲ್ಲಾದರೂ ಅದು ಕಾಳ್ಗಿಚ್ಚಿನಂತೆ ಹಬ್ಬಿದ್ದು ೨೦೧೪ ರ ನಂತರ. ವಾಟ್ಸಪ್ಪ್ ಬಂದಿದ್ದೇ ಕಮಿಟಿ ನಲ್ಲಿನ ಪರಸ್ಪರ ಸಂಭಾಷಣೆಗೆ ಒಂದು ಕಡ್ಡಾಯವಾದ ಸಂಪರ್ಕ ಮಾಧ್ಯಮವಾಯಿತು. ಇಮೇಲ್ ಕಳಿಸೋದು ಕಡಿಮೆ ಆಯಿತು. ವಾಟ್ಸಪ್ಪ್ ನಲ್ಲಿ ಯಾರು ಬೇಕಾದ್ರೂ ಒಂದು ಗ್ರೂಪ್ ಶುರು ಮಾಡಿ ಇಂದು ಕನ್ನಡ ಕಾರ್ಯಕ್ರವನ್ನು ರೂಪಿಸಬಹುದು. ವಾಟ್ಸಪ್ಪ್ ನಿಂದ ಈವಾಗ ಹಲವಾರು ಗುಂಪುಗಳಿವೆ. ಇತ್ತೀಚಿಗೆ ಮ್ಯಾಂಚೆಸ್ಟರ್ ನಲ್ಲಿ ಶುರುವಾದ ಕನ್ನಡ ಸಂಘವು ವ್ಹಾಟ್ಸಪ್ಪ್ ನಿಂದಲೇ! ಫೇಸ್ಬುಕ್ ನಲ್ಲೂ ಕೂಡ ಕನ್ನಡಿಗರುಯುಕೆ, ಕನ್ನಡ ಬಳಗ, ಲಂಡನ್ ಕನ್ನಡ ಬಳಗ, Swindon ಕನ್ನಡ ಬಳಗ, ಕೇಂಬ್ರಿಜ್ ಕನ್ನಡ ಬಳಗ, ಡಾರ್ಸೆಟ್ ಕನ್ನಡ ಬಳಗ ಹೇಗೆ ಹತ್ತಿಪ್ಪತ್ತು ಗ್ರೂಪ್ಸ್ ಇದೆ. ಹೀಗೆ ಆನ್- ಲೈನ್ (online ) ಪ್ರಭಾವದಿಂದ ಕನ್ನಡ ಸಂಘಗಳು ಯುನೈಟೆಡ್ ಕಿಂಗ್ಡಮ್ ನಲ್ಲಿ ಪ್ರಚಲಿತವಾಗುತ್ತಿವೆ.

ಯುನೈಟೆಡ್ ಕಿಂಗ್ಡಮ್ ತುಂಬಾ ದುಬಾರಿ ದೇಶ. ಇಲ್ಲಿ ಒಬ್ಬ ಇಂಜಿನಿಯರ್ ಅಥವಾ ಡಾಕ್ಟರ್ ಬಂದು ನೆಲೆಸಿ ಆರ್ಥಿಕವಾಗಿ ಪ್ರಭಲ ಹೊಂದಬೇಕೆಂದರೆ ಕನಿಷ್ಠ ೧೦ ವರ್ಷಗಳು ಬೇಕು. ಸಮಯದ ಅನುಕೂಲದಿಂದ ಕನ್ನಡಿಗರು ಅವರವರ ಪ್ರದೇಶದಲ್ಲಿ ಒಂದೊಂದು ಗುಂಪು ಮಾಡಿಕೊಂಡು ಅಲ್ಲಲ್ಲೇ ತಮ್ಮದೇ ಆದ ಕಾರ್ಯಕ್ರಮವನ್ನು ಇತ್ತೀಚಿಗೆ ಮಾಡಿಕೊಳ್ಳುತ್ತಿರುವದು ಸಹಜವಾಗಿದೆ. ಎಲ್ಲರೂ ಮಕ್ಕಳ ಎಕ್ಸಾಮ್ಸ್, ವೀಕ್ ಎಂಡ್ ಸ್ವಿಮ್ಮಿಂಗ್ ಅದೂ ಇದೂ ಎಂದು ವಾರದ ಕೊನೆಯಲ್ಲಿ ಬ್ಯುಸಿ ಇಲ್ಲಿ. ಹೀಗಾಗಿ ಕನ್ನಡಿಗರು ಹೆಚ್ಚು ಕಮ್ಮಿ ಎಲ್ಲಾ ತರದ ಇಲ್ಲಿಯ ಸಂಸ್ಕೃತಿಯಲ್ಲಿ ಬೆರೆತು ಭಾಗವಹಿಸುತ್ತಾರೆ. ವಾಟ್ಸಪ್ಪ್ ಹಾಗೂ ಫೇಸ್ಬುಕ್ ಪ್ರಭಾವದಿಂದ ಹತ್ತಿರವಿರುವರು ಸೇರಿ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿ ಆಚರಿಸುವದು ಜಾಸ್ತಿ ಆದ್ರೆ ಮುಖ ಮುಖಿ ಭೇಟಿಯಾಗಿ ಸಮಯ ಕಳೆಯುವದು ಕಾರ್ಯಕ್ರಮದ ದಿನವೇ!

ಕೊನೆಯದಾಗಿ ನನ್ನ ಈ ಬರಹದ ಮುಖಾಂತರ ಒಂದು ಕೋರಿಕೆ. ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ರಾಷ್ಟ್ರ ಕವಿ ಕುವೆಂಪು ಅವರ ಕವಿವಾಣಿಯಂತೆ, ನಾವೆಲ್ಲೇ ಇದ್ದರೂ ಕನ್ನಡ ಚಟುವಟಿಕೆಗಳಿಂದ ನಮ್ಮ ಮಾತ್ರ ಭಾಷೆಯನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸೋಣ. ಇದಕ್ಕಾಗಿ ನಾವು ಎಲ್ಲಿ ಯಾವ ಕಾರ್ಯಕ್ರಮವನ್ನು ಮಾಡುವೆವೋ ಅವು ಕನ್ನಡದ ಏಳಿಗೆಗಾಗಿ ಇರಲಿ ಹಾಗೂ ಅದು ಕನ್ನಡ ಪಸರಿಸಲು ಸಹಾಯವಾಗಲಿ. ಲಾಭ ಉದ್ದೇಶಕ್ಕಾಗಿ ಕನ್ನಡ ಗುಂಪನ್ನು ಕಟ್ಟಬೇಡಿ. ನಾವು ಕನ್ನಡಿಗರುಯುಕೆ ನಡೆಸುತ್ತಿರುವ ಕನ್ನಡ ಕಲಿ ಕಾರ್ಯಕ್ರಮ ಲಾಭ ಉದ್ದೇಶದಿಂದ ರೂಪಿಸಿದ ಕಾರ್ಯಕ್ರಮವಲ್ಲ. ಕನ್ನಡ ಪ್ರಾಧಿಕಾರದ ಅಥವಾ ಯಾವುದೇ ದೊಡ್ಡ ಖಾಸಗಿ ಕಂಪನಿಗಳಿಂದ ಆರ್ಥಿಕ ಬೆಂಬಲವಿಲ್ಲದಿದ್ದರೂ ಕಾರ್ಯಕ್ರಮ ನೈತಿಕ ಬೆಂಬಲದಿಂದ ನಡೆಯುತ್ತಿದೆ. ಆಯೋಜಿಸುವ ಯುಗಾದಿ ಹಾಗೂ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚುಳಿದ ಹಣದಿಂದ ಕನ್ನಡ ಕಲಿ ಶಿಬಿರಗಳ ಬಾಡಿಗೆಯಾಗಲಿ ಅಥವಾ ಇನ್ನಿತರೇ ಅಡ್ಮಿನ್ ಖರ್ಚುಗಳಿಗೆ ಹಣವನ್ನು ಬಳಸುವದರಿಂದ ಕನ್ನಡ ಕಲಿ ಅಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಇಲ್ಲಯವರೆಗೆ ನಡೆದಿದ್ದು. ಇದರಲ್ಲಿ ಹಲವರ ದೇಣಿಗೆಯೂ ಇದೆ. ಕನ್ನಡ ಕಲಿ ಗೆ ಇಲ್ಲಿಯರೆಗೆ ಸಹಾಯ ಮಾಡಿದ ಎಲ್ಲಾ ಕನ್ನಡಿಗರಿಗೂ ನನ್ನ ಸಲಾಂ. ಇದಲ್ಲದೇ, ಕನ್ನಡಿಗರು ನಮ್ಮ ಕಾರ್ಯಕ್ರಮಗಳಿಗೆ ಟಿಕೆಟ್ ಹಣ ಕೊಟ್ಟು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವದು ಕೂಡ ಸಹಾಯವಾಗಿದೆ. ಹೀಗಾಗಿ ಕನ್ನಡ ಕಲಿ ಕಾರ್ಯಕ್ರಮದ ಯಶಸ್ಸಿಗೆ ಇಲ್ಲಿರುವ ಎಲ್ಲಾ ಕನ್ನಡಿಗನ ಬೆಂಬಲ ಹಾಗೂ ಪ್ರೋತ್ಸಾಹ ನಿರಂತರವಾಗಿದೆ. ಪ್ರತಿಯೊಬ್ಬ ಕನ್ನಡಿಗನೂ ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರೆ ಇನ್ನಷ್ಟು ಯಶಸ್ಸು ಖಚಿತ!
ಕನ್ನಡಿಗರುಯುಕೆ ಕನ್ನಡ ಕಲಿ ಕಾರ್ಯಕ್ರಮಕ್ಕೆ ಒಂದು ಉದ್ದೇಶವಿದೆ, ಒಂದು ವಿಷನ್ ಇದೆ. ಈಗಲೇ ಮಿಲ್ಟನ್ ಕೇನ್ಸ್ ಕೇಂದ್ರ ಅಲ್ಲಿಯ ಕೌನ್ಸಿಲ್ ಅಡಿಯಲ್ಲಿ ಸಪ್ಲಿಮೆಂಟರಿ ಸ್ಕೂಲ್ ಎಂದು ಗುರುತಿಸಲ್ಪಟ್ಟಿದೆ. ಅನಿವಾಸಿ ಕನ್ನಡಿಗರಿಗಾಗಿ ವಿಶೇಷವಾಗಿ ರೂಪಿಸಿರುವ ಕನ್ನಡ ಕಲಿ ಪುಸ್ತಕಗಳು ಲಭ್ಯವಿವೆ. ಕನ್ನಡ ಕಲಿಗೋಸ್ಕರ ಕನ್ನಡಿಗರುಯುಕೆ ಒಂದು ವೆಬ್ ಸೈಟ್ ಪ್ಲಾಟ್ಫಾರ್ಮ್ (http://kannadakali.uk) ಕೂಡ ಶುರು ಮಾಡಿದೆ. ಕನ್ನಡ ಕಲಿ ಪುಸ್ತಕಗಳನ್ನು ಕನ್ನಡ ಪ್ರಾಧಿಕಾರದಿಂದ ಖರೀದಿಸಿ ಮಕ್ಕಳಿಗೆ ಪುಸ್ತಕಗಳನ್ನು ಒದಗಿಸಲಾಗುತ್ತದೆ. ೩೦ಕ್ಕಿಂತ ಹೆಚ್ಚು ಸ್ವಯಂ ಪ್ರೇರಿತ ಶಿಕ್ಷಕ ಶಿಕ್ಷಕಿಯರು ತಮ್ಮ ಸ್ವಂತ ಸಮಯವನ್ನು ಬದಿಗಿಟ್ಟು ಎಷ್ಟೇ ಮಕ್ಕಳು ಕ್ಲಾಸ್ ಗೆ ಬಂದರೂ ಕಲಿಸಲು ಸಿದ್ಧರಾಗಿರುತ್ತಾರೆ. ಸದ್ಯದಲ್ಲೇ Manchester ನಲ್ಲಿ ಕೂಡ ಕನ್ನಡ ಕಲಿ ಸೆಂಟರ್ ಶುರುವಾಗಲಿದೆ.
ವೀಕ್ ಎಂಡ್ ಸ್ವಿಮ್ಮಿಂಗ್, Voilin Classes, ಬಾಲಿವುಡ್ ಡಾನ್ಸ್ ಹೀಗೆ ಹತ್ತಾರು ವಿಷಯಗಳಲ್ಲಿ ನಾವು ಮಕ್ಕಳು ಕಲಿಯಲಿ ಎಂದು ಖರ್ಚು ಮಾಡುತ್ತೇವೆ. ಆದರೆ ಕನ್ನಡ ಕಲಿ ಬಗ್ಗೆ ಇನ್ನಷ್ಟು ಪ್ರೋತ್ಸಾಹ ಬೇಕಾಗಿದೆ. ಈ ದೇಶದಲ್ಲಿರುವ ಎಲ್ಲಾ ಕನ್ನಡ ಗುಂಪುಗಳು, ಸಂಸ್ಥೆಗಳು ಮುಂದೆ ಬಂದು ಕನ್ನಡಿಗರುಯುಕೆ ನಡೆಸುತ್ತಿರುವ ಕನ್ನಡ ಕಲಿ ಕಾರ್ಯಕ್ರಮವನ್ನು ಅಧಿಕೃತವಾಗಿ ಅಳವಡಿಸಿಕೊಡರೆ ಇಲ್ಲಿ ಕನ್ನಡ ಕಲಿ ಕ್ರಾಂತಿಯಾಗುವುದು ಖಂಡಿತ. ಇದಕ್ಕಾಗಿ ಹೆಚ್ಚು ಶ್ರಮ ಬೇಕಿಲ್ಲ. ಇದರ ಚೌಕಟ್ಟನ್ನು ಆಗಲೇ ಕನ್ನಡಿಗರುಯುಕೆ ನಿರ್ಮಿಸಿಟ್ಟಿದೆ.
ಕನ್ನಡ ಕಲಿ ಕಾರ್ಯಕ್ರಮಕ್ಕೆ ನಿಮ್ಮ ನೈತಿಕ ಬೆಂಬಲವೊಂದೆ ಅಲ್ಲ, ಆರ್ಥಿಕ ಬೆಂಬಲವೂ ಬೇಕಾಗಿದೆ. ಕನ್ನಡ ಕಲಿ ಕಾರ್ಯಕ್ರಮಕ್ಕೆ ತಾವು ಹಲವಾರು ವಿಧದಲ್ಲಿ ಬೆಂಬಲ ನೀಡಬಹುದು. ಶಿಕ್ಷಕರಾಗಿ ತಮ್ಮ ಸಮಯವನ್ನು ಕೊಡಬಹುದು. ಪೋಷಕರಾಗಿ ನಿರಂತರವಾಗಿ ಮಕ್ಕಳನ್ನು ಕ್ಲಾಸ್ ಗೆ ಕರೆದು ತಂದು ಕನ್ನಡಿಗರುಯುಕೆ ಕನ್ನಡ ಕಲಿ ಕಾರ್ಯಕ್ರಮಕ್ಕೆ ಪ್ರತಿ ತಿಂಗಳು ಅಥವಾ ಪ್ರತಿ ಕ್ಲಾಸ್ ಗೆ ಒಂದು ನಿಗದಿತ ಫೀಸ್ ನೀಡಿ ಸಹಾಯ ಮಾಡಬಹುದು. ಆಸಕ್ತರು ಕನ್ನಡ ಕಲಿ ಶಿಬಿರವನ್ನು ಸಂಪೂರ್ಣವಾಗಿ ದತ್ತು ತೆಗೆದುಕೊಂಡು ಹಾಲ್ ಫೀಸ್ ದೇಣಿಗೆಯಾಗಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ kannadakali@kannadigaruuk.com ವಿಳಾಸಕ್ಕೆ ಇಮೇಲ್ ಮಾಡಿ.
ಕನ್ನಡಕ್ಕಾಗಿ, ಕನ್ನಡ ಸಂಘಗಳಿಗೆ ಹಾಗೂ ಕನ್ನಡ ಕಲಿಗೆ ನಿಮ್ಮ ಸದಾ ಬೆಂಬಲವಿರಲಿ.

~ಗಣಪತಿ ಭಟ್, ಕನ್ನಡಿಗರುಯುಕೆ 

Leave a Reply

Your email address will not be published. Required fields are marked *