KUK News & Events

Rajyotsava 2013 – Article in That’s Kannada

ಖ್ಯಾತನಾಮರಿಲ್ಲದೆಯೂ ರಂಜಿಸಿದ ಕನ್ನಡಿಗರು ಯುಕೆ ರಾಜ್ಯೋತ್ಸವ Written by: ಶ್ರೀನಿವಾಸ್ ಮಹೇಂದ್ರಕರ್ Updated: Tuesday, December 17, 2013, 18:10

ಕಳೆದ ಐದು ವರ್ಷಗಳಿಂದ ನಾನು ಮತ್ತು ನನ್ನ ಸ್ನೇಹಿತರು, ಕನ್ನಡಿಗರು ಯು ಕೆ ಆಯೋಜಿಸುತ್ತಿರುವ ಕನ್ನಡ ರಾಜ್ಯೋತ್ಸವ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದೇವೆ. ಪ್ರತಿ ಬಾರಿಯೂ ಕನ್ನಡನಾಡಿನ ಹೆಸರಾಂತ ಕಲಾವಿದರನ್ನು ಆಹ್ವಾನಿಸಿ ಆಂಗ್ಲ ನಾಡಿನ ಕನ್ನಡಿಗರಿಗೆ ಮನರಂಜನೆಯ ರಸದೌತಣವನ್ನು ನೀಡುವುದು ಕನ್ನಡಿಗರು ಯು ಕೆ ತಂಡದ ವಾಡಿಕೆಯಾಗಿತ್ತು. ಹೀಗಾಗಿ ಸಹಜವಾಗಿಯೇ ನಾವು ಈ ಬಾರಿಯೂ ಕೂಡ ಅದೇ ನಿರೀಕ್ಷೆಯಲ್ಲಿದ್ದೆವು. ಆದರೆ ವಾಡಿಕೆಯನ್ನು ಬುಡಮೇಲು ಮಾಡುವಂತೆ ಯಾವುದೇ ದೊಡ್ಡ ಹೆಸರುಗಳಿಲ್ಲದ ಕನ್ನಡಿಗರು ಯುಕೆಯ ಒಂಬತ್ತನೇ ರಾಜ್ಯೋತ್ಸವ ಕರೆಯೋಲೆ ನನ್ನ Inboxಗೆ ಬಂದು ಸೇರಿತ್ತು. ಯಾವುದೇ ದೊಡ್ಡ ದೊಡ್ಡ ಕನ್ನಡ ನಾಡಿನ ಕಲಾವಿದರಿಲ್ಲದ ಕಾರ್ಯಕ್ರಮಕ್ಕೆ ಜನರ ಬರುವಿಕೆಯ ಬಗ್ಗೆ ಅನುಮಾನ ನನ್ನೊಳಗೆ ಮನೆಮಾಡಿಬಿಟ್ಟಿತು. ನವೆಂಬರ್ 30, ಶನಿವಾರ ನನ್ನೆಲ್ಲ ಅನುಮಾನಗಳಿಗೂ ಉತ್ತರ ನೀಡುವ ದಿನ ನಮ್ಮನ್ನೆದುರಾಗಿತ್ತು. ಮಧ್ಯಾಹ್ನ 12ಕ್ಕೆ ನಾವೆಲ್ಲ ಲಂಡನ್ ಎಡ್ಜ್ ವೇರ್ ನಲ್ಲಿರುವ ಕ್ಯಾನನ್ ಪ್ರೌಢ ಶಾಲೆಗೆ ಬಂದು ಸೇರಿದೆವು. ಯು ಕೆ ಕನ್ನಡಿಗರಲ್ಲಿ ಮನೆಮಾತಾಗಿರುವ ಲೆಸ್ಟರ್ ನ ಶಿವಳ್ಳಿ ರೆಸ್ಟೊರೆಂಟ್ ನವರು ನಮಗೆಲ್ಲ ಕರ್ನಾಟಕ ಸ್ವಾದದ ಭರ್ಜರಿ ಊಟ ಬಡಿಸಲು ಸಜ್ಜಾಗಿದ್ದರು. ಹೀಗೆ ಭೋಜನ ಕಾರ್ಯಕ್ರಮ ಮಧ್ಯಾಹ್ನ 12ರಿಂದ 2.30ರವರೆಗೆ ನಡೆದಿತ್ತು. ಈ ಸಮಯದಲ್ಲಿ ಎಷ್ಟೋ ದಿನಗಳ ನಂತರ ಭೆಟ್ಟಿಯಾದ ಸ್ನೇಹಿತರೊಂದಿಗೆ ಮಾತುಕತೆಯಾಯಿತು. ಹಲವಾರು ಹೊಸ ಸ್ನೇಹಗಳ ಉಗಮವೂ ಆಯಿತು.

ಖ್ಯಾತನಾಮರಿಲ್ಲದೆಯೂ ರಂಜಿಸಿದ ಕನ್ನಡಿಗರು ಯುಕೆ ರಾಜ್ಯೋತ್ಸವ

 

ಭೋಜನ ಮುಗಿಸಿ ಕುಶಲೋಪರಿ, ಹರಟೆಯಲ್ಲಿ ತಲ್ಲೀನರಾಗಿದ್ದ ನಮಗೆ ಸಭಾಂಗಣಕ್ಕೆ ತೆರಳುವಂತೆ ಮನವಿ ಮಾಡಲಾಯಿತು. ಸಭಾಂಗಣಕ್ಕೆ ಬಂದು ಸೇರಿದಾಗ ನನಗೆ ಆಶ್ಚರ್ಯವೇ ಕಾದಿತ್ತು. ಹೌದು ನನ್ನ ಊಹೆಗೆ ವ್ಯತಿರಿಕ್ತವಾಗಿ ಸುಮಾರು 350 ಜನರ ದೊಡ್ಡ ಸಮೂಹ ಸಭಾಂಗಣದಲ್ಲಿತ್ತು. ಯಾವುದೇ ಖ್ಯಾತನಾಮರ ಸುಳಿವಿಲ್ಲದಿದ್ದರು ಇಷ್ಟೊಂದು ಕನ್ನಡಿಗರು ಸೇರಿರುವುದು, ನಿಜಕ್ಕೂ ಯು ಕೆ ಯಲ್ಲಿರುವ ಕನ್ನಡಿಗರ ನಾಡು, ನುಡಿಯ ಮೇಲಿನ ಅಭಿಮಾನಕ್ಕೆ ಕನ್ನಡಿ ಹಿಡಿದಂತಿತ್ತು. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಹೆಚ್ಚು ಅವಕಾಶ ಒದಗಿಸಿಕೊಟ್ಟಿದ್ದು ಈ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಮುಖ ಅಂಶವಾಗಿತ್ತು. ಹೊಸ ಮುಖಗಳಾದ ವೆಂಕಟ್ ಮತ್ತು ವಿನೀತ್ ರವರ ನಿರೂಪಣೆಯ ಜೊತೆಗೆ, ಕೆ ಯು ಕೆ ತಂಡದ ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ಕಾರ್ಯಕ್ರಮ ವಿಧ್ಯುಕ್ತವಾಗಿ ಆರಂಭವಾಯಿತು. ಕನ್ನಡಿಗರು ಯುಕೆಯ ಪದಾಧಿಕಾರಿಗಳು ಆಯೋಜಕರ ಪರವಾಗಿ ಎಲ್ಲರಿಗೂ ಸ್ವಾಗತ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲ್ಯಾಂಬೆತ್ ನ ಮಾಜಿ ಮೇಯರ್ ಡಾ।। ನೀರಜ್ ಪಾಟೀಲ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಸದಾನಂದ ನಾಯಕ್ ರಿಗೆ ಶಾಲು ಹೊದಿಸುವುದರ ಮೂಲಕ ಸನ್ಮಾನ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ : ನಂತರದಲ್ಲಿ ಅನೇಕ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಪ್ರಾಂಜಲರವರ ಭರತನಾಟ್ಯ ಎಲ್ಲರ ಕಣ್ ಕಟ್ಟುವಂತಿತ್ತು. ವಾಣಿ ಮಕ್ಕಳ ತಂಡದಿಂದ ಕನ್ನಡಮ್ಮನ ದೇವಾಲಯ ಹಾಡಿಗೆ ಮತ್ತು ಇನ್ನೊಂದು ಮಕ್ಕಳ ತಂಡ(ಧ್ಯಾನವಿ, ಅಕ್ಷಿತ್, ಸುರಭಿ, ಸಂಪದ, ರೋಮ, ಅನರ್ಘ್ಯ)ದಿಂದ ಮಾಯದಂತ ಮಳೆ ಬಂತಮ್ಮ ಹಾಡಿಗೆ ಹಾಕಿದ ಹೆಜ್ಜೆ ನೆರೆದವರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ವಿಜಯೇಂದ್ರ ಮತ್ತು ಶ್ರೀದೇವಿ ದಂಪತಿಗಳ ಸಭಿಕರನ್ನು ಒಳಗೊಂಡ “ನಮ್ಮೆಜ್ಮಾನ್ರಂದ್ರೆ ಸುಮ್ನೆಯಲ್ಲ” ಹಾಗು “ನಿನ್ನಂಥ ಅಪ್ಪ ಇಲ್ಲ” ಎಂಬ ವಿನೂತನ ಆಟಗಳು ಎಲ್ಲರ, ವಿಶೇಷವಾಗಿ ಮಕ್ಕಳ ಮನಗೆದ್ದವು. ಸುಮಾ, ಚಿನ್ನಾರಿ ಅನರ್ಘ್ಯ, ಸಂಜನಾ ಮತ್ತು ವಿಶ್ವನಾಥ್ ದಂಪತಿಗಳು ಹಾಡುವುದರ ಮೂಲಕ ರಂಜಿಸಿದರು. ಮಲ್ಲಿಕಾ ನೃತ್ಯ ತಂಡ ಭಾಗ್ಯದ ಬಳೆಗಾರ ಹಾಡಿಗೆ ಹೆಜ್ಜೆ ಹಾಕಿದರು. ತೇಜಸ್ ರವರು “ನಾ ಹಾಡಲು ನೀವು ಹಾಡಬೇಕು” ಹಾಡಿಗೆ ಗಿಟಾರ್ ನುಡಿಸಿದರು. ಡಾ ।। ಕಡೂರ್ ರವರು ನಿಂತು ನಗಿಸುವ ಕಾರ್ಯಕ್ರಮ ನಡೆಸಿದರು. ಭಾಸ್ಕರ್ ಮತ್ತು ತಂಡದವರು ಅಭಿನಯಿಸಿದ ಉತ್ತರ ಕರ್ನಾಟಕದ ಭಾಷೆ ಆಧಾರಿತ ಹಾಸ್ಯ ಪ್ರಹಸನ ನೆರೆದವರನ್ನು ನಗಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸ್ಥಳೀಯರೇ ಆಗಿರುವ ಹೆಸರಾಂತ ಪಿಟೀಲು ವಾದಕಿ ಡಾ॥ ಜ್ಯೋತ್ಸ್ನಾ ಶ್ರೀಕಾಂತ್ ರವರ ನೇತೃತ್ವದಲ್ಲಿ, ಷಡ್ರಾಕ್ ಸೊಲೊಮನ್, ಕಾರ್ತಿಕ್ ಮಣಿರವರನ್ನು ಒಳಗೊಂಡ ಬ್ಯಾಂಗಲೋರ್ ಡ್ರೀಮ್ಸ್ ತಂಡ ಸತತ 2 ಘಂಟೆಗಳ ಕಾಲ ಸಂಗೀತ ಸುಧೆ ಹರಿಸಿ, ನೆರೆದವರನ್ನು ತನ್ಮಯಗೊಳಿಸಿತ್ತು. ಈ ತಂಡದ ಸಂಗೀತ ಇಂಡಿಯನ್, ಕರ್ನಾಟಿಕ್, ಜಾಸ್, ಪ್ಲಮೆಂಕೊ, ಎಲೆಕ್ಟ್ರಿಕಾ, ಫಂಕ್, ಸೆಲ್ಟಿಕ್ ಜನಪದ, ಬಾಲಿವುಡ್ ಹಾಗು ರಾಕ್ ಸಂಗೀತ ಪ್ರಭೇದಗಳಲ್ಲಿ ತನ್ನ ಧ್ವನಿಯ ಬೇರುಗಳನ್ನು ಹೊಂದಿದ್ದು, ಶಾಸ್ತ್ರೀಯ ಹಾಗೂ ಸಮಕಾಲೀನ ಸಂಗೀತಗಳ ಮಿಶ್ರಣವನ್ನು ನಮ್ಮೆಲ್ಲರಿಗೆ ಉಣಬಡಿಸಿತ್ತು. ಇವುಗಳಲ್ಲಿ ಸಭಿಕರು ಹುಚ್ಚೆದ್ದು ಕುಣಿಯುವಂತಹ ಹಾಡುಗಳೂ ಇದ್ದವು. ಹೀಗೆ ಒಂದು ವಿಶಿಷ್ಟವಾದ, ನಿಜವಾದ ಕನ್ನಡಾಭಿಮಾನ ಬಿಂಬಿಸುವ, ಮನೋಲ್ಲಾಸಗೊಳಿಸುವ, ಯು ಕೆ ಯಲ್ಲಿರುವ ಕನ್ನಡಿಗರನ್ನು ಒಗ್ಗೂಡಿಸುವ ಒಂದು ಕಾರ್ಯಕ್ರಮ, ಪ್ರಾಮಾಣಿಕ ಪ್ರಯತ್ನ ನಡೆದೇ ಸಾಗಿತ್ತು. ಕೊನೆಯಲ್ಲಿ ಕೆ ಯು ಕೆ ತಂಡದ ಎಲ್ಲ ಕಾರ್ಯಕಾರಿ ಸದಸ್ಯರು ವೇದಿಕೆಗೆ ಆಗಮಿಸಿ ತಮ್ಮನ್ನು ಪರಿಚಯಿಸಿಕೊಂಡರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು. ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡ ಭಾಷೆಗೆ, ಆಂಗ್ಲ ನಾಡಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ಬದ್ಧರಾಗಿ ಕನ್ನಡ ರಾಜ್ಯೋತ್ಸವವನ್ನು ಆಯೋಜಿಸುವುದರ ಮೂಲಕ ಕನ್ನಡಿಗರು ಯು ಕೆ ತಂಡ ನಮ್ಮೆಲ್ಲರ ಹೃದಯ ಗೆದ್ದಿದೆ ಎಂದರೆ ಅತಿಶಯೋಕ್ತಿಯಾಗದು. ಅವರ ಎಲ್ಲ ಕಾರ್ಯಕ್ರಮಗಳಿಗೆ ಇನ್ನು ಹೆಚ್ಚಿನ ಬೆಂಬಲ ದೊರಕಿ, ಇನ್ನೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಬಲ ಅವರದಾಗಲಿ ಎಂಬುದು ಅಂಗ್ಲನಾಡಿನ ಕನ್ನಡಿಗರ ಆಶಯ.

Read more at: http://kannada.oneindia.in/nri/article/kannada-rajyotsava-kannadigaru-uk-london-080245.html