KUK News & Events

ಕನ್ನಡಿಗರುಯುಕೆಯ ವಿಜೃಂಭಣೆಯ ದಶಮಾನೋತ್ಸವ – Thats Kannada Article

ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಯುಕೆಯ ಮೂಲೆಮೂಲೆಗೂ, ಮುಂದಿನ ಪೀಳಿಗೆಗೂ ಪಸರಿಸುವ ಭಗೀರಥ ಯತ್ನವನ್ನು ಕಳೆದ ಒಂಬತ್ತು ವರ್ಷಗಳಿಂದ ಮಾಡಿದ ಕನ್ನಡಿಗರುಯುಕೆಯ ದಶಮಾನೋತ್ಸವ ಹಬ್ಬವು ಅತ್ಯಂತ ಅದ್ದೂರಿ ಹಾಗೂ ವಿಜೃಂಭಣೆಯಿಂದ ಲಂಡನ್ ನ ಹೊರವಲಯದಲ್ಲಿರುವ ಸ್ಲೌವ್ ನಗರದಲ್ಲಿ 27 ಸೆಪ್ಟೆಂಬರ್, ಶನಿವಾರದಂದು ಯಶಸ್ವಿಯಾಗಿ ಜರುಗಿತು. ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೂ ನಡೆದ ಈ ಸಾಂಸ್ಕೃತಿಕ ಹಬ್ಬದಲ್ಲಿ ಸುಮಾರು 700ಕ್ಕೂ ಹೆಚ್ಚು ಕನ್ನಡಿಗರು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ತಮ್ಮ ಕುಟುಂಬ ಸಮೇತರಾಗಿ ಪಾಲ್ಗೊಂಡು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ತಮಗಿರುವ ಅಭಿಮಾನವನ್ನು ಅಭಿವ್ಯಕ್ತಪಡಿಸಿದರು. ಜೊತೆಗೆ, ಕರ್ನಾಟಕದಿಂದ ಆಗಮಿಸಿದ ಹೆಸರಾಂತ ಕಲಾವಿದರು ಮತ್ತು ಚಲನಚಿತ್ರ ತಾರೆಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮನಸಾರೆ ಸವಿದು ಪುಳಕಿತರಾದರು.

ಕನ್ನಡಿಗರುಯುಕೆಯ ವಿಜೃಂಭಣೆಯ ದಶಮಾನೋತ್ಸವಬೆಳಗ್ಗೆ 11ಕ್ಕೆ ಮಕ್ಕಳ ಕನ್ನಡ ಭಕ್ತಿ ಗೀತೆ ಹಾಗೂ ದೀಪ ಬೆಳಗುವುದರೊಂದಿಗೆ ಪ್ರಾರಂಭವಾಗಿ, ಯು.ಕೆ.ಯ ಸ್ಥಳೀಯ ಕನ್ನಡ ಪ್ರತಿಭೆಗಳ ನೃತ್ಯ, ಭರತನಾಟ್ಯದೊಂದಿಗೆ ಮುಂದುವರೆಯಿತು. ಇದಾದ ನಂತರ ವಿನಾಯಕ್ ಜೋಶಿಯವರು ಹರಟೆ with Vinayak Joshi ಕಾರ್ಯಕ್ರಮದಲ್ಲಿ ಬಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಕೃಷ್ಣೇಗೌಡರ ಭಾವಧಾರೆ : ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಕನ್ನಡ ಚಿತ್ರರಂಗದ ಉದಯೋನ್ಮುಖ ತಾರೆ, ರಾಕ್ ಸ್ಟಾರ್ ಯಶ್ ಭಾಗಿಯಾಗಿದ್ದರೆ, ಸಾಹಿತ್ಯ ಹಾಗು ಹಾಸ್ಯ ಕ್ಷೇತ್ರದ ದಿಗ್ಗಜ ಪ್ರೊ. ಕೃಷ್ಣೇಗೌಡ ಇವರು “ಭಾವಧಾರೆ” ಎಂಬ ತಮ್ಮ ವಿಶಿಷ್ಟ ಕಾರ್ಯಕ್ರಮದ ಮೂಲಕ ಕನ್ನಡ ಗೀತೆಗಳಲ್ಲಿನ ಸಾಹಿತ್ಯ ಶ್ರೀಮಂತಿಕೆಯನ್ನು ಉಣಬಡಿಸಿದರು. ಕೃಷ್ಣೇಗೌಡರ ಈ ಕಾರ್ಯದಲ್ಲಿ ವಿಜೇಂದ್ರ ಮತ್ತು ಶ್ರೀದೇವಿ ತಮ್ಮ ಸುಶ್ರಾವ್ಯ ಹಾಡುಗಾರಿಕೆಯಿಂದ ಹಾಗೂ ಅನಿಲ್ ಅವರು ಪಕ್ಕವಾದ್ಯ ತಬಲಾದೊಂದಿಗೆ ಸಹಯೋಗ ನೀಡಿದರು.

ಕನ್ನಡಿಗರುಯುಕೆಯ ವಿಜೃಂಭಣೆಯ ದಶಮಾನೋತ್ಸವಈ ಸಮಾರಂಭಕ್ಕೆ ಕಳಶವಿಟ್ಟಂತೆ, ಸಂಗೀತ ಲೋಕದ ಮಾಂತ್ರಿಕ ಗುರುಕಿರಣ್ ರವರು ತಮ್ಮ ತಂಡದ ಸದಸ್ಯರಾದ ಹಿನ್ನೆಲೆ ಗಾಯಕಿ ಅನುರಾಧ ಭಟ್, ಹಿನ್ನೆಲೆ ಗಾಯಕ ಚೇತನ್ ಸೋಸ್ಕ, ಡ್ರಮ್ ದೇವ, ಗಿಟಾರ್ ನಲ್ಲಿ ಸ್ಟೀಫನ್, ಕೀಬೋರ್ಡ್ ನಲ್ಲಿ ಸೊಲೊಮನ್ ಮತ್ತು ಒಕ್ಟೋಪ್ಯಾಡ್ ನಲ್ಲಿ ಗಣೇಶ್ ಇವರ ಸಹಯೋಗದಲ್ಲಿ ತಮ್ಮ ಕಂಠದಿಂದ ಸಂಗೀತ ಸುಧೆಯನ್ನು ಹರಿಸಿ, ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಈ ಎಲ್ಲ ಕಾರ್ಯಕ್ರಮಗಳ ನಿರೂಪಣೆ ವಿನಾಯಕ ಜೋಶಿಯವರದ್ದಾಗಿತ್ತು. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಸುಪ್ರಸಿದ್ದ ಯುವ ನಟ ರಾಕ್ ಸ್ಟಾರ್ ಯಶ್ ರವರಿಗೆ ಕನ್ನಡಿಗರುಯುಕೆ ವತಿಯಿಂದ “ಯುವಕೇಸರಿ” ಎಂಬ ಬಿರುದನ್ನೂ ಪ್ರದಾನ ಮಾಡಿ, ಇತರ ಎಲ್ಲ ಆಮಂತ್ರಿತ ಕಲಾವಿದರುಗಳನ್ನು ಯಥೋಚಿತವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡಿಗರುಯುಕೆಯ ವಿಜೃಂಭಣೆಯ ದಶಮಾನೋತ್ಸವ ಯಶ್ ಕನ್ನಡಿಗರುಯುಕೆ ಕನ್ನಡರತ್ನ : ಕನ್ನಡಿಗರುಯುಕೆಯು ಈ ವರ್ಷದಿಂದ “ಕನ್ನಡಿಗರುಯುಕೆ ಕನ್ನಡರತ್ನ” ಎಂಬ ಪಾರಿತೋಷಕವನ್ನು ಕನ್ನಡ ಕ್ಷೇತ್ರದಲ್ಲಿ ಸಾಧನೆಮಾಡಿದ ಹೆಸರಾಂತ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದಕ್ಕಾಗಿ ಪ್ರತಿಷ್ಠಾಪಿಸಲಾಯಿತು. ಇದರ ಚೊಚ್ಚಲ ಪ್ರಶಸ್ತಿ “ಕನ್ನಡಿಗರುಯುಕೆ ಕನ್ನಡರತ್ನ 2014” ಇದನ್ನು ಯಶ್ ಅವರಿಗೆ ನೀಡಿ ಗೌರವಿಸಿ ಪುರಸ್ಕರಿಸಲಾಯಿತು. ಕನ್ನಡಿಗರುಯುಕೆ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಯುಕೆಯಲ್ಲಿರುವ ಕನ್ನಡಿಗರ ಮಕ್ಕಳಿಗಾಗಿ ಆಯೋಜಿಸಿದ ಕನ್ನಡ ಕಲಿ ಕಲಿಕಾ ಕಾರ್ಯಕ್ರಮದಲ್ಲಿ ಭಾಗಿಗಳಾದ ಎಲ್ಲ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಜೊತೆಗೆ ಕಲಿಕಾ ಕಾರ್ಯಕ್ರಮಕ್ಕೆ ಪೂರಕವಾದ ಅನಿಮೇಶನ್ ವಿಡಿಯೋ ಸಾಮಗ್ರಿಗಳನ್ನು ಒದಗಿಸುವುದರ ಮೂಲಕ ಸಹಾಯ ಹಸ್ತ ನೀಡಿದ ಸೈಫೈ ಅನಿಮೇಶನ್ಸ್ ನ ರಘುರಾಮ್ ಅವರ ಸೇವೆಯನ್ನು ಅಭಿನಂದಿಸಿ ಗೌರವಿಸಲಾಯಿತು.

ಕನ್ನಡಿಗರುಯುಕೆಯ ವಿಜೃಂಭಣೆಯ ದಶಮಾನೋತ್ಸವಬಂದಿರುವ ಪ್ರೇಕ್ಷಕರಿಗೆ ಉಚಿತ ಮಧ್ಯಾಹ್ನದ ಭೋಜನ ಹಾಗೂ ರಾತ್ರಿಯ ಊಟವಲ್ಲದೆ ಲಘು ಉಪಹಾರವನ್ನೂ ಏರ್ಪಾಡು ಮಾಡಲಾಗಿತ್ತು. ಆರು ವರ್ಷದ ಕೆಳಗಿನ ಪುಟಾಣಿಗಳಿಗೆ ಪ್ರತ್ಯೇಕ ಚಟುವಟಿಕೆ, ಆಟ ಮತ್ತು ಮನರಂಜನೆಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಹೆತ್ತವರು ನಿಶ್ಚಿಂತೆಯಿಂದ ಕಾರ್ಯಕ್ರವನ್ನು ಆನಂದಿಸುವ ಅವಕಾಶವನ್ನು ಕಲ್ಪಿಸಿಕೊಡಲಾಯಿತು. ತಮ್ಮ ದೈನಂದಿನ ಕಾರ್ಯಕ್ರಮದ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಈ ಸಮಾರಂಭದ ಪರಿಕಲ್ಪನೆ, ಆಯೋಜನೆ ಮತ್ತು ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಹೊತ್ತುಕೊಂಡ ಕನ್ನಡಿಗರುಯುಕೆ ಸಂಸ್ಥೆಯ ಕಾರ್ಯಕಾರಿ ತಂಡದ ಎಲ್ಲ ಸದಸ್ಯರ ಸೇವೆ ಪ್ರಶಂಸನೀಯ. ಕನ್ನಡಿಗರುಯುಕೆ ಸಂಸ್ಥೆಯು ಮುಂದಿನ ವರ್ಷಗಳಲ್ಲಿ ಬೆಳೆದು ರಜತ ಮಹೋತ್ಸವ ಆಚರಿಸುವತ್ತ ತನ್ನ ದಾಪುಗಾಲನ್ನಿಡಲಿ ಎಂಬುದು ಕನ್ನಡಿಗರೆಲ್ಲ ಹಾರೈಕೆ, ಅಭಿಲಾಷೆ.

Read more at: http://kannada.oneindia.in/nri/article/kannadigaru-uk-celebrate-10th-anniversary-088258.html?utm_source=article&utm_medium=fb-button&utm_campaign=article-fbshare

Leave a Reply

Your email address will not be published. Required fields are marked *