Kannada Development Kannada Kali Harrow KUK News & Events

ಸಂಕ್ರಾಂತಿಯ ಸಂಭ್ರಮದಲ್ಲಿ “ಕನ್ನಡ ಕಲಿ ಹ್ಯಾರೋ” ಪುನರಾರಂಭ!

“ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎನ್ನುವ ಕವಿವಾಣಿಯನ್ನು ಅನುಸರಿಸಿ  ನಿರಂತರವಾಗಿ ಯುನೈಟೆಡ್ ಕಿಂಗ್ಡಮ್ ನ ಕನ್ನಡಿಗರಿಗೆ ಮಾತೃ  ಭಾಷೆಯ ಜೊತೆಗಿನ ಕೊಂಡಿ ಕಳಚದಂತೆ ನೋಡಿಕೊಳ್ಳುವುದಷ್ಟೇ ಅಲ್ಲ, ಕನ್ನಡವೇ ಕನ್ನಡಿಯಾಗಿ ಪ್ರತಿಫಲಿಸುವಂತಾ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಒದಗಿಸುತ್ತಾ ಬರುತ್ತಿದ್ದಾರೆ ಕನ್ನಡಿಗರುಯುಕೆ ತಂಡದವರು.
IMG_3401

ಕಳೆದ ಶನಿವಾರ ದಿನಾಂಕ ೧೪ -೦೧ -೨೦೧೭, ಮಕರ ಸಂಕ್ರಾತಿಯ ಶುಭ ದಿನದಲ್ಲಿ ಹ್ಯಾರೋ “ಕನ್ನಡ ಕಲಿ” ಎರಡನೇ ಆವರ್ತದ  ತರಗತಿ  ೬೦ ಕ್ಕೂ ಹೆಚ್ಚು ಮಕ್ಕಳು ಹಾಗು ಪೋಷಕರ ಉಪಸ್ಥಿತಿಯಲ್ಲಿ ಪುನರಾರಂಭವಾಯಿತು!  “ಕನ್ನಡ ಕಲಿ” ಎಂಬ ಕನ್ನಡ ತರಬೇತಿ ಕಾರ್ಯಕ್ರಮ ಇಲ್ಲಿಯೇ ಹುಟ್ಟಿ ಬೆಳೆಯುತ್ತಿರುವ (ಕನ್ನಡಿಗರ) ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಶುರುವಾಗಿದೆ.

ಈ ತರಬೇತಿ ಕೆಲವು ವರ್ಷದ ಹಿಂದೆ ಹ್ಯಾರೋ ನಲ್ಲಿಯೇ ಪ್ರ-ಪ್ರಥಮವಾಗಿ ಕನ್ನಡಿಗರುಯುಕೆಯ ಯೋಜನೆಯಡಿಯಲ್ಲಿ   ಕನ್ನಡ ಪ್ರಾಧಿಕಾರ ಬೆಂಬಲದಿಂದ ಶುರುವಾಗಿತ್ತು.  ಸದ್ಯದಲ್ಲಿ ಇಂಗ್ಲೆಂಡಿನಾದ್ಯಂತ ಕನ್ನಡಿಗರುಯುಕೆಯ “ಕನ್ನಡ ಕಲಿ” ಯೋಜನೆ  ಇಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ವಿಶೇಷ ಗಮನ ಸೆಳೆದಿದೆ! ಬೇಸಿಂಗ್ ಸ್ಟೋಕ್, ಸ್ಲೋವ್, ಮಿಲ್ಟನ್ ಕೀನ್ಸ್   ಹಾಗು ಇಲ್ಫೊರ್ಡ್ ನಲ್ಲಿ ೨೦೧೫ ನಿಂದ ನಿರಂತರವಾಗಿ ಕನ್ನಡ ಕಲಿ ತರಗತಿಯನ್ನು ಕನ್ನಡಿಗರುಯುಕೆ ಸತತವಾಗಿ ನಡೆಸುತ್ತ ಬರುತ್ತಿದೆ! ಇನ್ನೂ ಹಲವಾರು ಕಡೆಯಿಂದ ಈ ಕಾರ್ಯಕ್ರಮವನ್ನು ಶುರು ಮಾಡಲು ವಿಶೇಷ ಕೋರಿಕೆ ಕೇಳಿ ಬರುತ್ತಿದೆ!

ಕನ್ನಡ ಕಲಿ ಹ್ಯಾರೋ ನಲ್ಲಿ ಪುನರಾರಂಭ ಮಾಡಿದಂತಹ ವಿಶೇಷ ಹೆಗ್ಗಳಿಕೆಗೆ ಅರ್ಹರಾದವರು ಕನ್ನಡಿಗರುಯುಕೆ. ಹ್ಯಾರೋ ಶಾಖೆಯ ಕನ್ನಡಿಗರು! IMG_3389
ಮಕರ ಸಂಕ್ರಾಂತಿಯ ಶುಭ ದಿನ ಹ್ಯಾರೋ ಕನ್ನಡಿಗರು ಅತ್ಯಂತ ಸಡಗರ ಸಂಭ್ರಮದಲ್ಲಿ ಹೊಸ ವರುಷದ ಪ್ರಯುಕ್ತ “ಕನ್ನಡ ಕಲಿ” ತರಗತಿಯ ಎರಡನೇ ಶಿಬಿರದ ಮೊದಲನೇ ಪಾಠಶಾಲೆಯನ್ನು ಆರಂಭ ಮಾಡಿದರು. “ಗಜಮುಖನೆ ಗಣಪತಿಯೇ ನಿನಗೆ ವಂದನೆ” ಹಾಡನ್ನು ಕನ್ನಡ ಕಲಿ  ತರಗತಿಯ ಚಿಣ್ಣರು  ಅತ್ಯಂತ ಸುಮಧುರವಾಗಿ ಹಾಡಿ ಕಾರ್ಯಕ್ರಮವನ್ನು ಆರಂಭ ಮಾಡಿದರು. ಎಲ್ಲರೂ ನಾಡಗೀತೆಯನ್ನು ಹಾಡಿ ಕನ್ನಡ ತಾಯಿಗೆ ವಂದನೆ ಸಲ್ಲಿಸಿದರು. ಈ ಮಧ್ಯೆ  ಕನ್ನಡಿಗರುಯುಕೆ ಸಂಸ್ಥೆಯಿಂದ ಕನ್ನಡ ಕಲಿ ಕಾರ್ಯಕ್ರಮದ ಮಹತ್ವ ಹಾಗು ಇದರ ಮುಂದಿನ ಚಟುವಟಿಕೆಯ ಬಗ್ಗೆ ಪೋಷಕರು ಹಾಗು ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡಲಾಯಿತು. ತದನಂತರ ಔಪಚಾರಿಕವಾಗಿ “ಕನ್ನಡ ಕಲಿ” ತರಗತಿ ೩೦ ನಿಮಿಷ ಕಾಲ ಶಿಕ್ಷಕರಾದ ರೂಪ ವೀರುಪ್ರಸಾದ್, ರೀನಾ ಮಾರೇಗುದ್ದಿ, ಶಿಲ್ಪಾ ಆರಾಧ್ಯ, ದೇವಿ ರಾಜೇಶ್,ಮೇನಕಾ ಯೋಗೇಶ್ ಹಾಗು ಸುಜಾತಾ ರಾಮ್ ಅವರಿಂದ ನಡೆಸಿ ಕೊಡಲಾಯಿತು. ರಾಷ್ಟ್ರ ಗೀತೆಯೊಂದಿಗೆ “ಕನ್ನಡ ಕಲಿ” ತರಗತಿಯ ಮೊದಲನೇ ಪಾಠಶಾಲೆ ಮುಕ್ತಾಯಗೊಂಡು ಸಂಕ್ರಾಂತಿ ಹಬ್ಬದ ಸಡಗರಕ್ಕೆ ಒಂದು ವಿಶೇಷ ಕಳೆ ತಂದಿದ್ದಂತೂ ನಿಜ.
ಕನ್ನಡಿಗರುಯುಕೆ ಹ್ಯಾರೋ ಶಾಖೆಯ ಎಲ್ಲಾ ಕನ್ನಡಿಗರಿಗೂ, ಅತ್ಯಂತ ಉತ್ಸಾಹ, ಆಸಕ್ತಿ ತೋರಿಸಿದ  ಎಲ್ಲಾ ಪೋಷಕರಿಗೂ ಹಾಗು ಪುಟಾಣಿ ಮಕ್ಕಳಿಗೂ ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿ ಚಿರಋಣಿ, ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.
ಜೈ ಕರ್ನಾಟಕ ಮಾತೆ!

Leave a Reply

Your email address will not be published. Required fields are marked *