KUK News & Events

KannadigaruUK in 2017

೨೦೧೭ ರಲ್ಲಿ ಕನ್ನಡಿಗರುಯುಕೆ

ಜನವರಿ ತಿಂಗಳಲ್ಲಿ ಕನ್ನಡಿಗರುಯುಕೆ ಮೊದಲ ಕಾರ್ಯಕ್ರಮ, ಹಾರೋನಲ್ಲಿ ಶುರು ಮಾಡಿದ ಕನ್ನಡ ಕಲಿ. ಸಂಕ್ರಾಂತಿಯ ಸಂಭ್ರಮದಲ್ಲಿ ಕನ್ನಡ ಕಲಿ ಹ್ಯಾರೋ ಪುನರಾರಂಭವಾಯಿತು. ಶನಿವಾರ ದಿನಾಂಕ ೧೪ -೦೧ -೨೦೧೭, ಮಕರ ಸಂಕ್ರಾತಿಯ ಶುಭ ದಿನದಲ್ಲಿ ಹ್ಯಾರೋ “ಕನ್ನಡ ಕಲಿ” ತರಗತಿ ೬೦ ಕ್ಕೂ ಹೆಚ್ಚು ಮಕ್ಕಳು ಹಾಗು ಪೋಷಕರರ ಉಪಸ್ಥಿತಿಯಲ್ಲಿ ಪುನರಾರಂಭವಾಯಿತು. ಕನ್ನಡ ಕಲಿ ಹ್ಯಾರೋ ನಲ್ಲಿ ಪುನರಾರಂಭ ಮಾಡಿದಂತಹ ವಿಶೇಷ ಹೆಗ್ಗಳಿಕೆಗೆ ಅರ್ಹರಾದವರು ಹಾರೋ ಕನ್ನಡಿಗರು!

ಮಕರ ಸಂಕ್ರಾಂತಿಯ ಶುಭ ದಿನ ಹ್ಯಾರೋ ಕನ್ನಡಿಗರು ಅತ್ಯಂತ ಸಡಗರ ಸಂಭ್ರಮದಲ್ಲಿ ಹೊಸ ವರುಷದ ಪ್ರಯುಕ್ತ “ಕನ್ನಡ ಕಲಿ” ತರಗತಿಯ ಮೊದಲನೇ ಪಾಠಶಾಲೆಯನ್ನು ಆರಂಭ ಮಾಡಿದರು. “ಗಜಮುಖನೆ ಗಣಪತಿಯೇ ನಿನಗೆ ವಂದನೆ” ಹಾಡನ್ನು ಮಕ್ಕಳು ಅತ್ಯಂತ ಸುಮಧುರವಾಗಿ ಹಾಡಿ ಕಾರ್ಯಕ್ರಮವನ್ನು ಆರಂಭ ಮಾಡಿದರು. ಎಲ್ಲರೂ ನಾಡಗೀತೆಯನ್ನು ಹಾಡಿ ಕನ್ನಡ ತಾಯಿಗೆ ವಂದನೆ ಸಲ್ಲಿಸಿದರು. ಈ ಮದ್ಯೆ ಕನ್ನಡಿಗರು ಯು. ಕೆ ಸಂಸ್ಥೆಯಿಂದ ಕನ್ನಡ ಕಲಿ ಕಾರ್ಯಕ್ರಮದ ಮಹತ್ವ ಹಾಗು ಇದರ ಮುಂದಿನ ಚಟುವಟಿಕೆಯ ಬಗ್ಗೆ ಪೋಷಕರು ಹಾಗು ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡಲಾಯಿತು. ತದನಂತರ ಔಪಚಾರಿಕವಾಗಿ “ಕನ್ನಡ ಕಲಿ” ತರಗತಿ ೩೦ ನಿಮಷ ಕಾಲ ಶಿಕ್ಷಕರಾದ ರೂಪ ವಿರುಪ್ರಸಾದ್, ರೀನಾ ಮಾರೇಗುದ್ದಿ, ಶಿಲ್ಪಾ ಆರಾಧ್ಯ, ಮೇನಕಾ ಯೋಗೇಶ್, ದೇವಿ ರಾಜೇಶ್ ಹಾಗು ಸುಜಾತಾ ರಾಮ್ ಅವರಿಂದ ನಡೆಸಿ ಕೊಡಲಾಯಿತು. ರಾಷ್ಟ್ರ ಗೀತೆಯೊಂದಿಗೆ “ಕನ್ನಡ ಕಲಿ” ತರಗತಿಯ ಮೊದಲನೇ ಪಾಠಶಾಲೆ ಮುಕ್ತಾಯಗೊಂಡು ಸಂಕ್ರಾಂತಿ ಹಬ್ಬದ ಸಡಗರಕ್ಕೆ ಒಂದು ವಿಶೇಷ ಕಳೆ ತಂದಿದ್ದಂತೂ ನಿಜ.

ಫೆಬ್ರವರಿಯಲ್ಲಿ www.kuktalkies.com ಎಂಬ ಹೊಸ ವೆಬ್ ಸೈಟ್ ಪ್ರಾರಂಭವಾಯಿತು. ಈಗಾಗಲೇ ಕನ್ನಡಿಗರುಯುಕೆ ೩೦ಕ್ಕೂ ಹೆಚ್ಚು ಕನ್ನಡ ಚಲನ ಚಿತ್ರಗಳನ್ನು ಯು.ಕೆ. ಕನ್ನಡಿಗರಿಗೆ ಪ್ರದರ್ಶನ ಮಾಡಿದೆ. ಈ ವೆಬ್ ಸೈಟ್ ಮೂಲ ಉದ್ದೇಶ ಇಲ್ಲಿಯ ಕನ್ನಡಿಗರಿಗೆ ಕೇಯುಕೆ ಟಾಲ್ಕಿಸ್ ವಿತರಿಸುವ ಚಲನ ಚಿತ್ರಗಳ ಬಗ್ಗೆ ಮಾಹಿತಿ ಹಾಗೂ ಷೋಸ್ ಗಳ ಬಗ್ಗೆ ವಿವರ. ಫೆಬ್ರವರಿ ತಿಂಗಳಲ್ಲಿ ಕನ್ನಡಿಗರುಯುಕೆ ಹಾರೋ ಕನ್ನಡ ಕಮ್ಯೂನಿಟಿ ಜೊತೆಗೂಡಿ NDTV ನ್ಯೂಸ್ ಚಾನೆಲ್ ಪತ್ರಕರ್ತೆಯಾದ ರಾಧಿಕಾ ಅಯ್ಯರ್ ಜೊತೆ ಸಂಭಾಷಣೆಯನ್ನು ಕೂಡ ವ್ಯವಸ್ಥೆ ಮಾಡಿತ್ತು. ಸಂಭಾಷಣೆ Out of England ಎಂಬ ಷೋನಲ್ಲಿ ನಂತರ ಪ್ರಸಾರವಾಯಿತು. ಮಾರ್ಚ್ ತಿಂಗಳಲ್ಲಿ ಕನ್ನಡಿಗರುಯುಕೆ ತಂಡ ಯುನೈಟೆಡ್ ಕಿಂಗ್ಡಮ್ ಆದ್ಯಂತ ಇರುವ ಎಲ್ಲ ಕನ್ನಡಿಗರನ್ನು ಒಂದುಗೂಡಿಸಿ ಕನ್ನಡ ಇವೆಂಟ್ಸ್ ಅಂಡ್ ಮೂವೀಸ್ ಎಂಬ ಹೊಸ ವಾಟ್ಸಪ್ಪ್ ಗ್ರೂಪ್ ಕೂಡ ಶುರು ಮಾಡಿತು. ಇದರ ಮೂಲ ಉದ್ದೇಶ, ಯುಕೆ ಆದ್ಯಂತ ನಡೆಯುವ ಕನ್ನಡ ಇವೆಂಟ್ಸ್ ಹಾಗೂ ಚಲನ ಚಿತ್ರಗಳ ಬಗ್ಗೆ ವಾಟ್ಸಪ್ಪ್ ಗ್ರೂಪ್ ನ ಸದಸ್ಯರಿಗೆ ಶೇರ್ ಮಾಡುವ ಅವಕಾಶ ದೊರಕಿಸಿಕೊಡುವದು. ವಾಟ್ಸಪ್ಪ್ ಗ್ರೂಪ್ ಲಾಂಚ್ ಮಡಿದ ಒಂದೆರಡು ದಿನಗಳಲ್ಲೇ ಗುಂಪು ೨೫೬ ರ ಮಿತಿ ಮೀರಿ ನೋಂದಣಿ ಆಗಿರುವುದು ಒಂದು ವಿಶೇಷತೆ.

ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಎಲ್ಲಡೆ ಯುಗಾದಿಯ ಆಚರಣೆ. ಕನ್ನಡಿಗರುಯುಕೆ ಮಿಲ್ಟನ್ ಕೇನ್ಸ್ ಚಾಪ್ಟರ್ ಏಪ್ರಿಲ್ 9 ರಂದು ನೆರಳು ಬೆಳಕಿನಾಟದಿಂದ ಪ್ರಖ್ಯಾತಿ ಪಡೆದಿರುವ ಬಹುಮುಖ ಪ್ರತಿಭೆ ‘ ಶ್ರೀ. ಪ್ರಹ್ಲಾದ್ ಆಚಾರ್ಯ’ ಅವರಿಂದ ಕಾರ್ಯಕ್ರಮ ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಮನೋರಂಜನೆಯನ್ನು ಒಳಗೂಡಿಸಿ ಒಂದು ಉತ್ತಮ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿತು. ಕರ್ನಾಟಕದಿಂದ ಕಲಾವಿದರನ್ನು ಕರೆಸಿ, ಕಲಾವಿದರ ಖರ್ಚು ವೆಚ್ಚ,ಹಾಗೂ ಊಟ ತಿಂಡಿಯ ವ್ಯವಸ್ಥೆ ಮಾಡಿ ಅತಿ ಕಮ್ಮಿ ಬಜೆಟ್ ನಲ್ಲಿ ಒಂದು ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದ ಕನ್ನಡಿಗರುಯುಕೆ ಮಿಲ್ಟನ್ ಕೇನ್ಸ್ ತಂಡ ವಿಶೇಶ ಪ್ರಶಂಸೆಗೆ ಅರ್ಹರು. ಈ ವರ್ಷದ ವಿಶೇಷ ಏನೆಂದರೆ ಯುಕೆ ಆದ್ಯಂತ ೧೫ ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಯುಗಾದಿಯ ಆಚರಣೆ ಆಗಿದ್ದು.

ಮೇ ತಿಂಗಳಲ್ಲಿ ಕನ್ನಡಿಗರುಯುಕೆ ಭಾರತೀಯ ವಿದ್ಯಾ ಭವನ ಲಂಡನ್ ಆಯೋಜಿಸಿದ್ದ ಭಿನ್ನ ವಿಭಿನ್ನ ಎಂಬ ಸಂಗೀತ ಸಮಾರಂಭಕ್ಕೆ ಪ್ರೋತ್ಸಾಹ ನೀಡಿತು. ಈ ಕಾರ್ಯಕ್ರಮಕ್ಕೆ ಡಾ. ರಮ್ಯಾ ಮೋಹನ್ ಮುಖ್ಯ ಕಲಾವಿದರಾಗಿದ್ದರು. ಇದಲ್ಲದೆ ಬೇಸಿಂಗ್ ಸ್ಟೋಕ್ ಕನ್ನಡ ಕಲಿ ಮಕ್ಕಳ ಪ್ರೋತ್ಸಾಹಕ್ಕೆ ಕನ್ನಡಿಗರುಯುಕೆ ಡಾ. ರಮ್ಯಾ ಮೋಹನ್ ಹಾಗೂ ತಂಡದಿಂದ ಸಂಗೀತ ರಸಧಾರೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ೮೦ಕ್ಕೂ ಹೆಚ್ಚು ಕನ್ನಡಿಗರು ಬಂದು ಕಾರ್ಯಕ್ರಮವನ್ನು ಪ್ರೋತ್ಸಾಹಿಸಿದರು. ಬೇಸಿಂಗ್ ಸ್ಟೋಕ್ ಕನ್ನಡ ಕಲಿ ಪುಟಾಣಿಗಳ ವಿಶೇಷ ಸಾಂಸ್ಕ್ರತಿಕ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿತು. ರಮ್ಯಾ ಮೋಹನ್ ಅವರ ಸುಮದುರ ಗಾಯನವನ್ನು ಸವಿದ ಪ್ರೇಕ್ಷಕರು ಭರ್ಜರಿ ಡಾನ್ಸ್ ಮಾಡಿ ಆನಂದಿಸಿದರು. ಕಿಚ್ಚ ಸುದೀಪ್ ನಟಿಸಿರುವ ಬ್ಲಾಕ್ ಬಸ್ಟರ್ “ಹೆಬ್ಬುಲಿ” ಚಲನ ಚಿತ್ರವನ್ನು ODEON, CINEWORLD ಹಾಗೂ ಖಾಸಗಿ ಪ್ರದರ್ಶನದ ಮೂಲಕ ಬಿಡುಗಡೆ ಮಾಡಲಾಯಿತು. ಹೆಬ್ಬುಲಿ ಚಲನ ಚಿತ್ರ ಬಿ. ಬಿ. ಎಫ್. ಸಿ ಸೆನ್ಸರ್ ಮಂಡಳಿಯಿಂದ ಎರಡು ಬಾರಿ ಕತ್ತರಿ ಪಡೆದು ಯುಕೆ ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಆಕರ್ಷಿಸಲು ವಿಫಲವಾಯಿತು. ಹೆಬ್ಬುಲಿ KUK Talkies ಪ್ರದರ್ಶಿಸಿದ ೨೦೧೭ ನೇ ವರ್ಷದ ಮೊದಲ ಹಾಗೂ ಕೊನೆಯ ಚಲನ ಚಿತ್ರ!

ಜೂನ್ ತಿಂಗಳಲ್ಲಿ ಅನಿರೀಕ್ಷಿತವಾಗಿ SOAS Unitversity of London ಎಂಬ ಸಂಸ್ಥೆಯು ಕನ್ನಡಿಗರುಯುಕೆ ನಡೆಸುತ್ತಿರುವ ಕನ್ನಡ ಕಲಿ ಕಾರ್ಯಕ್ರಮದಿಂದ ಪ್ರೇರಿತರಾಗಿ ಸಹಾಯ ಕೋರಿದರು. ಯುನೈಟೆಡ್ ಕಿಂಗ್ಡಮ್ ನಿಂದ ಬೆಂಗಳೂರಿನ ಪ್ರತಿಷ್ಠಿತ ಕ್ರೈಸ್ಟ್ ಕಾಲೇಜಿಗೆ ಅಭ್ಯಾಸ ಮಾಡಲು ಹೋಗುವ ಇಂಟರ್ನ್ಯಾಷನಲ್ ವಿದ್ಯಾರ್ಥಿಗಳಿಗೆ ಕನ್ನಡ ಟೇಸ್ಟರ್ ಕ್ಲಾಸ್ ನಡೆಸಿಕೊಡುವ ಕುರಿತು ಕನ್ನಡಿಗರುಯುಕೆ ಕನ್ನಡ ಕಲಿ ಶಿಕ್ಷಕರ ಸಹಾಯ ಕೋರಲಾಯಿತು. ಹಿರಿಯ ಕನ್ನಡ ಕಲಿ ಶಿಕ್ಷಕಿಯರಾದ ಡಾ. ಸರಿತಾ ಅರುಣ್ ಅವರು ಲಂಡನ್ ಯೂನಿವೆರ್ಸಿಟಿಗೆ ಭೇಟಿ ನೀಡಿ ಸುಮಾರು ೩೦ ವಿದ್ಯಾರ್ಥಿಯರಿಗೆ ಕರ್ನಾಟಕ ರಾಜ್ಯ, ಬೆಂಗಳೂರು ನಗರ, ಕನ್ನಡ ಭಾಷೆ ಹಾಗೂ ಸಂಸ್ಕ್ರತಿಯ ಬಗ್ಗೆ ಟೇಸ್ಟರ್ ಕ್ಲಾಸ್ ಯಶಸ್ವಿಯಾಗಿ ನಡೆಸಿಕೊಟ್ಟರು.ಜೂಲೈ ೪ ರಂದು ಅಧಿಕೃತವಾಗಿ ಕನ್ನಡ ಹಬ್ಬ ೨೦೧೭ ರ ಬಗ್ಗೆ ಘೋಷಣೆ ಮಾಡಲಾಯಿತು. ಕನ್ನಡ ನಾಡಿನ ಜಾನಪದ, ಕಲೆ, ನಾಟಕ, ಸಂಗೀತ ಮತ್ತು ಸಂಭ್ರಮದಿಂದ ಕೂಡಿದ ಜಾತ್ರೆಯ ಬಗ್ಗೆ ಕನ್ನಡಿಗರುಯುಕೆ ಇದೇ ವರ್ಷ ಮೊಟ್ಟ ಮೊದಲ ಬಾರಿಗೆ ನಾಲ್ಕು ತಿಂಗಳಿಂದಲೇ ಅಂತರ್ಜಾಲದಲ್ಲಿ ಟಿಕೆಟ್ ಲಭ್ಯವಾಗುವತೆ ಪ್ರಕಟಿಸಿತು.

ಆಗಸ್ಟ್ ತಿಂಗಳಲ್ಲಿ ಕನ್ನಡಿಗರುಯುಕೆ ಕನ್ನಡ ಹಬ್ಬದ ಬಗ್ಗೆ ಬೆಂಗಳೂರಿನಲ್ಲಿ ಒಂದು ಪತ್ರಿಕಾ ಗೋಷ್ಠಿಯನ್ನು ಕರೆದು ರಾಜ್ಯೋತ್ಸವ ಆಚರಣೆ ಹಾಗೂ ಕನ್ನಡ ಹಬ್ಬದ ಥೀಮ್ ಬಗ್ಗೆ ಪತ್ರಕರ್ತರಿಗೆ ಡಾ. ನಾಗತಿಹಳ್ಳಿ ಚಂದ್ರಶೇಖರ ಅವರ ಪ್ರಸ್ತುತಿಯಲ್ಲಿ ನೀಡಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಹಾಗೂ NRI Forum ಉಪಾಧ್ಯಕ್ಷರನ್ನು ಕನ್ನಡ ಹಬ್ಬಕ್ಕೆ ಆಮಂತ್ರಿಸಲಾಯಿತು.
ಕಲಾವಿದರ ವೀಸಾ ಆಮಂತ್ರಣ ಹಾಗೂ ಪ್ರಯಾಣ, ವಸತಿ, ಹಾಗೂ ಇನ್ನಿತರ ವ್ಯವಸ್ಥೆಗಳಿಗೆ ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿ ತಯ್ಯಾರಿ ನಡೆಸುತ್ತಿತ್ತು. ಕನ್ನಡ ಹಬ್ಬಕ್ಕಾಗಿ ಆಗಲೇ ೫೦ ರಷ್ಟು ಆಯೋಜನ ಸಮಿತಿಗೆ ಸದಸ್ಯರು ನೋಂದಣಿ ಆಗಿದ್ದರು. ಪ್ರತಿ ವಾರ ಕಾನ್ಫರೆನ್ಸ್ ಕಾಲ್ಸ್, ಹಲವಾರು ಟೀಮ್ಗಳ ಅನುಸ್ಥಾಪನೆ ಹೀಗೆ ಅನೇಕ ಚಟುವಟಿಕೆಗಳಿದ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳು ಕಳೆಯಿತು.

ಸೆಪ್ಟೆಂಬರ್ ೯ರಂದು ಮಿಲ್ಟನ್ ಕೇನ್ಸ್ ಕನ್ನಡ ಕಲಿ ಶಿಬಿರವನ್ನು ಪುನಾರಂಭ ಮಾಡಲಾಯಿತು.ಸ್ವಯಂ ಸೇವಕ ಶಿಕ್ಷಕಿಯರಾದ ಶ್ರದ್ಧಾ, ಶೀತಲ್ ಹಾಗೂ ದಿವ್ಯ ಅವರ ಬೆಂಬಲದಿಂದ ಅದ್ದೂರಿಯಾಗಿ ಕನ್ನಡ ಕಲಿ ಮಿಲ್ಟನ್ ಕೇನ್ಸ್ ಪ್ರಾರಂಭವಾಯಿತು. ೩೦ ರಷ್ಟು ಮಕ್ಕಳು ಮಿಲ್ಟನ್ ಕೇನ್ಸ್ ಕನ್ನಡ ಕಲಿ ಶಿಬಿರಕ್ಕೆ ನೋಂದಣಿಯಾಗಿದ್ದು ಒಂದು ಹೆಮ್ಮೆಯ ವಿಷಯ. ಈ ಸಂದರ್ಭದಲ್ಲಿ ಕನ್ನಡ ಕಲಿ ಟಿ-ಶರ್ಟ್ ಹಾಗೂ ಕನ್ನಡ ರಾಜ್ಯೋತ್ಸವ ಟಿ- ಶರ್ಟ್ ಕೂಡ ಲಾಂಚ್ ಮಾಡಲಾಯಿತು. ಕನ್ನಡ ಕಲಿಗೋಸ್ಕರ ಜನರು ತಮ್ಮ ಸ್ವ – ಇಚ್ಛೆಯಿಂದ ಧನ ಸಹಾಯ ಮಾಡುವ ಒಂದು ಲಿಂಕ್ ಕೂಡ ತೆರೆಯಲಾಯಿತು. ಸೆಪ್ಟೆಂಬರ್ ೧೦ ರಂದು ಕನ್ನಡಿಗರುಯುಕೆ ಭಾರತೀಯ ಹೈ ಕಮಿಷನ್ ಏರ್ಪಡಿಸಿದ್ದ ಸ್ವತಂತ್ರ ದಿನೋತ್ಸವದ ಆಚರಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿತು. ಕನ್ನಡಿಗರುಯುಕೆ ಸ್ಟಾಲ್ ನಿಂದ ನೆರೆದಿದ್ದ ಜನರಿಗೆ ತಿಂಡಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕನ್ನಡಿಗರುಯುಕೆ ಸ್ಟಾಲ್ ಭೇಟಿ ಮಾಡಿದವರಿಗೆ ಸಂಸ್ಥೆಯ ಬಗ್ಗೆ ಹಾಗೂ ಕನ್ನಡ ಹಬ್ಬದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಯಿತು. ಸೆಪ್ಟೆಂಬರ್ ತಿಂಗಳಲ್ಲಿ ಕನ್ನಡಿಗರುಯುಕೆ ಬುಲೆಟಿನ್ ಎಂಬ ಹೊಸ ವಾಟ್ಸಪ್ಪ್ ಗ್ರೂಪ್ ಆರಂಭ ಮಾಡಲಾಯಿತು. ಈ ಗ್ರೂಪ್ ಕೆಲವೇ ದಿನಗಳಲ್ಲಿ ೨೫೬ ರ ಗಡಿ ಮೀಟಿ ಸಂಪೂರ್ಣವಾಗಿ ತುಂಬಿದ್ದು ಅಚ್ಚರಿಯೇನಲ್ಲ! ಕನ್ನಡಿಗರುಯುಕೆ ಬುಲೆಟಿನ್ ಯು.ಕೆ ಯಲ್ಲಿರುವ ಎಲ್ಲಾ ಕನ್ನಡಿಗರಿಗೆ ವಯುಕ್ತಿಕ ಹಾಗೂ ತ್ವರಿತವಾಗಿ ಸಹಾಯವಾಗುವಂತಹ ಒಂದು ಪ್ರಯತ್ನ. ಮೊದಲು ಯಾಹೂ ಗ್ರೂಪ್ನಲ್ಲಿ ಎಲ್ಲರೂ ಅರ್ಜೆಂಟ್ ಲಂಡನ್ ನಿಂದ ಬೆಂಗಳೂರಿಗೆ ಹೋಗುವರಿದ್ದಾರಾ ಎಂದು ಮೆಸೇಜ್ ಹಾಕುತ್ತಿದ್ದರು ಆದರೆ ಕನ್ನಡಿಗರುಯುಕೆ ಬುಲೆಟಿನ್ ವಾಟ್ಸಪ್ಪ್ ಗ್ರೂಪ್ ಬಂದಮೇಲೆ ಗುಂಪಿನ ಸದಸ್ಯರು ತ್ವರಿತವಾಗಿ ಗುಂಪಲ್ಲಿ ಪ್ರಶ್ನೆ ಹಾಕಿ ಕೂಡಲೇ ಉತ್ತರ ಪಡೆಯುವದು ಈಗ ಸಾಮಾನ್ಯವಾಗಿದೆ. ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿಯ ಹಾಗೂ ಕನ್ನಡ ಹಬ್ಬದ ರಿಜಿಸ್ಟ್ರೇಷನ್ ಟೀಮ್ನಲ್ಲಿರುವ ವೇಣು ಭಾರದ್ವಾಜ ಅವರು ಒಂದು ನವೀನ ಮಾದರಿಯ ಬಾರ್ ಕೋಡ್ ಹಾಗೂ ಈ-ಟಿಕೆಟ್ ಪ್ರಕ್ರಿಯೆಯನ್ನು ಮೊಟ್ಟ ಮೊದಲಿಗೆ ಕನ್ನಡಿಗರುಯುಕೆ ಕಾರ್ಯಕ್ರಮದಲ್ಲಿ ಅಳವಡಿಸುವ ಬಗ್ಗೆ ಪ್ರಸ್ತಾಪವನ್ನಿಟ್ಟರು. ಮುಂದೆ ಕನ್ನಡ ಹಬ್ಬದಲ್ಲಿ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಅಳವಡಿಸಲಾಯಿತು. ಆವ್ಯಾ ಕನ್ಸಲ್ಟೆನ್ಸಿ ಎಂಬ ಕಂಪನಿಯಿಂದ ಸಾಫ್ಟ್ವೇರ್ ತಯ್ಯಾರಿ ಮಾಡಲಾಯಿತು.

ಅಕ್ಟೋಬರ್ ತಿಂಗಳಲ್ಲಿ ಮುಖ್ಯವಾಗಿ ಎಲ್ಲಾ ಕನ್ನಡ ಕಲಿ ಕೇಂದ್ರಗಳಿಂದ ಕನ್ನಡ ಹಬ್ಬಕ್ಕೆ ದೊರೆತಂತ ಉತ್ತಮ ಪ್ರೋತ್ಸಾಹ ಹಾಗೂ ಕನ್ನಡ ಕಲಿ ಪೋಷಕರ ಬೆಂಬಲ. ಕನ್ನಡ ಹಬ್ಬದಲ್ಲಿ ಕನ್ನಡ ಕಲಿ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಯಶಸ್ಸಿಗೆ ಮುಖ್ಯವಾಗಿ ಮಕ್ಕಳಿಂದ ಪ್ರತಿ ವಾರ ಕನ್ನಡ ಕಲಿ ಕ್ಲಾಸ್ ಹೊರತು ಕನ್ನಡ ಹಬ್ಬ ಕಾರ್ಯಕ್ರಮದ ಬಗ್ಗೆ ಅಭ್ಯಾಸ. ಕನ್ನಡ ಕಲಿ ಲೀಡ್ ಆದ ರಾಜೇಶ್ ಅವರ ನೇತೃತ್ವದಲ್ಲಿ ಶಿಕ್ಷಕಿಯರಾದ ಶೋಭಾ, ಅಂಬಿಕಾ, ದೀಪಾ, ಸರಿತಾ, ಅಂಬರೀಷ್, ಅನಿತಾ, ಮೇನಕಾ, ಶಿಲ್ಪಾ, ರೀನಾ, ದೇವಿ, ಸ್ಮಿತಾ, ರೇಖಾ, ಶ್ರದ್ಧಾ,ದಿವ್ಯಾ, ಶೀತಲ್ ಹಾಗೂ ಡಾ. ಚಂದ್ರಪ್ಪ ಅವರಿಂದ ದೊರೆತ ಬೆಂಬಲದಿಂದ ಪುಟಾಣಿ ಮಕ್ಕಳು ಕಾರ್ಯಕ್ರಮಕ್ಕೆ ಒಳ್ಳೆಯ ಸಿದ್ದತೆಯನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಮಾಡಿದರು. ಇದಲ್ಲದೇ ಕನ್ನಡ ಕಲಿ ಸರ್ಟಿಫಿಕೇಟ್ ಹಾಗೂ ಕೆಲವು ಪಠ್ಯ ಪುಸ್ತಕಗಳನ್ನು ಕನ್ನಡ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಕೆ. ಮುರುಳೀಧರ್ ಅವರು ಕನ್ನಡಿಗರುಯುಕೆ ತಂಡಕ್ಕೆ ಮಂಜೂರಿ ಮಾಡಿದರು. ನವೆಂಬರ್ ೧೮ ರಂದು ಕನ್ನಡಿಗರುಯುಕೆ ೧೩ ನೇ ಬಾರಿ ಕನ್ನಡ ರಾಜ್ಯೋತ್ಸವನ್ನು ಕನ್ನಡ ಹಬ್ಬ ರೂಪದಲ್ಲಿ ಅದ್ದೂರಿಯಾಗಿ ಲಂಡನ್ ನ ವೆಂಭ್ಲಿ ಯಲ್ಲಿ ಆಚರಿಸಿತು. ೭೦೦ ಕ್ಕೂ ಮಿಕ್ಕಿ ನೆರೆದಿದ್ದ ಕನ್ನಡಿಗರು ಬಹಳ ಅದ್ಭುತವಾಗಿ ಮೂಡಿಬಂದ ಸಾಂಸ್ಕೃತಿಕ ಮನರಂಜನೆಯ ಕಾರ್ಯಕ್ರಮಗಳನ್ನು ಮನಸಾರೆ ಸವಿದರು. ಈ ಕಾರ್ಯಕ್ರಮದಲ್ಲಿ ನಮ್ಮ ಕನ್ನಡ ಕಲಿ ಪುಟಾಣಿಗಳಿಗೆ ವಿಶೇಷ ಅವಕಾಶ ಕಲ್ಪಿಸಿಕೊಟ್ಟು, ಪೋಷಕರಿಗೆ ಕನ್ನಡ ಕಲಿ ಕಾರ್ಯಕ್ರಮದ ವಿವರ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮಾಡಿಕೊಡುವ ಒಂದು ಪ್ರಾಮಾಣಿಕ ಪ್ರಯತ್ನ ಮಾಡಲಾಯಿತು. ಕನ್ನಡಿಗರುಯುಕೆಯ ಕನ್ನಡಕಲಿ ಕೇಂದ್ರಗಳಾದ ಹ್ಯಾರೋ, ಬೇಸಿಂಗ್ ಸ್ಟೋಕ್, ಸ್ಲಾವ್, ಇಲ್ಫೋರ್ಡ್, ಮಿಲ್ಟನ್ ಕೀನ್ಸ್ , ಕೇಂಬ್ರಿಜ್ ಕೇಂದ್ರಗಳಿಂದ ಸುಮಾರು ೬೦ ಕ್ಕೂ ಹೆಚ್ಚು ಚಿಕ್ಕ ಪುಟಾಣಿಗಳು ಭಾಗವಹಿಸಿ ತಮ್ಮ ಕನ್ನಡ ಕಲಿಕೆಯನ್ನು ವಿವಿಧ ಕಾರ್ಯಕ್ರಮದ ಮೂಲಕ ಪ್ರದರ್ಶಿಸಿದರು. ಇದಲ್ಲದೇ Swindon ಹಾಗೂ Orpington ಕನ್ನಡ ಕಲಿ ಮಕ್ಕಳಿಂದ ಕಾರ್ಯಕ್ರಮವನ್ನು ಕೊಡಲಾಯಿತು.

ಹಬ್ಬಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಭರತೇಶ್, ಭಾರತೀಯ ಹೈ ಕಮಿಶನ್ನಿನ ಪ್ರಥಮ ಕಾರ್ಯದರ್ಶಿ ಶ್ರೀ ಬಾಲಾಜಿ, ಭಾರತೀಯ ವಿದ್ಯಾಭವನದ ಶ್ರೀ ನಂದಕುಮಾರ್ ಮತ್ತು ಸ್ವಿ೦ಡನ್ ಕೌನ್ಸಿಲರ್ ಶ್ರೀ ಸುರೇಶ್ ಗಟ್ಟಾಪುರ್ ಆಗಮಿಸಿದ್ದರು.

ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಸಭೆಯನ್ನು ಉದ್ದೇಶಿಸಿ ಪ್ರೋತ್ಸಾಹದ ಮಾತನ್ನಾಡಿ ಕನ್ನಡಿಗರುಯುಕೆ ಕನ್ನಡ ಕಲಿ ಕಾರ್ಯಕ್ರಮದ ಯಶಸ್ವಿಗೆ ಮೂಲಭೂತ ಕಾರಣರಾದ ಸ್ವಯಂ ಸೇವಕ ಶಿಕ್ಷಕಿಯರಿಗೆ ಗುರುತಿನ ಕಾಣಿಕೆಯನ್ನು ಕೊಟ್ಟು ಗೌರವಿಸಿದರು. ಕನ್ನಡಿಗರುಯುಕೆಯ ಈ ಸಾಲಿನ “ಕನ್ನಡ ರತ್ನ” ಪಾರಿತೋಷಕ ವನ್ನು ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಕಾರ್ಯಕಾರಿ ಸಮಿತಿಯಿಂದ ಕೊಟ್ಟು ಗೌರವಿಸಲಾಯಿತು. ಇದಲ್ಲದೆ ಭಾಗವಹಿಸಿದ್ದ ಎಲ್ಲಾ ೬೦ ಪುಟಾಣಿಗಳಿಗೆ ಕನ್ನಡ ಹಬ್ಬದ ಪಾಲ್ಗೊಳ್ಳುವಿಕೆಯ ಪ್ರಮಾಣಪತ್ರ ಹಾಗೂ ಇಡೀ ವರ್ಷ ಕನ್ನಡ ಕಲಿ ಶಿಬಿರದಲ್ಲಿ ಹಾಜರಿದ್ದ ೧೫೦ ವಿದ್ಯಾರ್ಥಿಗಳಿಗೆ ಕನ್ನಡ ಪ್ರಾಧಿಕಾರದಿಂದ ಕನ್ನಡ ಕಲಿ ಪ್ರಶಸ್ತಿ ಪತ್ರವನ್ನು ಶಿಕ್ಷಕಿಯರಿಗೆ ವಿತರಿಸಲಾಯಿತು.

ಆಂಗ್ಲನಾಡಿನ ಕನ್ನಡಿಗರನ್ನು ಕನ್ನಡ ಹಬ್ಬದಲ್ಲಿ ಮನರಂಜಿಸಲು ರಂಗ ಕಲಾವಿದ, ಚಿತ್ರನಟ, ಮಜಾ ಟಾಕೀಸ್ ಖ್ಯಾತಿಯ ಹಾಸ್ಯ ಕಲಾವಿದ ಮಂಡ್ಯ ರಮೇಶ್, ಹಾಸ್ಯ ಕಲಾವಿದ, ತುಳು ರಂಗನಟ ನವೀನ ಪಡೀಲ್ ತಮ್ಮ ಹಾಸ್ಯ ಪ್ರಹಸನದಿಂದ ಹಾಗೂ ಮಹಾದೇವ ಸತ್ತಿಗೇರಿ ತಮ್ಮ ಹಾಸ್ಯ ಚಟಾಕಿಗಳಿಂದ ಸಭಿಕರನ್ನು ನಕ್ಕು ನಲಿಯುವಂತೆ ಮಾಡಿದರು. ತಮ್ಮ ಜನಪದ ಗೀತೆಯ ಸೊಗಡಿನಿಂದ ಗೋ.ನಾ.ಸ್ವಾಮಿ ಮತ್ತು ಉಚ್ಛಸ್ಥಾಯಿಯ ರಂಗಗೀತೆಗಳನ್ನು ಲೀಲಾಜಾಲವಾಗಿ ಹಾಡಿದ ಮಂಡ್ಯ ರಮೇಶ ಅವರ ಸುಪುತ್ರಿ ದಿಶಾ ರಮೇಶ್ ಸಭಿಕರನ್ನು ನಿಬ್ಬೆರಗಾಗಿ ಮೈಮರೆಯುವಂತೆ ಮಾಡಿದರು. ಕನ್ನಡ ಹಬ್ಬ ಕಾರ್ಯಕ್ರಮದ ಸಂದರ್ಭದಲ್ಲಿ ಕನ್ನಡ ಕಲಿ ಕಾರ್ಯಕ್ರಮದ ಯಶಸ್ವಿಗೆ ಸತತವಾಗಿ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಸ್ಥೆಗೆ ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿಯ ಪರವಾಗಿ ವಿಶೇಷ ಧನ್ಯವಾದವನ್ನು ತಿಳಿಸಿ ಯು ಕೆ ಕನ್ನಡಿಗರ ಬೆಂಬಲವನ್ನು ಕೋರಲಾಯಿತು.  ಕನ್ನಡ ಹಬ್ಬಕ್ಕೆ ಅತ್ಯದ್ಭುತವಾಗಿ ನಿರೂಪಣೆ ಭವ್ಯ ಕಾರ್ತಿಕ್ ಮತ್ತು ಡಾ. ಕುಮಾರ್ ನಾಯ್ಕ್ ಅವರಿಂದ ನಡೆಯಿತು.

ಕನ್ನಡ ಹಬ್ಬದ ಟೈಟಲ್ ಪ್ರಾಯೋಜಕತ್ವವನ್ನು ಬೆಂಗಳೂರಿನ OGARA ಎಂಬ ಸಂಸ್ಥೆಯು ನೀಡಿತ್ತು. ಪ್ರೀಮಿಯರ್ ಪ್ರಾಯೋಜಕತ್ವವನ್ನು Silverside Protection and Mortgages, AONE Insurance ಸಂಸ್ಥೆಗಳು ನೀಡಿದ್ದವು. HDFC, SBI UK, Lyca Mobile ಹಾಗೂ Advanced group ವಾಣಿಜ್ಯ ಸಂಸ್ಥೆಗಳು ಕೂಡ ಪ್ರಾಯೋಜಕತ್ವವನ್ನು ನೀಡಿದ್ದವು. ಲಾಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ Justevents365 ಕೂಡ ಕನ್ನಡ ಹಬ್ಬಕ್ಕೆ ತಮ್ಮ ಬೆಂಬಲ ನೀಡಿದವು. ಎಲ್ಲಾ ಪ್ರಯೋಜಕರಿಗೆ ಕನ್ನಡಿಗರುಯುಕೆ ಸಂಸ್ಥೆಯ ಕೃತಜ್ಞತೆಗಳು.

ಕನ್ನಡ ಹಬ್ಬದ ದಿನ ಕನ್ನಡಿಗರುಯುಕೆ ಸಂಸ್ಥೆಗೆ ಬೆಂಬಲ ನೀಡಿದ NRI Fourm ಬಗ್ಗೆ ಮಾಹಿತಿಯನ್ನು ನೆರೆದಿದ್ದ ಯು.ಕೆ. ಕನ್ನಡಿಗರಿಗೆ ನೀಡಿ NRK Card ಗೆ ನೋಂದಾಯಿಸಲು ಕೋರಲಾಯಿತು. ಈ ಬಾರಿಯ ರಾಜ್ಯೋತ್ಸವದ ವಿಶೇಷತೆಯೇನೆಂದರೆ ಸಂಪೂರ್ಣ ಹಬ್ಬದ ಮಾಹಿತಿ, ವಿವರಗಳು ಹಾಗೂ ಲೈವ್ ಟೆಲಿಕಾಸ್ಟ್ ನಮ್ ರೇಡಿಯೋ ಎಂಬ ಅಂತಾರಾಷ್ಟ್ರೀಯ ರೇಡಿಯೋ ಕೇಂದ್ರದ ಮೂಲಕ ೧೯೬ ದೇಶಗಳಿಗೆ ತಲುಪಿದ್ದು. ನಮ್ ರೇಡಿಯೋ ತಂಡ ಕನ್ನಡ ಹಬ್ಬಕ್ಕೆ ಬೆಂಗಳೂರಿನಿಂದ ಆಗಮಿಸಿ ಹಬ್ಬದ ವಿವರ ಹಾಗೂ ಕನ್ನಡ ಕಲಿ ಶಿಕ್ಷಕಿಯರ ಸಂದರ್ಶನ ಇನ್ನೂ ಹಲವಾರು ರೀತಿಯಲ್ಲಿ ಇವೆಂಟ್ ಪಾರ್ಟ್ನರ್ ಆಗಿ ಕಾರ್ಯನಿರ್ವಹಿಸಿದರು. ಇದಲ್ಲದೇ ಪ್ರಿಂಟ್ ಮೀಡಿಯಾ ದಲ್ಲಿ ಏಶಿಯನ್ ಲೈಟ್ ಎಂಬ ಪತ್ರಿಕೆ ಕನ್ನಡಿಗರುಯುಕೆ ಅಧಿಕೃತ ಮೀಡಿಯಾ ಪಾರ್ಟ್ನರ್ ಆಗಿ ಕಾರ್ಯನಿರ್ವಹಿಸಿದರು. ಆಗಸ್ಟ್ ತಿಂಗಳಲ್ಲಿ ಪ್ರಜಾವಾಣಿ ಹಾಗೂ ಇನ್ನಿತರ ಕನ್ನಡ ದಿನ ಪತ್ರಿಕೆಗಳು ಕನ್ನಡಿಗರುಯುಕೆ ಹಮ್ಮಿಕೊಳ್ಳುತ್ತಿರುವ ಕನ್ನಡ ಕಾರ್ಯಕ್ರಮಗಳ ಬಗ್ಗೆ ಸಾಕಷ್ಟು ವಿವರ ನೀಡಿದ್ದವು. ಎಲ್ಲಾ ಮೀಡಿಯಾ ಮಿತ್ರರಿಗೆ ಕನ್ನಡಿಗರುಯುಕೆ ತಂಡದ ಕೃತಜ್ಞತೆಗಳು.

ಈ ಬಾರಿ ೫೦ ಕ್ಕೂ ಹೆಚ್ಚು ಆಯೋಜನ ಸಮಿತಿಗೆ ಸದಸ್ಯರು ಸ್ವಯಂ ಪ್ರೇರಿತರಾಗಿ ಕನ್ನಡಿಗರುಯುಕೆ ಸಂಸ್ಥೆಯ ಜೊತೆಗೂಡಿ ನಿರಂತರವಾಗಿ ಆಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿ ಕನ್ನಡ ಹಬ್ಬದ ದಿನ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಿ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕನ್ನಡ ಹಬ್ಬ ಆಯೋಜನ ಸಮಿತಿಯ ಎಲ್ಲಾ ಸದಸ್ಯರಿಗೂ ಕನ್ನಡಿಗರುಯುಕೆ ಸಂಸ್ಥೆಯ ಕೃತಜ್ಞತೆಗಳು.

ಆಂಗ್ಲನಾಡಿನಲ್ಲಿ ಕನ್ನಡ ಭಾಷೆ ಹಾಗು ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ಕನ್ನಡಿಗರುಯುಕೆ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನಕ್ಕೆ ಯು.ಕೆ ಯಾ ಎಲ್ಲಾ ಕನ್ನಡಿಗರು ನೀಡುತ್ತಿರುವ ಬೆಂಬಲ ಹಾಗು ಸಕ್ರಿಯ ಭಾಗವಸುವಿಕೆ ಪ್ರಶಂಸಾರ್ಹ, ಅದುವೇ ನಮಗೆ ಸ್ಪೂರ್ತಿ.

ಹೊಸ ವರ್ಷ ತಮಗೆಲ್ಲ ಸಂತಸ ತರಲಿ.

 

 

 

 

Leave a Reply

Your email address will not be published. Required fields are marked *