KUK News & Events

ಕನ್ನಡ ಹಬ್ಬ ೨೦೧೭ – ಅಂತಾರಾಷ್ಟ್ರೀಯ ಮಟ್ಟದ ಸಮರ್ಥ ಹಾಸ್ಯ ಕಲಾವಿದ ಶ್ರೀ ಮಹಾದೇವ ಸತ್ತಿಗೇರಿ

ಶ್ರೀ ಮಹಾದೇವ ಸತ್ತಿಗೇರಿಯವರು ಜನಿಸಿದ್ದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಗುಂದ ಗ್ರಾಮದಲ್ಲಿ. ಬಾಲ್ಯದಲ್ಲೇ ಹಾಸ್ಯಪ್ರಜ್ಞೆ ಹೊಂದಿರುವ ಸತ್ತಿಗೇರಿಯವರು ಪಿ.ಯು.ಸಿ ಮುಗಿದ ನಂತರ ಟಿ.ಸಿ.ಎಚ್ ಕೋರ್ಸನ್ನು ಮುಗಿಸಿ, ಬೆಳ್ಳಿಗೆಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆರಂಭದಲ್ಲೇ ಹಾಸ್ಯದಲ್ಲಿ ಅಪಾರ ಅಭಿರುಚಿ ಹೊಂದಿದ್ದ ಶ್ರೀ ಸತ್ತಿಗೇರಿಯವರು ಹಾಸ್ಯಲೋಕದ ಮಹಾ ದಿಗ್ಗಜರೆನಿಸಿಕೊಂಡ, ಶ್ರೀಯುತ ಗಂಗಾವತಿ ಪ್ರಾಣೇಶರವರ ಹಾಸ್ಯಭಾವ ವೈಖರಿಯಿಂದ ಪ್ರೇರಿತರಾದಂತವರು. ಇಂದು ಪ್ರಾಣೇಶವರನ್ನೇ ಮಹಾನ್ ಗುರುವಾಗಿ ಪಡೆದಿದ್ದಾರೆ.
ವೃತ್ತಿಯಿಂದ ಶಿಕ್ಷಕರಾದರೂ ಪ್ರವತ್ತಿಯಲ್ಲಿ ಹಾಸ್ಯ ಕಲಾವಿದರಾಗಿ ಬಹುಮುಖ ಪ್ರತಿಭೆಗಳನ್ನು ಹೊಂದಿರುವ ಸತ್ತಿಗೇರಿಯವರು ಧಾರವಾಡದ ಅನೇಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈಗಾಗಲೇ ಇವರು ದುಬೈ-ಅಬುದಾಬಿ, ಶಾರ್ಜಾ,ಇಂಡೋನೇಷ್ಯಾ ಹಾಗೂ ಕೀನ್ಯಾ ಮುಂತಾದ ರಾಷ್ಟ್ರಗಳಲ್ಲಿರುವ ಕನ್ನಡ ಸಂಘಗಳಲ್ಲಿ ಹಾಸ್ಯ ಕಾರ್ಯಕ್ರಮ ನೀಡಿದ್ದಾರೆ. ಉದಯ ಟಿ.ವಿ ಯಲ್ಲಿ ನಗೆ ಸಕತ್ ಸವಾಲ್, ಈ ಟಿ. ವಿ. ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು,ಟಿವಿ 9 ನಲ್ಲಿ ಕಾಮಿಡಿ ಪ್ರಪಂಚ ಹೀಗೆ ಇನ್ನೂ ಹಲವಾರು ಚಾನೆಲ್ ಗಳಲ್ಲಿ ಮಹದೇವ್ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ಯುನೈಟೆಡ್ ಕನ್ನಡ ಸಂಘದ ಆಶ್ರಯದಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ನಡೆದ ವಿಶ್ವಕನ್ನಡ 13 ನೇ ಸಂಸ್ಕ್ರತಿ ಸಮ್ಮೇಳನದ ಹಾಸ್ಯಗೋಷ್ಠಿಯಲ್ಲಿ ಭಾಗವಹಿಸಿ ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕ್ರತಿಯನ್ನು ಪ್ರತಿಬಿಂಬಿಸುವ ಹಾಸ್ಯ ಕಾರ್ಯಕ್ರಮವನ್ನು ನೀಡಿ, ಕನ್ನಡ ಚಿತ್ರರಂಗ ಕಂಡ ಅದ್ಭುತ ನಾದಬ್ರಹ್ಮ ಶ್ರೀ ಹಂಸಲೇಖ ಅವರಿಂದ ಪ್ರಶಸ್ತಿ ಪಡೆದ ಮಹನೀಯ; ಅಂತಾರಾಷ್ಟ್ರೀಯ ಮಟ್ಟದ ಹಾಸ್ಯ ಕಲಾವಿದ, ಶ್ರೀ ಮಹಾದೇವ ಸತ್ತಿಗೇರಿಯವರು.
ಈ ವರ್ಷ ನವೆಂಬರ್ನಲ್ಲಿ ಕನ್ನಡಿಗರು ಯು. ಕೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಹಬ್ಬ ೨೦೧೭ ನೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂಗ್ಲೆಂಡ್ ಗೆ ಆಗಮಿಸುತ್ತಿದ್ದಾರೆ!

Leave a Reply

Your email address will not be published. Required fields are marked *