KUK News & Events

ಕನ್ನಡ ಹಬ್ಬ ೨೦೧೭ – ತುಳುನಾಡ ಸಿನಿಮಾ ಹಾಸ್ಯ ಚಕ್ರವರ್ತಿ ಶ್ರೀ ನವೀನ ಡಿ ಪಡೀಲ್

ಶ್ರೀ ನವೀನ ಡಿ ಪಡೀಲ್ ಕರ್ನಾಟಕದ ಹೆಸರಾಂತ ಸಿನಿಮಾ ಹಾಗೂ ನಾಟಕರಂಗದ ಕಲಾವಿದರು. ಇವರು ಒಂದು ಸಾವಿರಕ್ಕೂ ಹೆಚ್ಚು ತುಳು ಹಾಗೂ ಕನ್ನಡ ಭಾಷೆಯ ನಾಟಕ ಪ್ರದರ್ಶನದಲ್ಲಿ ಬಣ್ಣ ಹಚ್ಚಿಕೊಂಡಿದ್ದಾರೆ. ಇವರ ಪ್ರತಿಭಾಶಕ್ತಿಯಿಂದ ಇವರನ್ನು ತುಳು ಭಾಷೆಯಲ್ಲಿ “ಕುಸಲ್ದರದಸ” ( King of Happiness) ಎಂದೂ ಕರೆಯಲಾಗುತ್ತದೆ. ಮುಖ್ಯವಾಗಿ ಇವರು ಹಾಸ್ಯಭರಿತ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. 1990 ರಿಂದ 2000 ವರೆಗೆ ಇವರು ತುಳು ಹಾಸ್ಯ ರಂಗಭೂಮಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದರು.
2000 ನೇ ಇಸವಿಯ ನಂತರ ನಾಟಕ ರಂಗಭೂಮಿಯ ಜೊತೆಗೆ ತುಳು ಸಿನಿಮಾ ರಂಗದಲ್ಲಿ ಕಾಣಿಸಕೊಳ್ಳತೊಡಗಿದರು. ಇವರು ಅಭಿನಯಿಸಿದ ಕೂಡ್ಲ ಕೆಫೆ ಎಂಬ 2106 ರಲ್ಲಿ ನಿರ್ಮಾಣವಾದ ತುಳು ಚಲನ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನ ಚಿತ್ರ ಮಂಡಳಿಯಿಂದ ಅತ್ಯುತ್ತಮ Supporting Actor ಪ್ರಶಸ್ತಿ ಸಿಕ್ಕಿದೆ.
ನವೀನವರ ಅಭಿನಯದ ಸಾಮರ್ಥ್ಯವು ವೈಶಾಲ್ಯವನ್ನು ಕಂಡಿದ್ದು ಇತ್ತೀಚಿನ ತುಳು ಚಲನಚಿತ್ರ ಹಾಗೂ ಕಿರುತೆರೆಯ ಕಲರ್ಸ್ ಕನ್ನಡದ “ಮಜಾ ಟಾಲ್ಕಿಸ್” ನಲ್ಲಿ. ಅತಿ ಹೆಚ್ಚು ಕನ್ನಡಿಗರ ವೀಕ್ಷಣೆಯುಳ್ಳ ಸೃಜನ್ ಅವರ ಮಜಾ ಟಾಲ್ಕಿಸ್ ನಲ್ಲಿ ಗುಂಡು ಮಾವನಾಗಿ ತುಳು ಮಿಶ್ರಿತ ಮಂಗಳೂರು ಕನ್ನಡದಲ್ಲಿ ಮಾತನಾಡುತ್ತಾ, ಕುಡಿತದ ಅಭಿನಯದಲ್ಲಿ ತೂರಾಡುತ್ತಲೇ ತಮ್ಮದೇ ಆದ ಹಾಸ್ಯದ ಟ್ರೆಂಡ್ ಒಂದನ್ನು ಸೃಷ್ಟಿಸಿ ನಗುವಿನ ಅಲೆಯಲ್ಲಿ ತೇಲಿಸುತ್ತಾರೆ. ನವ-ನವೀನ ಪಾತ್ರಗಳಲ್ಲಿ ಮಿಂಚುವ ನವೀನ ಅವರು ನಾಟಕರಂಗ, ಸಿನಿಮಾ,ಕಿರುತೆರೆ ಈ ಮೂರೂ ವಿಭಾಗವನ್ನು ಸಮಾನವಾಗಿ ನಿಭಾಯಿಸಿ ಮಿಂಚುತ್ತಿರುವ ನವೀನ ಪಡೀಲ್ ಅವರದೇ ಆದ ವಿಶೇಷವಾದ ಶೈಲಿಯಲ್ಲಿ ಜನರನ್ನು ಮನೋರಂಜಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಯುನೈಟೆಡ್ ಕನ್ನಡ ಸಂಘದ ಆಶ್ರಯದಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ನಡೆದ ವಿಶ್ವಕನ್ನಡ 13 ನೇ ಸಂಸ್ಕ್ರತಿ ಸಮ್ಮೇಳನಕ್ಕೆ ಶ್ರೀ ನವೀನ ಪಡೀಲ್ ಅವರು ಅತಿಥಿ ಕಲಾವಿದರಾಗಿ ಭಾಗವಹಿಸಿದ್ದಾರೆ.
ಈ ವರ್ಷ ನವೆಂಬರ್ನಲ್ಲಿ ಕನ್ನಡಿಗರು ಯು. ಕೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಹಬ್ಬ ೨೦೧೭ ನೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂಗ್ಲೆಂಡ್ ಗೆ ಆಗಮಿಸುತ್ತಿರುವ ನವೀನ ಅವರಿಗೆ ಯು.ಕೆ. ಕನ್ನಡಿಗರಿಂದ ಸ್ವಾಗತ.

Leave a Reply

Your email address will not be published. Required fields are marked *