KUK News & Events

ಕನ್ನಡ ಹಬ್ಬ ೨೦೧೭ – ಕರ್ನಾಟಕದ ಖ್ಯಾತ ಕಲಾವಿದರ ಪರಿಚಯ

ಬಹುಮುಖ ಪ್ರತಿಭೆಯ, ಹಿರಿತೆರೆಯ ಹೆಸರಾಂತ ಕಲಾವಿದ ಶ್ರೀ. ಮಂಡ್ಯ ರಮೇಶ್

“ಜಗತ್ತೇ ಒಂದು ನಾಟಕರಂಗ, ನಾವೆಲ್ಲಾ ಪಾತ್ರಧಾರಿಗಳು” ಎನ್ನುತ್ತಾರೆ ಶೇಕ್ಸಪೀಯರ್. ನಮ್ಮ ನಮ್ಮ ಪಾತ್ರವನ್ನು ದೇವರೇ ನಿರ್ಧರಿಸಿರುತ್ತಾನೆ ಎಂಬ ನಂಬಿಕೆಯೂ ಇದೆ. ಹಾಗೆ ಆತನಿಂದ ಕಲಾವಿದನ ಪಾತ್ರ ಪಡೆದು ಜೀವಿಸುತ್ತಿರುವ ಶ್ರೀ ಮಂಡ್ಯ ರಮೇಶ್, ನಟರಾಗಿ, ರಂಗ ನಿರ್ದೇಶಕರಾಗಿ, ರಂಗ ಮಂದಿರದ ನಿರ್ಮಾತ್ಯನಾಗಿ, ರಂಗ ಸಂಘಟನೆ ಮಾಡುತ್ತಲೇ ರಂಗ ಶಾಲೆಯನ್ನು ಮುನ್ನೆಡೆಸುತ್ತಾ ಆಧುನಿಕ ಕನ್ನಡ ರಂಗ ಭೂಮಿಯನ್ನು ವಿವಿಧ ಆಯಾಮಗಳಲ್ಲಿ ವಿತ್ತರಿಸುತ್ತಿದ್ದಾರೆ. ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ಕರ್ನಾಟಕ ರಾಜ್ಯದ ಒಳಗೂ ಹಾಗೂ ಹೊರಗಣ ರಂಗ ಪ್ರದರ್ಶನಗಳನ್ನು ನಿರಂತರವಾಗಿ ಮಾಡಿಸುತ್ತಲೇ ಇರುವ ರಮೇಶರವರ ಕ್ರಿಯಾಶೀಲತೆ ಹಾಗೂ ವೃತ್ತಿಪರತೆ ಮಾದರಿಯಾಗುವಂತಹದು.

ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲೂ ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡಿಗರ ಮನಸೂರೆಗೊಂಡಿದ್ದಾರೆ. ಅತ್ಯಂತ ಆಸಕ್ತಿ ಹಾಗೂ ಪರಿಶ್ರಮದಿಂದ ಮೈಸೂರಿನಲ್ಲಿ ಸ್ವಂತದ್ದಾದ ಸುಸಜ್ಜಿತ “ನಟನ” ರಂಗಮಂದಿರವನ್ನು ನಿರ್ಮಿಸಿ ಹಲವಾರು ನಾಟಕಗಳ ಪ್ರದರ್ಶನಕ್ಕೆ ವೇದಿಕೆ ನಿರ್ಮಿಸಿದ್ದು ರಮೇಶರವರ ಅಸಾಧಾರಣ ಸಾಧನೆಯಾಗಿದೆ. “ನಟನ” ರಂಗಶಾಲೆಯ ಮೂಲಕ ಯುವಕರಿಗೆ ರಂಗತರಬೇತಿ ಕೊಡುತ್ತಾ ಕಲಾವಿದರು ಹಾಗೂ ತಂತ್ರಜ್ಞರನ್ನು ರೂಪಿಸುತ್ತಿರುವ ರಮೇಶ್ರವರ ರಂಗಕೆಲಸ ಸ್ಮರಣೀಯವಾಗಿದೆ.
ಸಿನಿಮಾ ಕ್ಷೇತ್ರದಲ್ಲಿ ರಮೇಶರವರ ಕೊಡುಗೆ ಅಪಾರವಾದದ್ದು. ಸುಮಾರು 150 ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜನುಮದ ಜೋಡಿ, ನಾಗಮಂಡಲ, ಕನಸುಗಾರ, ಒಗ್ಗರಣೆ ಹಾಗೂ ಇಷ್ಟಕಾಮ್ಯ ಇವರು ನಟಿಸಿದ ಕೆಲವು ಪ್ರಮುಖ ಚಿತ್ರಗಳು. ಕಿರುತೆರೆಯ ಕಲರ್ಸ್ ಕನ್ನಡದ “ಮಜಾ ಟಾಲ್ಕಿಸ್” ನಲ್ಲಿ ಮಂಡ್ಯ ಮುದ್ದೇಶ ಯಾರಿಗೆ ಗೊತ್ತಿಲ್ಲ ಹೇಳಿ?
ಸಂಸ್ಕಾರ ಭಾರತಿ ನಾಟ್ಯ ಸಮಾರೋಹ ಅವಾರ್ಡ್, ಕರ್ನಾಟಕ ಸ್ಟೇಟ್ ಅವಾರ್ಡ್ ಬೆಸ್ಟ್ ಆಕ್ಟರ್, ಆರ್ಯಭಟ ಅವಾರ್ಡ್, ಕೆ ವಿ ಶಂಕರೇ ಗೌಡ ಥೀಯೇಟರ್ ಅವಾರ್ಡ್ ಹೀಗೆ ಹಲವಾರು ಪ್ರಶಸ್ತಿ ವಿಜೇತರಾದ ಶ್ರೀ ಮಂಡ್ಯ ರಮೇಶ್ ಈ ವರ್ಷ ನವೆಂಬರ್ನಲ್ಲಿ ಕನ್ನಡಿಗರು ಯು. ಕೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಹಬ್ಬ ೨೦೧೭ ನೇ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಅತಿಥಿ ಕಲಾವಿದರಾಗಿ ಲಂಡನ್ ಬರುತ್ತಿರುವದು ಹೆಮ್ಮೆಯ ವಿಷಯ. ಕನ್ನಡಿಗರು ಯು.ಕೆ ತಂಡದಿಂದ ಮಂಡ್ಯ ರಮೇಶ್ ಅವರಿಗೆ ಹೃದಯಪೂರ್ವಕ ಸ್ವಾಗತ.

ಜನ ಮನದ ಜಾನಪದ ಹಾಡುಗಾರ ಗೋ. ನಾ. ಸ್ವಾಮಿ

ಶ್ರೀ ಗೋ. ನಾ. ಸ್ವಾಮಿ ಅವರು ತೆರೆ ಮರೆಯಲ್ಲಿ ಜಾನಪದ ಹಾಡುಗಳನ್ನು 21 ದೇಶಗಳಲ್ಲಿ ಹಾಡಿದ್ದಾರೆ. ‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಅನ್ನೋ ಮಾತಿನಂತೆ ಇವರ ಜೀವನದಲ್ಲೂ ಕೂಡ ತಾಯಿಯೇ ಮೊದಲ ಗುರುವಾಗಿದ್ದರು. ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯ ಜೊತೆ ಮದುವೆ ಮನೆಗಳಿಗೆ ಹೋಗಿ ತಾಯಿ ಹಾಡುವ ಸೋಬಾನೆ ಪದಗಳನ್ನು ಕೇಳಿಸಿಕೊಂಡು ಬೆಳೆದವರು. ಜೊತೆಗೆ ಜಾನಪದ ಹಾಡುಗಳು ಇವರ ಮನಸ್ಸಿನಲ್ಲಿ ಆಳವಾಗಿ ಬೆಳೆಯಲಾರಂಭಿಸಿತ್ತು. ಗೋ. ನಾ. ಸ್ವಾಮಿ ಅವರು 1993 ರಲ್ಲಿ ಮೊಟ್ಟ ಮೊದಲ ಬಾರಿಗೆ ಜಾನಪದ ಹಾಡುಗಳ “ಮಧುರ ಅಲೆಗಳು” ಎಂಬ ಧ್ವನಿ ಮುದ್ರಿಕೆಯನ್ನು ಹೊರ ತಂದರು.೨೦೦೭ ರಲ್ಲಿ ತಾವು ಮಾಡುತ್ತಿದ್ದ ಶಿಕ್ಷಣ ವೃತ್ತಿಯನ್ನು ಬಿಟ್ಟು ಸಂಪೂರ್ಣವಾಗಿ ಗಾಯನ ಕ್ಷೇತ್ರದಲ್ಲಿ ರೂಢಿಸಿಕೊಂಡರು.
ಇತ್ತೀಚಿಗೆ ಮೆಲ್ಬೋರ್ನ್ ನಲ್ಲಿ ನಡೆದ 13 ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಮುಖ ಜಾನಪದ ಗಾಯಕರಾಗಿ ಪಾಲ್ಗೊಂಡಿದ್ದ ಗೋ. ನಾ. ಸ್ವಾಮಿ ಇಂದು ಕನ್ನಡಿಗರು ಯು. ಕೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಹಬ್ಬ ೨೦೧೭ ನೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂಗ್ಲೆಂಡ್ ಗೆ ನವೆಂಬರ್ ತಿಂಗಳಲ್ಲಿ ಆಗಮಿಸುತ್ತಿದ್ದಾರೆ!

ತುಳುನಾಡ ಸಿನಿಮಾ ಹಾಸ್ಯ ಚಕ್ರವರ್ತಿ ಶ್ರೀ ನವೀನ ಡಿ ಪಡೀಲ್

ಶ್ರೀ ನವೀನ ಡಿ ಪಡೀಲ್ ಕರ್ನಾಟಕದ ಹೆಸರಾಂತ ಸಿನಿಮಾ ಹಾಗೂ ನಾಟಕರಂಗದ ಕಲಾವಿದರು. ಇವರು ಒಂದು ಸಾವಿರಕ್ಕೂ ಹೆಚ್ಚು ತುಳು ಹಾಗೂ ಕನ್ನಡ ಭಾಷೆಯ ನಾಟಕ ಪ್ರದರ್ಶನದಲ್ಲಿ ಬಣ್ಣ ಹಚ್ಚಿಕೊಂಡಿದ್ದಾರೆ. ಇವರ ಪ್ರತಿಭಾಶಕ್ತಿಯಿಂದ ಇವರನ್ನು ತುಳು ಭಾಷೆಯಲ್ಲಿ “ಕುಸಲ್ದರದಸ” ( King of Happiness) ಎಂದೂ ಕರೆಯಲಾಗುತ್ತದೆ. ಮುಖ್ಯವಾಗಿ ಇವರು ಹಾಸ್ಯಭರಿತ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. 1990 ರಿಂದ 2000 ವರೆಗೆ ಇವರು ತುಳು ಹಾಸ್ಯ ರಂಗಭೂಮಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದರು.
2000 ನೇ ಇಸವಿಯ ನಂತರ ನಾಟಕ ರಂಗಭೂಮಿಯ ಜೊತೆಗೆ ತುಳು ಸಿನಿಮಾ ರಂಗದಲ್ಲಿ ಕಾಣಿಸಕೊಳ್ಳತೊಡಗಿದರು. ಇವರು ಅಭಿನಯಿಸಿದ ಕೂಡ್ಲ ಕೆಫೆ ಎಂಬ 2106 ರಲ್ಲಿ ನಿರ್ಮಾಣವಾದ ತುಳು ಚಲನ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನ ಚಿತ್ರ ಮಂಡಳಿಯಿಂದ ಅತ್ಯುತ್ತಮ Supporting Actor ಪ್ರಶಸ್ತಿ ಸಿಕ್ಕಿದೆ.
ನವೀನವರ ಅಭಿನಯದ ಸಾಮರ್ಥ್ಯವು ವೈಶಾಲ್ಯವನ್ನು ಕಂಡಿದ್ದು ಇತ್ತೀಚಿನ ತುಳು ಚಲನಚಿತ್ರ ಹಾಗೂ ಕಿರುತೆರೆಯ ಕಲರ್ಸ್ ಕನ್ನಡದ “ಮಜಾ ಟಾಲ್ಕಿಸ್” ನಲ್ಲಿ. ಅತಿ ಹೆಚ್ಚು ಕನ್ನಡಿಗರ ವೀಕ್ಷಣೆಯುಳ್ಳ ಸೃಜನ್ ಅವರ ಮಜಾ ಟಾಲ್ಕಿಸ್ ನಲ್ಲಿ ಗುಂಡು ಮಾವನಾಗಿ ತುಳು ಮಿಶ್ರಿತ ಮಂಗಳೂರು ಕನ್ನಡದಲ್ಲಿ ಮಾತನಾಡುತ್ತಾ, ಕುಡಿತದ ಅಭಿನಯದಲ್ಲಿ ತೂರಾಡುತ್ತಲೇ ತಮ್ಮದೇ ಆದ ಹಾಸ್ಯದ ಟ್ರೆಂಡ್ ಒಂದನ್ನು ಸೃಷ್ಟಿಸಿ ನಗುವಿನ ಅಲೆಯಲ್ಲಿ ತೇಲಿಸುತ್ತಾರೆ. ನವ-ನವೀನ ಪಾತ್ರಗಳಲ್ಲಿ ಮಿಂಚುವ ನವೀನ ಅವರು ನಾಟಕರಂಗ, ಸಿನಿಮಾ,ಕಿರುತೆರೆ ಈ ಮೂರೂ ವಿಭಾಗವನ್ನು ಸಮಾನವಾಗಿ ನಿಭಾಯಿಸಿ ಮಿಂಚುತ್ತಿರುವ ನವೀನ ಪಡೀಲ್ ಅವರದೇ ಆದ ವಿಶೇಷವಾದ ಶೈಲಿಯಲ್ಲಿ ಜನರನ್ನು ಮನೋರಂಜಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಯುನೈಟೆಡ್ ಕನ್ನಡ ಸಂಘದ ಆಶ್ರಯದಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ನಡೆದ ವಿಶ್ವಕನ್ನಡ 13 ನೇ ಸಂಸ್ಕ್ರತಿ ಸಮ್ಮೇಳನಕ್ಕೆ ಶ್ರೀ ನವೀನ ಪಡೀಲ್ ಅವರು ಅತಿಥಿ ಕಲಾವಿದರಾಗಿ ಭಾಗವಹಿಸಿದ್ದಾರೆ.
ಈ ವರ್ಷ ನವೆಂಬರ್ನಲ್ಲಿ ಕನ್ನಡಿಗರು ಯು. ಕೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಹಬ್ಬ ೨೦೧೭ ನೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂಗ್ಲೆಂಡ್ ಗೆ ಆಗಮಿಸುತ್ತಿರುವ ನವೀನ ಅವರಿಗೆ ಯು.ಕೆ. ಕನ್ನಡಿಗರಿಂದ ಸ್ವಾಗತ.

ಅಂತಾರಾಷ್ಟ್ರೀಯ ಮಟ್ಟದ ಸಮರ್ಥ ಹಾಸ್ಯ ಕಲಾವಿದ ಶ್ರೀ ಮಹಾದೇವ ಸತ್ತಿಗೇರಿ

ಶ್ರೀ ಮಹಾದೇವ ಸತ್ತಿಗೇರಿಯವರು ಜನಿಸಿದ್ದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಗುಂದ ಗ್ರಾಮದಲ್ಲಿ. ಬಾಲ್ಯದಲ್ಲೇ ಹಾಸ್ಯಪ್ರಜ್ಞೆ ಹೊಂದಿರುವ ಸತ್ತಿಗೇರಿಯವರು ಪಿ.ಯು.ಸಿ ಮುಗಿದ ನಂತರ ಟಿ.ಸಿ.ಎಚ್ ಕೋರ್ಸನ್ನು ಮುಗಿಸಿ, ಬೆಳ್ಳಿಗೆಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆರಂಭದಲ್ಲೇ ಹಾಸ್ಯದಲ್ಲಿ ಅಪಾರ ಅಭಿರುಚಿ ಹೊಂದಿದ್ದ ಶ್ರೀ ಸತ್ತಿಗೇರಿಯವರು ಹಾಸ್ಯಲೋಕದ ಮಹಾ ದಿಗ್ಗಜರೆನಿಸಿಕೊಂಡ, ಶ್ರೀಯುತ ಗಂಗಾವತಿ ಪ್ರಾಣೇಶರವರ ಹಾಸ್ಯಭಾವ ವೈಖರಿಯಿಂದ ಪ್ರೇರಿತರಾದಂತವರು. ಇಂದು ಪ್ರಾಣೇಶವರನ್ನೇ ಮಹಾನ್ ಗುರುವಾಗಿ ಪಡೆದಿದ್ದಾರೆ.
ವೃತ್ತಿಯಿಂದ ಶಿಕ್ಷಕರಾದರೂ ಪ್ರವತ್ತಿಯಲ್ಲಿ ಹಾಸ್ಯ ಕಲಾವಿದರಾಗಿ ಬಹುಮುಖ ಪ್ರತಿಭೆಗಳನ್ನು ಹೊಂದಿರುವ ಸತ್ತಿಗೇರಿಯವರು ಧಾರವಾಡದ ಅನೇಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈಗಾಗಲೇ ಇವರು ದುಬೈ-ಅಬುದಾಬಿ, ಶಾರ್ಜಾ,ಇಂಡೋನೇಷ್ಯಾ ಹಾಗೂ ಕೀನ್ಯಾ ಮುಂತಾದ ರಾಷ್ಟ್ರಗಳಲ್ಲಿರುವ ಕನ್ನಡ ಸಂಘಗಳಲ್ಲಿ ಹಾಸ್ಯ ಕಾರ್ಯಕ್ರಮ ನೀಡಿದ್ದಾರೆ. ಉದಯ ಟಿ.ವಿ ಯಲ್ಲಿ ನಗೆ ಸಕತ್ ಸವಾಲ್, ಈ ಟಿ. ವಿ. ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು,ಟಿವಿ 9 ನಲ್ಲಿ ಕಾಮಿಡಿ ಪ್ರಪಂಚ ಹೀಗೆ ಇನ್ನೂ ಹಲವಾರು ಚಾನೆಲ್ ಗಳಲ್ಲಿ ಮಹದೇವ್ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ಯುನೈಟೆಡ್ ಕನ್ನಡ ಸಂಘದ ಆಶ್ರಯದಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ನಡೆದ ವಿಶ್ವಕನ್ನಡ 13 ನೇ ಸಂಸ್ಕ್ರತಿ ಸಮ್ಮೇಳನದ ಹಾಸ್ಯಗೋಷ್ಠಿಯಲ್ಲಿ ಭಾಗವಹಿಸಿ ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕ್ರತಿಯನ್ನು ಪ್ರತಿಬಿಂಬಿಸುವ ಹಾಸ್ಯ ಕಾರ್ಯಕ್ರಮವನ್ನು ನೀಡಿ, ಕನ್ನಡ ಚಿತ್ರರಂಗ ಕಂಡ ಅದ್ಭುತ ನಾದಬ್ರಹ್ಮ ಶ್ರೀ ಹಂಸಲೇಖ ಅವರಿಂದ ಪ್ರಶಸ್ತಿ ಪಡೆದ ಮಹನೀಯ; ಅಂತಾರಾಷ್ಟ್ರೀಯ ಮಟ್ಟದ ಹಾಸ್ಯ ಕಲಾವಿದ, ಶ್ರೀ ಮಹಾದೇವ ಸತ್ತಿಗೇರಿಯವರು.
ಈ ವರ್ಷ ನವೆಂಬರ್ನಲ್ಲಿ ಕನ್ನಡಿಗರು ಯು. ಕೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಹಬ್ಬ ೨೦೧೭ ನೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂಗ್ಲೆಂಡ್ ಗೆ ಆಗಮಿಸುತ್ತಿದ್ದಾರೆ!

ಅರಳು ಪ್ರತಿಭೆ ದಿಶಾ ರಮೇಶ್

ಅಪ್ಪ: ಶ್ರೀ ಮಂಡ್ಯ ರಮೇಶ್, ಅಮ್ಮ: ಶ್ರೀಮತಿ ಸರೋಜಾ ಹೆಗಡೆ.ರಂಗಭೂಮಿಯ ಸೈಡ್ ವಿಂಗ್ ನಲ್ಲಿಯೇ ಆಡಿ ಬೆಳೆದ ಪುಟ್ಟ ಹುಡುಗಿ ದಿಶಾಗೆ ಸಹಜವಾಗಿ ರಂಗಾಸಕ್ತಿ ಅನ್ನುವುದು ಬದುಕಿನ ಧರ್ಮವಾಗಿ ಬಿಟ್ಟಿದೆ. ‘ಗೋವಿನಹಾಡು’ ಪುಟ್ಟು ಕರುವಾಗಿ ಅಡಿ ಇಟ್ಟ ದಿಶಾಗೆ ಗಾಯನದ ಮೊದಲ ಗುರು ಶ್ರೀ ರಾಜು ಅನಂತಸ್ವಾಮಿ. ರಂಗಸ್ಥಳದಲ್ಲಿ ಹಾಡುತ್ತಾ ಆಡುತ್ತಾ ಬೆಳೆದ ಪೋರಿ ಸದ್ಯದ ಕರ್ನಾಟಕ ರಂಗಭೂಮಿಯ ಅತ್ಯಂತ ಭರವಸೆಯ ನಟಿಯಾಗಿ ರೂಪುಗೊಂಡಿದ್ದಾರೆ. ಮಂಡ್ಯ ರಮೇಶರಿಂದ ಆದಿಯಾಗಿ, ಭಾರತದ ಸರ್ವಶ್ರೇಷ್ಠ ನಿರ್ದೇಶಕರಾದ ಶ್ರೀ ಪ್ರಸನ್ನ, ಶ್ರೀ ಚಿದಂಬರರಾವ್ ಜಂಬೆ, ಶ್ರೀಮತಿ ಬಿ. ಜಯಶ್ರೀ, ಶ್ರೀ ಬಿ. ಸುರೇಶ, ಶ್ರೀ ಶ್ರೀಪಾದ್ ಭಟ್ ಮುಂತಾದ ರಂಗಪ್ರಮುಖರೊಂದಿಗೆ ದುಡಿದ ಅನುಭವಗೊಳಿಸಿಕೊಂಡಿದ್ದಾರೆ.
ಚಾಮಚೆಲುವೆಯ ಕೋರನಂಜಿ ಮತ್ತು ಚಾಮುಂಡಿ, ಹ್ಯಾಮ್ಲೆಟ್ ಬಫಿಲಿಯಾ, ಚರಣದಾಸ ದಾಸದ ಸಖಿ, ಸುಭದ್ರಾ ಕಲ್ಯಾಣದ ಸುಭದ್ರೆ, ಕೆಂಪುಕಣಿಗಿಲೆಯ ಪ್ರಧಾನ ಪಾತ್ರ…. ನೂರಾರು ನಾಟಕಗಳ ಅಸಂಖ್ಯಾತ ಪಾತ್ರಗಳಲ್ಲಿ ಅವಿಸ್ಮರಣೀಯ ಅಭಿನಯ ನೀಡಿದ್ದಾರೆ. ಗಾಯಕಿಯಾಗಿ ಹೆಸರು ಮಾಡಿದ್ದಾರೆ.
N.S.D ಉತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ. ರಾಷ್ಟ್ರಪತಿಯೆದುರು ರಂಗಗೀತೆ ಹಾಡಿ ಸೈ ಅನಿಸಿಕೊಂಡಿದ್ದಾರೆ.
ಅಮೆರಿಕಾದ KKNC ಅಭಿನಯ ತರಬೇತಿ ಶಿಭಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕನ್ನಡಿಗರಿಗೆ ಹೆಮ್ಮೆ ಮಾಡಿಸಿದ್ದಾರೆ. 2016 ರಲ್ಲಿ ಸಿಂಗಾಪುರ ಸಿಂಗರ ಕನ್ನಡ ಸಂಸ್ಕೃತಿ ಉತ್ಸವದ ಎರಡು ನಾಟಕಗಳಲ್ಲಿ ಪ್ರಧಾನ ಪಾತ್ರವಹಿಸಿ ಅಲ್ಲಿನ ಕನ್ನಡಿಗರಿಗೆ ಮೆಚ್ಚಿನ ನಟಿಯಾಗಿದ್ದಾರೆ. ನಟ ರಂಗಶಾಲೆಯಲ್ಲಿ ರಂಗಾಗಾಯನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಾ, ಪತ್ರಿಕೋದ್ಯಮದಲ್ಲೂ ಪದವೀಧರೆಯಾಗಿದ್ದು, ಪ್ರಸ್ತುತ Dr ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ವಿದ್ಯಾರ್ಥಿನಿಯಾಗಿದ್ದು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರಂಗಗೀತೆಗಳ ಕಾರ್ಯಕ್ರಮ ನೀಡಿ ಜನಪ್ರಿಯರಾಗಿದ್ದಾರೆ.
ಪ್ರಕಾಶ್ ರೈ ನಟಿಸಿರುವ ಬಿ. ಸುರೇಶ ನಿರ್ದೇಶನದ ‘ದೇವರ ನಾಡಲ್ಲಿ’ ಕನ್ನಡ ಚಲನ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ವರ್ಷ ನೋವೆಂಬರನಲ್ಲಿ ಕನ್ನಡಿಗರು ಯು. ಕೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಹಬ್ಬ ೨೦೧೭ ನೇ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಅತಿಥಿ ಕಲಾವಿದರಾಗಿ ದಿಶಾ ರಮೇಶ್ ಲಂಡನ್ ಬರುತ್ತಿರುವದು ಹೆಮ್ಮೆಯ ವಿಷಯ. ಕನ್ನಡಿಗರು ಯು.ಕೆ ತಂಡದಿಂದ ದಿಶಾ ರಮೇಶ್ ಅವರಿಗೆ ಹೃದಯಪೂರ್ವಕ ಸ್ವಾಗತ.

ಬನ್ನಿ, ಕನ್ನಡ ನಾಡಿನ ಜಾನಪದ, ಕಲೆ, ನಾಟಕ, ಸಂಗೀತ ಮತ್ತು ಸಂಭ್ರಮದ ಜಾತ್ರೆಯಲ್ಲಿ ಜೊತೆಗೂಡಿ!

Leave a Reply

Your email address will not be published. Required fields are marked *