KUK News & Events

ಬೇಸಿಂಗ್ ಸ್ಟೋಕ್ ನಲ್ಲಿ ಕನ್ನಡಿಗರುಯುಕೆಯಿಂದ ಕನ್ನಡ ಕಲಿ

“ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎನ್ನುವ ಕವಿವಾಣಿಯನ್ನು ಅನುಸರಿಸುವ ಸಣ್ಣ ಪ್ರಯತ್ನವೆಂಬಂತೆ ಇಂಗ್ಲೆಂಡ್ ನ ಕನ್ನಡಿಗರು ಒಂದಾದ ಮೇಲೊಂದು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಇಂಗ್ಲೆಂಡ್ ನಲ್ಲಿ ನೆಲೆಸಿರುವ ಕನ್ನಡಿಗರು ಸ್ಥಾಪಿಸಿರುವ  ಕನ್ನಡಿಗರುಯುಕೆ ಸಂಸ್ಥೆ  ಇಲ್ಲಿನ ಕನ್ನಡಿಗರಿಗೆ ಮಾತೃಭಾಷೆಯ ಜೊತೆಗಿನ ಕೊಂಡಿ ಕಳಚದಂತೆ ನೋಡಿಕೊಳ್ಳುವುದಷ್ಟೇ ಅಲ್ಲ, ಕನ್ನಡವೇ ಕನ್ನಡಿಯಾಗಿ ಪ್ರತಿಫಲಿಸುವಂತಾ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಒದಗಿಸುತ್ತಾ ಬರುತ್ತಿದೆ.

ಕನ್ನಡಿಗರುಯುಕೆಯ ಹಲವಾರು ಯೋಜನೆಗಳಲ್ಲಿ “ಕನ್ನಡ ಕಲಿ” ಯೂ ಒಂದು. ನಮ್ಮ ಮಾತೃಭಾಷೆ ಇಲ್ಲಿ ವೃತ್ತಿ ನಿಮಿತ್ತ ವಲಸೆ ಬಂದಿರುವ ಪೀಳಿಗೆಗೇ ನಿಂತು ಹೋಗಬಾರದು,  ಮುಂದಿನ ಪೀಳಿಗೆಯ, ಇಲ್ಲಿಯೇ ಹುಟ್ಟಿ ಬೆಳೆಯುತ್ತಿರುವ (ಕನ್ನಡಿಗರ) ಮಕ್ಕಳಿಗೆ ಕನ್ನಡದ ಬಗ್ಗೆ ಒಲವು ಮೂಡಬೇಕು,  ಕನ್ನಡ ಕಲಿಸಬೇಕು ಎನ್ನುವ  ಉದ್ದೇಶದಿಂದ ಕನ್ನಡ ಕಲಿ ಯೋಜನೆಯನ್ನು ಕನ್ನಡಿಗರುಯುಕೆ ಪ್ರಾರಂಭಿಸಿತು. ಈ ಯೋಜನೆ ೨೦೧೨ ರಲ್ಲಿ ಮುಖ್ಯಮಂತ್ರಿ ಚಂದ್ರು ರವರಿಂದ  ಉದ್ಘಾಟಿಸಲ್ಪಟ್ಟು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಬೆಂಬಲ ಪಡೆದಿತ್ತು.  ಅಲ್ಲಿಂದ ಇಲ್ಲಿಯ ವರೆಗೆ ಹಲವು ಸ್ಥಳಗಳಲ್ಲಿ ಕನ್ನಡ ಕಲಿ ಶಿಬಿರಗಳನ್ನು ಕನ್ನಡಿಗರುಯುಕೆ ಏರ್ಪಡಿಸಿದ್ದು, ಇದಕ್ಕೆ ಸ್ಥಳೀಯ ಕನ್ನಡಿಗರು ತಮ್ಮ ಮಕ್ಕಳನ್ನು ನೊಂದಾಯಿಸುವ ಮೂಲಕ ಅಥವಾ ಶಿಕ್ಷಕರಾಗಿಯಾಗಿ   ಅತ್ಯುತ್ತಮ ಪ್ರೋತ್ಸಾಹ ನೀಡಿದ್ದಾರೆ.

Kannada_Kali2

ಕಳೆದ ಶನಿವಾರ ದಿನಾಂಕ 21-10-2015 ರಂದು ಈ ಸಂಸ್ಥೆಯ  ವತಿಯಿಂದ ಬೇಸಿಂಗ್ ಸ್ಟೋಕ್  ಅಧ್ಯಾಯದ ಮೂಲಕ  ಕನ್ನಡ ಕಲಿಯ ಇನ್ನೊಂದು ಶಿಬಿರ  ಬೇಸಿಂಗ್ ಸ್ಟೋಕ್ ನಗರದಲ್ಲಿ ಪ್ರಾರಂಭವಾಯಿತು.  ಈ ತರಗತಿಗಳು  ಜನವರಿ 2016 ರಿಂದ ಶುರುವಾಗಲಿದ್ದು ಆರಂಭಿಕ ಹಂತದಲ್ಲಿನ ಮಕ್ಕಳಿಗೆ ಅ ಆ ಇ ಈ ಕಲಿಸುವುದರಿಂದ ಶುರುವಾಗಿ ಎರಡು ಮತ್ತು ಮೂರನೇ ಹಂತಗಳಲ್ಲಿ ಕನ್ನಡ ವಾಕ್ಯ ರಚನೆ, ವ್ಯಾಕರಣ, ಕನ್ನಡ ಭಾಷೆಯಲ್ಲಿರುವ ಮಕ್ಕಳ ಕಥೆಗಳು, ಪದ್ಯಗಳನ್ನು ಕಲಿಸಿಕೊಡಲಾಗುತ್ತದೆ. ಜೊತೆಗೆ ಕರ್ನಾಟಕದಲ್ಲಿ ಆಚರಿಸಲ್ಪಡುವ ಪ್ರಮುಖ ಧಾರ್ಮಿಕ ಹಬ್ಬಗಳ ಬಗ್ಗೆ, ಈ ಹಬ್ಬಗಳಲ್ಲಿನ ವಿಶೇಷ ಉಡುಗೆ ತೊಡುಗೆ ಸಂಪ್ರದಾಯಗಳ ಬಗ್ಗೆಯೂ ಕೂಡ ಮಕ್ಕಳಿಗೆ ತಿಳಿಸಿಕೊಡುವ ಆಕಾಂಕ್ಷೆ ಹೊಂದಿದೆ ಈ ಕಾರ್ಯಕ್ರಮ. ಕನ್ನಡ ಕಲಿ ತರಬೇತಿ ಕಾರ್ಯಕ್ರಮದ ಇನ್ನೊಂದು ವಿಶೇಷವೆಂದರೆ ಕನ್ನಡ ಭಾಷೆಯ ಜೊತೆಗೆ ಕನ್ನಡ ಜಾನಪದದ ಸೊಗಡನ್ನೂ ಕೂಡ ಮಕ್ಕಳಿಗೆ ಪರಿಚಯಿಸುವ ಪುಟ್ಟ ಪ್ರಯತ್ನವನ್ನು ಕನ್ನಡ ಜಾನಪದ ಗೀತೆಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಈ ಕಾರ್ಯಕ್ರಮ ಮಾಡುತ್ತಿದೆ. ಅಲ್ಲದೇ, ಈ ಮಕ್ಕಳಿಗೆ ನಮ್ಮ ನಾಡಿನ ಪೌರಾಣಿಕ ಕಥೆಗಳನ್ನು, ನಮ್ಮ ಪರಂಪರೆಯನ್ನು ಪ್ರದರ್ಶಿಸುವ ನಾಟಕಗಳನ್ನು ಕೂಡ ಕಲಿಸುವ ಮಹತ್ವದ ಕಾರ್ಯವನ್ನು ಕನ್ನಡಿಗರುಯುಕೆ ಸಂಸ್ಥೆ ಅಳವಡಿಸಿಕೊಂಡಿದೆ.  ಈ ತರಗತಿಗಳು ಹಲವು ವಾರಗಳು ನಡೆಯುತ್ತದೆ. ಈ ತರಗತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮಕ್ಕಳಿಗೆ  ಕನ್ನಡಿಗರುಯುಕೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ

ಶನಿವಾರ ನಡೆದ ಕನ್ನಡ ಕಲಿ ಶಿಬಿರದ ಈ ಪ್ರಥಮದಿನ ಸಮಾರಂಭದಲ್ಲಿ ” ಕಾಡ ಹಾದಿಯ ಹೂಗಳು” ಎಂಬ ಕನ್ನಡದ ಚಲನ ಚಿತ್ರ ಕೂಡ ಪ್ರದರ್ಶಿತಗೊಂಡಿತು. ಕರ್ನಾಟಕದಲ್ಲಿನ ನಮ್ಮ ಕನ್ನಡಿಗರಿಗೆ ಉಂಟಾಗಿರುವ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಯ ಬಗೆಗಿನ ದ್ವಂದ್ವಗಳನ್ನು, ಈ ದ್ವಂದಗಳಿಂದ ಮಕ್ಕಳು ಎದುರಿಸುವ ಕಷ್ಟಗಳನ್ನು ಬಿಚ್ಚಿಡುವ ಪ್ರಯತ್ನದ ಈ  ಕಾಡ ಹಾದಿಯ ಹೂಗಳು ಪ್ರತಿಯೊಬ್ಬ ಕನ್ನಡಿಗನೂ ನೋಡಲೇಬೇಕಾದ ಚಿತ್ರ.

ಕನ್ನಡಿಗರುಯುಕೆಯ ಈ ಭಾಗಿರಥ ಪ್ರಯತ್ನ ಯಸಸ್ವಿಯಗಲಿ, ಆಂಗ್ಲನಾಡಿನ ಕನ್ನಡದ ಚಿಣ್ಣರು ಕನ್ನಡ ಭಾಷೆಯಲ್ಲಿ ಪರಿಣತರಾಗಲಿ, ತಮ್ಮ ತಾಯ್ನಾಡನ್ನು ಎಂದೂ ಮರೆಯದಿರಲಿ ಎಂದು ಹಾರೈಸೋಣವೇ?

Report by Chetana Bhat & Vinay Rao

Leave a Reply

Your email address will not be published. Required fields are marked *