KUK Local Chapters KUK News & Events

ಬಹುಭಾಷಾ ಹಿನ್ನೆಲೆ ಗಾಯಕಿ ಅನನ್ಯ ಭಟ್

“The only truth is music.”
― Jack Kerouac

“ಸಂಗೀತವೊಂದೇ ಸತ್ಯ!”…

“ಗರ್ಭದಿ ನನ್ನಿರಿಸಿ, ಊರಲಿ ನಡೆಯುತಿರೆ, ತೇರಲಿ ಕುಳಿತಂತೆ ಅಮ್ಮಾ
ಗುಮ್ಮಾ ಬಂತೆನಿಸಿ ಹೆದರಿ ನಿಂತಾಗ, ನಿನ್ನ ಸೆರಗೇ ಕಾವಲು ಅಮ್ಮಾ
ಕಾಣದ ದೇವರಿಗೆ ಕೈಯ್ಯಾ ನಾ ಮುಗಿಯೆ ನಿನಗೆ ನನ್ನುಸಿರೇ ಆರತಿ …”

– ಕೇಳಿದಷ್ಟೂ ಆ ಸ್ವರದ ಮಾರ್ದವತೆ, ತಿಳಿಯಾದ ಆತಂಕ-ವಿಷಾದದ ಛಾಯೆ ಕೇಳುಗರ ಮನದಲ್ಲಿ ಮೊರೆಯುತ್ತಿರುತ್ತಿದೆ. ಇದೇ ಹಾಡನ್ನು – ಕನ್ನಡ, ತೆಲುಗು, ತಮಿಳು, ಮಲಯಾಳಂ, ಮತ್ತು ಹಿಂದಿ – ಈ ಐದೂ ಭಾಷೆಗಳಲ್ಲಿ ಹಾಡಿ ಪ್ರತಿ ಭಾಷೆಯಲ್ಲೂ ಅದೇ ಭಾವ-ಜೀವ ಯಶಸ್ವಿಯಾಗಿ ತುಂಬಿದ ಗರಿಮೆ ಅನನ್ಯ ಭಟ್ ಅವರದ್ದು.

ಬಹುಭಾಷಾ ಹಿನ್ನೆಲೆ ಗಾಯಕಿ, ನಟಿ, ರಂಗಭೂಮಿ ಕಲಾವಿದೆ – ಇಂತಹ ದೊಡ್ಡ ಆಯಾಮಗಳನ್ನು ಚಿಕ್ಕ ವಯಸ್ಸಿಗೆ ತನ್ನದನ್ನಾಗಿಸಿಕೊಂಡವರು ಅನನ್ಯ ಭಟ್. ಹಲವಾರು ಚಲನಚಿತ್ರಗೀತೆಗಳನ್ನು ಹಾಡಿ ಬಹುಬೇಗ ಜನಪ್ರಿಯತೆ ಗಳಿಸಿರುವ ಇವರಿಗೆ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ, ರಘು ದೀಕ್ಷಿತ್ ರಂತಹ ದೊಡ್ಡ ಗಾಯಕರೊಂದಿಗೆ ಹಾಡಿದ ಹಿರಿಮೆ, ಹಾಗು ವಿ ಹರಿಕೃಷ್ಣ, ಮನೋಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಗುರುಕಿರಣ್, ವಿ ಮನೋಹರ್ ರಂತಹ ನುರಿತ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವ.

ಅನನ್ಯರವರ ವೈಶಿಷ್ಟ್ಯಪೂರ್ಣ ಧ್ವನಿ, timbre ಮತ್ತು vibrato, ಹಾಡುವಾಗಿನ ಮುಕ್ತತೆ, ಅವರ ಹಾಡುಗಳಿಗೆ ಬಹುಬೇಗ ಜನಮನ್ನಣೆ ದೊರೆಯಿತು. ಇವರ ಹಾಡಿನ ಆಲ್ಬಮ್ ಗಳನ್ನು ಸಂಗೀತಬ್ರಹ್ಮ ಹಂಸಲೇಖ, ಗಣೇಶ್ ಭಟ್, ಕೃಷ್ಣ ಪ್ರಸಾದ್, ನಾಗೇಶ್ ಕಂದೇಗಾಲ ರಂತಹ ದಿಗ್ಗಜರು ನಿರ್ದೇಶನ ಮಾಡಿದ್ದಾರೆ.

ಅಲ್ಲದೆ ಎರಡು ಚಲನಚಿತ್ರಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ನಿರೂಪಿಸಿರುವ ಅನನ್ಯ ತಮ್ಮ ಸಂಗೀತ ಪಯಣ ಐದನೇ ವಯಸ್ಸಿನಲ್ಲಿ ಶುರು ಮಾಡಿದರೂ ಸಂಗೀತವೇ ತಮ್ಮ ಸಾಮರ್ಥ್ಯ ಎಂದು ಕಂಡುಕೊಂಡಿದ್ದು ರಾಜು ಅನಂತಸ್ವಾಮಿ, ಮಂಡ್ಯ ರಮೇಶ್, ಮತ್ತು ಶಿವಾಜಿರಾವ್ ಜಾದವ್ ಅವರಿಂದ ರಂಗಭೂಮಿ ತರಬೇತಿ ಪಡೆಯುವಾಗ.

ಈಗಲೂ ನಾಟಕರಂಗದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಅನನ್ಯರಿಗೆ ಭಾವಗೀತೆಗಳು, ಜನಪದ ಗೀತೆಗಳು ನೆಚ್ಚಿನ ಪ್ರಕಾರ. ತಮ್ಮದೇ ಆದ “ಅನನ್ಯ ಭಟ್ ಕಾನ್ಸರ್ಟ್” (Ananya Bhat Concerts – ABC) ತಂಡವನ್ನು ಕಟ್ಟಿಕೊಂಡು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಶ್ರಮ ನೀಡಬಯಸುತ್ತಿರುವ ಅವರು ಜನಪದ ಸಂಗೀತವನ್ನು ಸಾಮಾನ್ಯ ಜನರಿಗೆ ತಲುಪಿಸುವ ಮಹತ್ವಾಕಾಂಕ್ಷೆಯ ಯೋಜನೆಯ ತಯಾರಿಯಲ್ಲಿದ್ದಾರೆ.

ರಾಮ ರಾಮ ರೇ ಚಿತ್ರದ “ನಮ್ಮ ಕಾಯೋ ದೇವನೇ” ಹಿನ್ನೆಲೆಗಾಯನಕ್ಕೆ 64 ನೇ ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ನಮ್ಮ ಮೈಸೂರಿನ ಹುಡುಗಿ ಅನನ್ಯ ತಮ್ಮ ಸಂಗೀತ-ಬದುಕಿನ ಒಂದು ಝಲಕ್ ಅನ್ನು ಬಿಚ್ಚಿಟ್ಟ ಬುತ್ತಿಯಲ್ಲಿ ಮಾಧ್ಯಮ ಅನೇಕ ದೊಂದಿಗೆ ಹಂಚಿಕೊಂಡಿದ್ದಾರೆ.

#ಮಾಧ್ಯಮ_ಅನೇಕ

Leave a Reply

Your email address will not be published. Required fields are marked *