KUK Local Chapters

ಕನ್ನಡ ಒಂದು ನೋಟ – ತಾಗರ್ತಿ ಅರುಣ್ ಕುಮಾರ್

ಕನ್ನಡ ಒಂದು ನೋಟ – ತಾಗರ್ತಿ ಅರುಣ್ ಕುಮಾರ್ 

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ವನ ಸುಮದೊಳೆನ್ನ ಜೀವನವ ವಿಕಸಿಸುವಂತೆ ಮನವನನುಗೊಳಿಸು ಗುರುವೆ ಹೇ ದೇವಾ.

ಕನ್ನಡ ನಾಡನ್ನ ನೆನೆಸಿಕೊಂಬಾಗ ನಮಗನಿಸುವುದು, ಬಾಲ್ಯ, ಯೌವನ, ಸಂಸಾರ ಜೀವನವನ್ನು ಕನ್ನಡ ತಾಯ ಮಡಿಲಲ್ಲಿ ಕಳೆದ, ಬಾಳಿದ ಮಧುರ ಕ್ಷಣಗಳು ಅಲೆಗಳೋಪಾದಿಯಲ್ಲಿ ನಮ್ಮ ಕಣ್ ಮುಂದೆ ಬರುತ್ತವೆ.

ಹಾಗೆ ನಮ್ಮ ತಾಯಿ ನಾಡಿಂದ ಹೊರನಾಡಿಗೆ ಬಂದು ಹೊಸ ಜೀವನ ನಡೆಸುವಾಗಲೇ ನಮಗೆ ಅನ್ನಿಸುವುದು, ಕನ್ನಡ ನಾಡಿಗಿರುವ ನಮ್ಮ ತಾಯ ಮಮತೆ, ತೃಪ್ತಿ, ಜೀವನ ಧಾರೆ, ಚೆಂಡು, ಬುಗುರಿ, ಮರ ಕೋತಿ, ಚಿನ್ನಿ ದಾಂಡು ಹೀಗೆಲ್ಲ ಬರುವ ಹಳೆಯ ಆಟಗಳ ನೆನಪುಗಳು. ಕಾಡು, ಹಳ್ಳಿ, ಪಟ್ಟಣದ ಜೀವನ, ಅಲ್ಲಿನ ಪರಿಸರ, ಸರಳ ಜೀವನ, ಸುರುಳಿ ಸುರುಳಿಯಾಗಿ ಬರುವುದು ಸಹಜವಲ್ಲವೇ?

ನಾವೆಲ್ಲ ಹೊರ ದೇಶಕ್ಕೆ ೨೦೦೦ ರಲ್ಲಿ ಬಂದಾಗ, ಒಬ್ಬ ಕನ್ನಡಿಗ ಮಾತಿಗೆ ಸಿಗಬಾರದೆ, ಒಬ್ಬ ನಮ್ಮ ಕನ್ನಡದ ಪ್ರೇಮಿಗಳು ಒತ್ತಟ್ಟಿಗೆ ಕಲೆತು ನಮ್ಮದೇ ಒಂದು ಉತ್ಸವ ನಡೆಸುವುದು ಸಾಧ್ಯವೇ? ಏನಿದು ಜೀವನ? ಇದೇ ಜೀವನವೇ? ಎಂದೆಲ್ಲಾ ವಿಚಾರ ಧಾರೆ ಹೊಯ್ದಾಟ ಬರುವುದು ಸಾಧ್ಯ. ಅಲ್ಲವೆ?

ಹಾಗೆಯೆ ರೆಡಿಂಗಿನಲ್ಲಿ ಕನ್ನಡದ ಸೀಮೆಯ ನಮ್ಮವರೆ ಸಿಕ್ಕಿದ್ದು ಎಂತಾ ಸಂತಸ ಕೊಟ್ಟಿತೆಂದರೆ, ಹೋಳಿಗೆ ಸಾರು ಉಂಡಷ್ಟೆ ತೃಪ್ತಿ. ೧೦-೧೫ ಕನ್ನಡ ಮತ್ತು ಕನ್ನಡೇತರ ಬಂದುಗಳು ಸೇರಿ ಒಟ್ಟಿಗೆ ಹೋಳಿ, ದೀಪಾವಳಿ ಹಬ್ಬಗಳನ್ನು ಆಚರಿಸಿ, ಊಟ, ಎಲೆಯಡಿಕೆ ಮೆಲ್ಲುವುದರಲ್ಲೇ ಬಲು ಖುಷಿ ಕೊಟ್ಟ ದಿನಗಳವು.

ಹೀಗೆ ನಡೆಯುತ್ತಿರುವ ಹೊರ ನಾಡಿನ ಹೊಸ ಜೀವನದ ದೋಣಿಯನ್ನು ನಡೆಸುವ ಆ ದಿನಗಳಲ್ಲಿ, ಅದೊಂದು ಅವಿಸ್ಮರಣೀಯವಾದ ಒಂದು ದಿನ ಬಂದೇ ಬಿಟ್ಟಿತು. ಅದನ್ನು ನಾವು ಮರೆಯಲಾದೀತೆ?

ಅದು ನಡೆದದ್ದು ಹೀಗೆ. ೨೦೦೫ ರ ಉಗಾದಿ ಸಂಬ್ರಮ ಅರುಣ್, ಸುರೇಖ ಮತ್ತು ಮಕ್ಕಳ ಮನೆಯಲ್ಲಿ. ಬಂದ ಅತಿಥಿಗಳು ಕನ್ನಡದವರೆ! ದಿಲೀಪ್, ಅರುಣ್ , ವೇಣು, ಬಾಲು, ಪವನ್, ಜಯ್, ವಿರು, ಬಸವರಾಜ್, ಜಗದೀಶ್ ಕುಟುಂಬ. ಅದೇ ದಿನ ಒಬ್ಬ ಹೊಸ ಅತಿಥಿ ನಮ್ಮ ಗುಂಪಿಗೆ ಅಂದರೆ ವಿನಯ್ ಗಾಯತ್ರಿ ಕುಟುಂಬ ದಿಲಿಪ್ ಜೊತೆಗೆ ಬಂದಿದ್ದು. ವೇಣು ಮಗಳ ಹುಟ್ಟಿದ ಹಬ್ಬಕ್ಕೆ ಕೆಲವು ತಿಂಗಳ ಹಿಂದೆ ವಿನಯ್ ಅವರ ಪರಿಚಯವಾಗಿತ್ತಷ್ಟೆ. .

ಹಬ್ಬದೂಟ ಜೋರಾಗೆ ಇತ್ತು. ಮಾತು ಮಾತಲ್ಲಿ, ಎಲೆಯಡಿಕೆ ಮೆಲ್ಲುತ್ತಲೆ, ಇಷ್ಟು ಕನ್ನಡ ಕುಟುಂಬಗಳು ಇವೆಯಲ್ಲ. ಕನ್ನಡದವರು ಇರೋವಾಗ ಎಲ್ಲರು ಸೇರಿ ವರ್ಷಕ್ಕೆ ಒಂದು ಹಬ್ಬವನ್ನು ಆಚರಿಸಿದರೆ ಹೇಗೆ! ಹೀಗೆ ಪ್ರಸ್ತಾವನೆ ಬಂದಿದ್ದು ಗಾಯತ್ರಿಯವರಿಂದ. ಅದರಲ್ಲೂ ನಮಗೆಲ್ಲಾ ಈ ಕನ್ನಡದವರು ಇದಕ್ಕೆಲ್ಲಾ ಸಹಕರಿಸಿ, ಕೂಡಿ ಆಚರಿಸುವುದು ಕಷ್ಟವೆ ಸರಿ, ಅನ್ನುತಿದ್ದಂತೆ, ಬಂದವರಲ್ಲಿ ಗಾಯಿತ್ರಿ ಇದ್ದಾಗ ಕೇಳಬೇಕೆ? ನೋಡೇ ಬಿಡೋಣ, ಪ್ರಯತ್ನ ಮಾಡೆ ತೀರೋಣ ಅನ್ನೊ ಅವರ ಪಟ್ಟು. ಮತ್ತೆ ಉಗಾದಿ ಹಬ್ಬಕ್ಕೆ ಸೇರೋದು ಅಂತ ಆಯಿತು. ಆದರೆ ಅದು ಸಾದ್ಯವಾಗಲಿಲ್ಲ.

ರಾಜ್ಯೊತ್ಸವಕ್ಕೆ ೨-೩ ವಾರಗಳ ಮುಂಚೆ ಉತ್ಸವದ ಬಗ್ಗೆ ಕನ್ನಡಿಗರನ್ನು ಸೇರಿಸೊ ವಿಶಯಕ್ಕೆ ಗಾಯತ್ರಿ ಮತ್ತೆ ಮಲ್ಲಿಕ ಮಾತಾಡಿಕೊಳ್ಳುತ್ತಿದ್ದರು ಎಂಬುದು ಖಚಿತವಾದ ಮಾತು. ಆಗ ಮತ್ತೆ ರಂಜಿತ ಮುಖೇನ ಕನ್ನಡಿಗರ ದಂಡು ಸೆರಿತು ಎಂಬುದರಲ್ಲಿ ಸಂಶವೇ ಇಲ್ಲಾ.

ಅವತ್ತಿನ ಮುಂಚೆಯೆ ಕೆಲವರು ಕನ್ನಡಿಗರು ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕನ್ನಡ ಬಳಗದ ಕಾರ್ಯಕ್ರಮಗಳ ಬಗ್ಗೆ ಮಾತಾಡಿದೆವು.

ಮುಂದಿನ ದಿನಗಳಲ್ಲಿ ಕನ್ನಡಿಗರಾದ ನಮಗಾದ ಉತ್ಸಾಹ ಅಂತಿಂಥದ್ದಲ್ಲ. ಒಂದು ರೆಡಿಂಗ್ ದೇವಸ್ಥಾನದಲ್ಲಿ ಮೊದಲನೆ ಕನ್ನಡ ರಾಜ್ಯೋತ್ಸವ ಅಚರಿಸಿದ್ದು ಆಯ್ತು. ಮೊದಲನೆಯ ಕನ್ನಡ ಉತ್ಸವ ಸುಮಾರು ೧೦೦-೧೨೦ ಕನ್ನಡಿಗರು. ಚೆನ್ನೈ ದೋಸಾ ಕ್ರೋಯ್ಡನ್ ಶಾಖೆಯಿಂದ ಸ್ವಾದಿಷ್ಟಕರ ದಕ್ಷಿಣ ಭಾರತ ಶೈಲಿಯ ಊಟ. ಅದೆ ನಮ್ಮ ಮೊದಲ ಕನ್ನಡಿಗರು ಯುಕೆಯ / ರೆಡಿಂಗ್ ಚೊಚ್ಚಿಲು ಉತ್ಸವ.

ಎಲ್ಲರ ಮುಖದಲ್ಲಿ ಏನೋ ಸಂತಸ. ಅಂತೂ ಕನ್ನಡ ಒಕ್ಕೂಟ, ಕನ್ನಡಿಗರು ರೆಡಿಂಗ್ ಆರಂಭ ಆಯ್ತು. ಪರಿಚಯ ಕಾರ್ಯಕ್ರಮ, ಅಂತಾಕ್ಷರಿ, ಹಳೆ ಹಾಡುಗಳ ಅಂತಾಕ್ಷರಿ ಸರಪಳಿ, ಮ್ಯೂಸಿಕ್ ಚೇರ್ ಆಟ ಆಡಿದ್ದೂ ಆಯಿತು.

ಮುಂದೆ ಏನು ಅನ್ನೋದು ಒಂದು ಪ್ರಶ್ನೆ ಆಯಿತು. ಆಮೇಲಿನ ದಿನಗಳಲ್ಲಿ ಒಂದು ಹಾಳೆಯ ಮೇಲೆ ನಮ್ಮ ಎಲ್ಲರ ಹಾಟ್ ಮೇಲ್, ಯಾಹು ಮೇಲ್ ಐಡಿ ಗಳನ್ನು ಬರೆದಿದ್ದು ಆಯ್ತು. ೨ ವರ್ಷಗಳ ಕಾಲಾವಧಿಯಲ್ಲಿ ತುಂಬಾ ಅಂದರೆ ೧೫೦-೨೫೦ ಜನಗಳು ಸೇರುವಂತಾಯಿತು. ೨೦೦೭ ರ ನಂತರ ಹೊಸ ಮುಖಗಳು ಬರುವ ಹೊತ್ತಿಗೆ ಸುಮಾರಿಗೆ ೨೦೦-೩೦೦ ಕನ್ನಡಿಗರು ಇರುವುದೆಂದಾಗ, ಕಮಿಟಿ ಬೇಕು, ಹೀಗೆ ಬೆಳೆಸಬೇಕು, ಕಾರ್ಯಕ್ರಮಗಳಲ್ಲಿ ಬದಲಾವಣೆಗಲು ಆಗಬೇಕು ಎಂಬ ಯೋಚನೆಗಳು. ಆರಂಭದಲ್ಲಿ ಎಲ್ಲ ಸೋಜಿಗ, ಸಂತಸ ಇದ್ದರೂ, ಕೆಲವರಲ್ಲಿ ಯೋಚನಾ ಲಹರಿಯಲ್ಲಿ ಬದಲಾವಣೆಗಳು. ನನ್ನ ಕೆಲಸದಲ್ಲಿ ಸಮಯದ ಅಭಾವಗಳಿಂದ, ಕನ್ನಡ ಸಂಸ್ಥೆಯಲ್ಲಿ ಸಕ್ರಿಯ ಪಾತ್ರವಹಿಸಲು ಅಗಲಿಲ್ಲ.

ಆದರೆ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆರಂಭ ಮಾಡುವುದು ನನ್ನ ಆಸೆಯಾಗಿತ್ತು, ಕನ್ನಡ ಬಂಧುಗಳ ಮಕ್ಕಳಿಗೆ ಕನ್ನಡ ಕಲಿಸುವ ಆತುರತೆ, ತುಡಿತ ಇತ್ತು. ನಮ್ಮದೆ ಆದ ಒಂದು ಮಿನಿ ಥಿಯೇಟರ್ ಮಾಡುವ ಕಲ್ಪನೆ ಯೋಚನೆ ಇತ್ತು. ಆದರೆ ಅಂದಿನ ದಿನಗಳಲ್ಲಿ ಕನ್ನಡ ಕಲಿಯುವ ಚಪಲ ಯಾರಲ್ಲಿಯು ಕಾಣಲಿಲ್ಲ.

೩ನೆಯ ವರ್ಷದ ಕನ್ನಡ ಹಬ್ಬ ಪವನ್, ಗಾಯತ್ರಿ, ವಿನಯ್, ನಮ್ಮಿಂದ ಲೈಟನ್ ಪಾರ್ಕ್ ಸ್ಕೂಲ್ ನಲ್ಲಿ ಆಯ್ತು. ಆ ವೇಳೆಗೆ ರೆಡಿಂಗಿನಲ್ಲಿ ೨೫೦-೩೦೦ ಜನ ಕನ್ನಡಿಗರು ಸೇರಿದ್ದು ಅದ್ಭುತ ಅನ್ನಿಸಿತು. ಅದೇ ವರ್ಷ ವಿದ್ಯಾಭೂಷಣರ ಕೀರ್ತನೆ ಕಾರ್ಯಕ್ರಮಗಳು ಪ್ರತ್ಯೇಕವಾಗಿ ರೇಡಿಂಗನಲ್ಲಿ ಪವನ ಅವರ ಸಾರಥ್ಯದಲ್ಲಿ ನಡೆದಿತ್ತು . ನಮ್ಮ ಸಕ್ರಿಯ ಪಾತ್ರ ಇದ್ದರೂ ಕಮಿಟಿಗೆ ಕಾರಣಾಂತರದಿಂದ ಸೇರಲು ನನಗೆ ಆಗಲಿಲ್ಲ.

ಅದೊಂದು ದಿನ, ಹಾರ್ಟಿಪೂಲ್ ಎಂಬಲ್ಲಿ ಕನ್ನಡ ಬಳಗದಿಂದ ಕರೆಯೋಲೆ ಬಂತು. ಆಗ ನಾವು, ವಿವೇಕ, ಪವನ್, ಅರುಣ್, ವಿರು, ವಿನಯ್ ಸಹಿತವಾಗಿ ಹೋದದ್ದು ಸ್ಪಷ್ಟವಾಗಿ ನೆನಪಿದೆ. ಕನ್ನಡ ಬಳಗದಲ್ಲಿ ಕಮಿಟಿಯು ನಮ್ಮನ್ನು ಅವರ ಬಳಗಕ್ಕೆ ಸೇರಿ ಕನ್ನಡ ಸೇವೆ ಮಾಡುವ ಅನಿಸಿಕೆಯನ್ನು ನಮ್ಮ ಮುಂದಿಟ್ಟರು. ಆದರೆ ನಮ್ಮ ಕನ್ನಡಿಗರು ಯುಕೆಯ ಎಲ್ಲಾ ಕಾರ್ಯಕ್ರಮಗಳು, ನಮ್ಮದೇ ರೀತಿಯಲ್ಲಿ, ನಮ್ಮ ಕಮಿಟಿಯಲ್ಲೆ ನಡೆಸುವೆವು, ನಮ್ಮ ಸ್ಪಂದನಶೀಲ ಪ್ರೇಕ್ಷಕರ ನಿರೀಕ್ಷೆ, ವೆಚ್ಚ ಹೊಂದಾಣಿಕೆ ಭಿನ್ನವಾಗಿತ್ತು, ಪೂರ್ಣ ದಿನದ ಮನರಂಜನೆ ಸವಿಯಲು ಹಾತೊರೆಯುತ್ತಿದ್ದರು. ಆದುದ್ದರಿಂದ ಜಂಟಿ ವ್ಯವಸ್ಥೆ ದೂರದ ಮಾತಾಗಿತ್ತು. ಆದರೆ ವಿವಿಧ ರೀತಿಯ ಕಾರ್ಯಗಳಲ್ಲಿ ನಮ್ಮ ಬೆಂಬಲವನ್ನು ಕೊಡುತ್ತೇವೆ, ಎಂದು ತಿಳಿಸಿದ್ದಾಯಿತು. ಒಂದು ರೀತಿಯಲ್ಲಿ ಹೇಳುವುದಾದರೆ ಇದು ಒಂದು ಪ್ರಮುಖ ನಿರ್ಧಾರ ಎನ್ನಬಹುದು.

ಅಷ್ಟರಲ್ಲಿ ಹೊಸ ಹುರುಪಿನ, ಯುವ ಕನ್ನಡಿಗರು ಯುಕೆಗೆ ವಲಸೆ ಬರುತ್ತಿರುವುದು ಕಂಡು ತುಂಬ ಸಂತಸವಾಯಿತು. ಆಶ್ಚರ್ಯ್ಯವೆಂಬಂತೆ, ೪-೫ ವರ್ಷಗಳಲ್ಲಿ ೪೦೦-೫೦೦ ಕನ್ನಡಿಗರು ಸಕ್ರಿಯವಾಗಿ ಸೇರಿದ್ದು. ಹುರುಪಿನ ಕನ್ನಡ ಪ್ರೇಮಿಗಳ ಗುಂಪು ಬಂದಿದ್ದು ಮತ್ತಿಷ್ಟು ಕಾರ್ಯ ಚಟುವಟಿಕೆಗಳಿಗೆ ನೆರವಾಗುವಂತ ಸಂದರ್ಭಗಳವು.

ವಿರು, ವಿಜೇಂದ್ರ, ಅರುಣ್, ಅನಿಲ್, ರಮೇಶ್ ಬಾಬು, ಸೂರ್ಯ, ಶಶಿ, ಗಂಧದಗುಡಿ ಸಿನೇಮ ಪ್ರೇಮಿಗಳ ಗುಂಪು ಸೇರಿ ಒಳ್ಳೊಳ್ಳೆಯ ಕಾರ್ಯಕ್ರಮಗಳು ನಡೆಸುತ್ತಿದ್ದುದು ತುಂಬಾ ಹೆಮ್ಮೆ ಪಡಬೇಕಾದ ವಿಷಯ.

ಕೆಲವು ಹೆಸರುಗಳು ಜ್ಞಾಪಕವಿಲ್ಲದಿದ್ದರೂ, ನನಗೆ ತಿಳಿದ ಮಟ್ಟಿಗೆ ನೆನಪಿಟ್ಟು ಬರೆಯುತ್ತಿದ್ದೇನೆ.

ಹಾಗೆಯೆ ನೋಡು ನೋಡುತ್ತಾ ಲಂಡನ್ ಕನ್ನಡಿಗರು, ಮಿಲ್ಟನ್ ಕೀನ್ಸ್ ಕನ್ನಡಿಗರು ಎಂಬ ಸಂಸ್ಥೆಗಳೂ ಉದ್ಭವವಾಗಿದ್ದು ಒಳ್ಳೆಯದೇ. ಸಂತಸದ ವಿಷಯವೆಂದರೆ ಈ ಸಂಸ್ಥೆ ಕನ್ನಡಿಗರುಯುಕೆಯ ಒಂದು ಅಂಗಸಂಸ್ಥೆ, ಅಧ್ಯಾಯವಾಗಿ ಮುಂದುವರೆಯಿತು. ಎಲ್ಲರೂ ಒಂದಾಗಿ ಬಾಳೋಣ ಎಂಬ ಮಂತ್ರ ಹೇಳೋಣ, ಕೂಡಿ ಬಾಳೋಣ.

ಸಿನಿಮಾ ರಂಗ, ಕನ್ನಡ ಕಲಿ, ಚಾರಿಟಿ, ಸ್ಕೂಲ್ ಅಡಾಪ್ಷನ್ನಂಥ ಮಹತ್ಕಾರ್ಯಗಳನ್ನು ಹಮ್ಮಿಕೊಂಡ ಕನ್ನಡ ವೀರರಿಗೆ ವಂದನೆಗಳು.

ನನ್ನ ಕೆಲವು ಹಿತನುಡಿಗಳು ಏನೆಂದರೆ ಬಾಲ್ಯ ಮತ್ತು ಯುವ ಜನಾಂಗಕ್ಕೆ ಅವಕಾಶವನ್ನು ಕಲ್ಪಿಸುವುದು. ಇದರಿಂದ ಕನ್ನಡಿಗರುಯುಕೆಯ ಏಳಿಗೆ ಸಾಧ್ಯ ಮತ್ತೆ ಯುವಕರು ಕನ್ನಡಿಗರುಯುಕೆಯನ್ನು ಜವಾಬ್ದಾರಿಯಿಂದ ಮುಂದುವರೆಸುತ್ತಾರೆ ಎಂಬ ನಂಬಿಕೆ. ಯುವ ಜನಾಂಗವನ್ನು ಪರಿಚಯ ಮಾಡಿ ಕೊಡುವುದು ಶ್ರೇಯಸ್ಕರವಲ್ಲವೆ? ನಮ್ಮಲ್ಲಿ ಯಾವ ರೀತಿಯ ಯುವಕರು, ಯಾವ ಶ್ರೇಣಿಯಲ್ಲಿ ಇರುವರು? ಕೆಲಸ, ಬ್ಯುಸಿನೆಸ್, ದಾಕ್ಟರ್, ಐಟಿ, ಲಾಯರ್ ಹೀಗೆ ಇರಬಹುದಲ್ಲ! ತಂದೆ ತಾಯಂದಿರು ಇದರಿಂದ ತುಂಬಾ ಸಂತೋಷ ಪಡುವರು, ಕನ್ನಡಿಗರುಯುಕೆ ಬಗ್ಗೆಯೂ ಹೆಮ್ಮೆ ಪಡುವುದು ಸಹಜ ತಾನೆ?

ಆದರೆ ಕೆಲವರು ತಮ್ಮ ಸ್ವಂತ ಪ್ರತಿಷ್ಠೆ ಉಳಿಸಿಕೊಳ್ಳಲು ಗುಂಪುಗಳು ನಡೆಸುವ ಮೂಲಕ ವೈಮನಸ್ಯ ಬೆಳೆಸಿದರೂ ಸಹ, ನಮ್ಮ ಕನ್ನಡ ಮಾತೆಗಾಗಿ ಒಟ್ಟುಗೂಡಿ ಇದ್ದು ನಡೆಸುತ್ತಿರುವುದು ಸೋಜಿಗವಲ್ಲವೆ?

ಕನ್ನಡಿಗರುಯುಕೆ, ಕನ್ನಡ ಬಳಗ ಮರ್ಜ್ ಆಗುವುದನ್ನು ಬಿಟ್ಟು ಸೌತ್, ನಾರ್ತ್ ಬೆಂಬಲವನ್ನು ಒದಗಿಸುವ ಮೂಲಕ ಕನ್ನಡ ಏಕೀಕರಣವನ್ನು ಮಾಡಬಹುದಲ್ಲವೇ ?

ಓ ನನ್ನ ಚೇತನ ಆಗು ನೀ ಅನಿಕೇತನ. ಇದು ನಮ್ಮಲ್ಲಿ ಈ ಭಾವ ಎಲ್ಲರಲ್ಲೂ ಬರಲಿ

Leave a Reply

Your email address will not be published. Required fields are marked *