KUK News & Events

ಲಂಡನ್ನಿನ ವೆಂಬ್ಲಿಯಲ್ಲಿ ಬಾರಿಸಿದ ಕನ್ನಡ ಡಿಂಡಿಂಮ…!!!

ಲಂಡನ್ನಿನ ವೆಂಬ್ಲಿ 27 ನವೆಂಬರಿನ ಭಾನುವಾರವೂ ಸದ್ದು ಮಾಡಿತು!!!!
ಓಕಿಂಗ್ ಟನ್ ಮೇನರ್ ಹಾಲ್ ನಲ್ಲಿ ಕನ್ನಡಿಗರು ಯು.ಕೆ. ಯ ( ಕೆ.ಯು.ಕೆ) ಕನ್ನಡ ರಾಜ್ಯೋತ್ಸವದ ಡಿಂಡಿಂಮ 650 ಜನ ಕನ್ನಡಿಗರೊಂದಿಗೆ 12 ನೇ ವರ್ಷವೂ ಮತ್ತೆ ಭಾರಿಸಿತು!!!

ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳ ನಾಯಕ ನಟ, ನಿರ್ದೇಶಕ ನಿರ್ಮಾಪಕ, ಟಿವಿ ನಿರೂಪಕ ರಮೇಶ್ ಅರವಿಂದ್ ಮತ್ತು ಭಾರತದ ಏಕೈಕ ಧ್ವನಿ ಗಾರುಡತಿ ಇಂದುಶ್ರೀ ರವೀಂದ್ರ ಅವರು ಈ ಸಂಭ್ರಮಕ್ಕೆ ಜೋಡಿ ಕಹಳೆ ಊದಿದರು!!

ಮಧ್ಯಾನದ ಊಟದ ನಂತರ ಸಾಂಪ್ರದಾಯಿಕ ಪೂಜೆಯೊಂದಿಗೆ ಅರಂಭವಾದ ಈ ಕಾರ್ಯಕ್ರಮದ ಮೊದಲಿಗೆ ಎಲ್ಲರೂ ಎದ್ದು ನಿಂತು ನಮ್ಮ ನಾಡ ಗೀತೆ ‘ಜೈ ಭಾರತ ಜನನಿಯ ತನುಜಾತೆ….’ಯನ್ನು ಒಕ್ಕೊರಲಿಂದ ಹಾಡಿ ಶುರುಮಾಡಿದರು. ಆಗಮಿಸಿದ್ದ ಹಲವರು ವಿಶೇಷ ಅತಿಥಿಗಳು ಜ್ಯೋತಿ ಬೆಳಗಿಸಿ ಶುಭ ಹಾರೈಸಿದರು. ಇಂಗ್ಲೆಂಡಿನಲ್ಲಿ ಬೆಳೆಯುತ್ತಿರುವ ಕನ್ನಡ ಕಂದಮ್ಮಗಳಿಗೆ ಕನ್ನಡವನ್ನು ಕಲಿಸುವ ಉದ್ದೇಶದಿಂದ ’ಕನ್ನಡ ಕಲಿ’ ತರಗತಿಗಳನ್ನು ಲಂಡನ್ನಿನ ಸುತ್ತ ಮುತ್ತಲ ಹಲವು ಜಾಗಗಳಲ್ಲಿ ನಡೆಸಲಾಗುತ್ತಿದೆ. ಆ ತರಗತಿಗಳಿಂದ ಬಂದ ಎಲ್ಲ ಮಕ್ಕಳು “ಆ ,ಆ, ಇ,ಈ ಕನ್ನಡದ ಅಕ್ಷರ ಮಾಲೆ….” ಹಾಡಿನೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶುರುಮಾಡಿದರು.

ಆಶ್ಚರ್ಯಕರವಾಗಿ ಸಭಾಂಗಣಕ್ಕೆ ತಟ್ಟನೆ ಬಂದ ಸಿನಿಮಾ ನಟ ರಮೇಶ್ ವೇದಿಕೆಗೆ ಬರದೆ ನೇರವಾಗಿ ಜನರ ನಡುವೆ ನಡೆದು ಸಭಿಕರಲ್ಲಿ ಭಾರೀ ಉತ್ಸಾಹವನ್ನು ತಂದರು. ನಂತರ ಸತತವಾಗಿ ಒಂದೂವರೆ ಗಂಟೆಗಳ ಕಾಲ ಜನರೊಡನೆ ಬೆರೆತು ತಮ್ಮ ಬಾಲ್ಯ, ಬೆಳವಣಿಗೆ, ಸಾಧನೆಗಳ ಹಾದಿಯ ಹಲವು ಮರೆಯಲಾಗದ ಕ್ಷಣಗಳನ್ನು ತಮ್ಮ ವೀಡಿಯೋ ಸಮೇತದ ಕಾರ್ಯಕ್ರಮಗಳಲ್ಲಿ ಹಂಚಿಕೊಂಡರು. ಸಭಿಕರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಕೆಯುಕೆ ಯ ಎಲ್ಲ ಸದಸ್ಯರು ಸೇರಿ ಅವರನ್ನು ಕೊನೆಯಲ್ಲಿ ಸನ್ಮಾನಿಸಿದರು.

Web_Load

ಒಂದು ಸಣ್ಣ ವಿರಾಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರೆದವು. ತಮ್ಮ ಪ್ರಸಿದ್ದ ಡಿಂಕು ಮತ್ತು ತಾತ ರ ಜೊತೆ ಎಂದಿನ ಉತ್ಸಾಹದಲ್ಲಿ ವೇದಿಕೆಗೆ ನಗುತ್ತ ಬಂದ ಇಂದುಶ್ರೀಯವರು ಎಲ್ಲ ಪ್ರಚಲಿತ ವಿದ್ಯಮಾನಗಳ ವಿಡಂಬನೆ ,ಹಾಸ್ಯಗಳೊಂದಿಗೆ ಜನರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ದರು. ಜಾದೂಗಳನ್ನು ಮಾಡಿ ನೆರೆದಿದ್ದ ಇನ್ನೂರಕ್ಕೂ ಹೆಚ್ಚು ಮಕ್ಕಳನ್ನು ನಗಿಸಿದರು.

ನಿಗದಿತ ಸಮಯಕ್ಕೆ ಶುರುವಾಗಿ,ಕೊನೆಯಾದ ಈ ಕಾರ್ಯಕ್ರಮ ಇಂಗ್ಲೆಂಡಿನ ರಾಜಧಾನಿ ಲಂಡನ್ನಿನಲ್ಲಿ ಒಂದು ದಿನದ ಮಟ್ಟಿಗೆ ನಿರುಮ್ಮಳವಾಗಿ ಕರ್ನಾಟಕವನ್ನು ಸೃಷ್ಟಿಸಿತ್ತು!!! ಕನ್ನಡ ಮಾತೆ ಕನ್ನಡಿಗರು, ಯು.ಕೆ. ಯ ಸದಸ್ಯರ ಉತ್ಸಾಹಕ್ಕೆ ಮಣಿದು ಕನ್ನಡಿಗರೆಲ್ಲರ ಕಣ್ಮಣಿಯಾಗಿ ಮೆರೆದು ನಲಿದಿದ್ದಳು!!

Report by: ಡಾ. ಪ್ರೇಮಲತ ಬಿ.

Leave a Reply

Your email address will not be published. Required fields are marked *